Karnataka Rajyotsava 2025: ರಾಜ್ಯದಲ್ಲಿಂದು 70ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ; ಆಚರಣೆ ಹೇಗಿರಲಿದೆ?
ರಾಜ್ಯ, ದೇಶ, ಹೊರನಾಡಿನ ಕನ್ನಡಿಗರೆಲ್ಲರ ಮನದಲ್ಲಿ ಈಗ ಕವಿ ಕೆ.ಎಸ್. ನಿಸಾರ್ ಅಹಮದ್ ಬರೆದಿರುವ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ... ಹಾಡು ಗುನುಗುತ್ತಿದೆ. ಯಾಕೇಂದರೆ ರಾಜ್ಯೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯ, ದೇಶದ ಗಾಡಿಯನ್ನು ಮೀರಿ ತಿಂಗಳು ಪೂರ್ತಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುವ ಈ ಹಬ್ಬದ ಮಹತ್ವ, ಹಿನ್ನೆಲೆ ಏನು ಗೊತ್ತೇ? ಕರ್ನಾಟಕ ರಾಜ್ಯದ ಏಕೀಕರಣದ ಚಿಂತನೆ ಹುಟ್ಟಿದ್ದು ಯಾವಾಗ, ಯಾರು ಇದಕ್ಕೆ ಕಾರಣ, ಯಾರೆಲ್ಲ ಇದರಲ್ಲಿ ಪಾಲ್ಗೊಂಡಿದ್ದರು, ನಾಡೋತ್ಸವವನ್ನು ಯಾವ ರೀತಿಯಲ್ಲಿ ಆಚರಿಸಲಾಗುತ್ತದೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
-
ವಿದ್ಯಾ ಇರ್ವತ್ತೂರು
Nov 1, 2025 6:00 AM
ಬೆಂಗಳೂರು: ರಾಜ್ಯಾದ್ಯಂತ ಈ ಬಾರಿ 70 ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನವಾದ (Karnataka State Foundation Day) ನವೆಂಬರ್ 1 ಅನ್ನು ಪ್ರತಿವರ್ಷದಂತೆ ಈ ಬಾರಿಯೂ ಕರ್ನಾಟಕ ರಾಜ್ಯದ 'ರಾಜ್ಯೋತ್ಸವ’ ದಿನವಾಗಿ (Karnataka Rajyotsava 2025) ಆಚರಿಸಲಾಗುತ್ತಿದೆ. ಭಾಷೆಯ ಆಧಾರದಲ್ಲಿ ದೇಶವು ರಾಜ್ಯಗಳಾಗಿ ವಿಭಜನೆಯಾದಾಗ ಕನ್ನಡ ಭಾಷಿಕರೆಲ್ಲರನ್ನೂ ಒಗ್ಗೂಡಿಸಿ ಕರ್ನಾಟಕ ರಾಜ್ಯ ಸ್ಥಾಪನೆಗೆ ನಿರ್ಧರಿಸಲಾಯಿತು. 1956ರ ನವೆಂಬರ್ 1ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸುವ ಮೂಲಕ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು.
ಕರ್ನಾಟಕ ರಾಜ್ಯೋತ್ಸವವು ರಾಜ್ಯಗಳ ಮರುಸಂಘಟನಾ ಕಾಯ್ದೆಯಡಿಯಲ್ಲಿ 1956ರಲ್ಲಿ ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನಗೊಂಡ ದಿನವನ್ನು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: Star Fashion 2025: ಬಂಗಾರದ ಬೊಂಬೆಯಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಅನುಷಾ ರೈ
ಇಂದು ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಈಗ ಕರುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ, ದೇಶದ ಗಡಿಯನ್ನು ದಾಟಿ ಹೊರದೇಶಗಳಲ್ಲೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯೋತ್ಸವದ ದಿನದಂದು ಕರ್ನಾಟಕ ಸರ್ಕಾರವು ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ರಾಜ್ಯದ ಸೊಬಗನ್ನು ಪ್ರದರ್ಶಿಸುವ ವಿವಿಧ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
ಹಿನ್ನೆಲೆ ಏನು?
ಕನ್ನಡ ಭಾಷಿಗಕರನ್ನು ಒಗ್ಗೂಡಿಸುವ ಕನಸು ಕಂಡಿದ್ದು ಆಲೂರು ವೆಂಕಟ ರಾವ್. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಆರಂಭವಾದ ಸುಮಾರು 45 ವರ್ಷಗಳ ಬಳಿಕ ಅಂದರೆ 1950ರಲ್ಲಿ ಭಾರತವು ಗಣರಾಜ್ಯವಾಗಿ ಗುರುತಿಸಲಾಗಿದ್ದು, ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶವನ್ನು ವಿವಿಧ ಪ್ರಾಂತ್ಯಗಳಾಗಿ ರಚಿಸಲು ನಿರ್ಧರಿಸಲಾಯಿತು.
ರಾಜರ ಆಳ್ವಿಕೆಯಲ್ಲಿದ್ದ ದಕ್ಷಿಣ ಭಾರತದ ವಿವಿಧ ಸ್ಥಳಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಸ್ಥಾಪಿಸಲಾಯಿತು. 1956ರ ನವೆಂಬರ್ 1ರಂದು ಹೆಚ್ಚಿನ ಪ್ರದೇಶವನ್ನು ಒಳಗೊಂಡಿದ್ದ ಮೈಸೂರು ರಾಜ್ಯದ ಕೆಲವು ಭಾಗಗಳನ್ನು ಬಾಂಬೆ, ಮದ್ರಾಸ್, ಹೈದರಾಬಾದ್ ಪ್ರಾಂತ್ಯಗಳಿಗೆ ಸೇರಿಸಲಾಯಿತು. ಬಳಿಕ ಮೈಸೂರು ರಾಜ್ಯವು ಕನ್ನಡ ಮಾತನಾಡುವ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರನ್ನು ಒಳಗೊಂಡಿತ್ತು.
ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯದ ಹೆಸರಿಗೆ ಉತ್ತರ ಕರ್ನಾಟಕದ ಜನತೆ ವಿರೋಧ ವ್ಯಕ್ತಪಡಿಸಿದರು. ಯಾಕೆಂದರೆ ಮೈಸೂರು ಎಂಬುದು ಹಿಂದಿನ ರಾಜ ಮನೆತನ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿತ್ತು. ಹೀಗಾಗಿ ರಾಜ್ಯದ ಹೆಸರನ್ನು 1973ರ ನವೆಂಬರ್ 1ರಂದು "ಕರ್ನಾಟಕ" ಎಂದು ಬದಲಾಯಿಸಲಾಯಿತು.
ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದಾಗ ಈ ಘೋಷಣೆ ಮಾಡಲಾಯಿತು. ಕರ್ನಾಟಕದ ಏಕೀಕರಣಕ್ಕೆ ದುಡಿದವರಲ್ಲಿ ಕೆ. ಶಿವರಾಮ ಕಾರಂತ , ಕುವೆಂಪು , ಮಾಸ್ತಿ ವೆಂಕಟೇಶ ಅಯ್ಯಂಗಾರ್ , ಎ.ಎನ್. ಕೃಷ್ಣ ರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ ಮೊದಲಾದವರು ಸೇರಿದ್ದರು.
ಇದನ್ನೂ ಓದಿ: Prince Andrew: ಜೆಫ್ರಿ ಎಪ್‌ಸ್ಟೀನ್ ಫೈಲ್ಸ್ ಪ್ರಕರಣ; ಪ್ರಿನ್ಸ್ ಹುದ್ದೆ ಕಳೆದುಕೊಂಡ ಆಂಡ್ರ್ಯೂ
ರಾಜ್ಯೋತ್ಸವ ಆಚರಣೆ
ಪ್ರತಿ ವರ್ಷ ರಾಜ್ಯೋತ್ಸವದ ದಿನದಂದು ಕನ್ನಡ ಮತ್ತು ಕರ್ನಾಟಕಕ್ಕೆ ಪ್ರಮುಖ ಕೊಡುಗೆ ನೀಡಿದ ವ್ಯಕ್ತಿಗಳನ್ನು ರಾಜ್ಯ ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ. ಈ ದಿನ ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ.