ಬೆಂಗಳೂರು, ಏ. 23: ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದವರು ಕೋಮುವಾದಿಗಳು, ಇದರಿಂದ ಅಭಿವೃದ್ಧಿಯಾಗುತ್ತಿಲ್ಲ. ಅಲ್ಲಿ ಐಟಿ ಕಂಪನಿಗಳು ಸ್ಥಾಪನೆಯಾಗುತ್ತಿಲ್ಲ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ (Karnataka SSLC Results) ಮತ್ತೊಮ್ಮೆ ಟ್ರೋಲ್‌ಗೆ ಆಹಾರವಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಪ್ರಿಯಾಂಕ್ ಖರ್ಗೆ ಉಸ್ತುವಾರಿ ಹೊಂದಿರುವ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ, ಬಿಜೆಪಿ-ಜೆಡಿಎಸ್ ಪ್ರಿಯಾಂಕ್ ಖರ್ಗೆ ಅವರನ್ನು ಟ್ರೋಲ್ ಮಾಡುತ್ತಿವೆ. ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್, ʼʼನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ?ʼʼ ಎಂದು ಪ್ರಶ್ನಿಸಿದ್ದರು. ಇದಕ್ಕೆ ನಿಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದು, ಪ್ರಿಯಾಂಕ್ ನಡೆಯನ್ನು ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರಿಯಾಂಕ್ ಪೋಸ್ಟ್ ಹಂಚಿಕೊಂಡು, ʼʼಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ, ಅವರ ಆತ್ಮಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆʼʼ ಎಂದು ದೂರಿದ್ದರು.
ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್:
ಪ್ರಿಯಾಂಕ್ ಹೇಳಿದ್ದೇನು?
ʼʼಬಿಜೆಪಿ ನಾಯಕರೆ ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ. ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ? ಜಿಲ್ಲೆಯ ಶೇಕಡಾವಾರು ಫಲಿತಾಂಶ 85% ಇರಬಹುದು. ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ, ರಾಜ್ಯದಲ್ಲೂ ಮತ್ತು ಕಲಬುರಗಿ ಜಿಲ್ಲೆಯಲ್ಲೂ. ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಮಾಡಿಕೊಳ್ಳುವ ಶಕ್ತಿ ನಮ್ಮ ಜಿಲ್ಲೆಯ ಮಕ್ಕಳಲ್ಲಿದೆ, ಮತ್ತು ಅದು ಸಾಧ್ಯವಾಗುತ್ತದೆ ಕೂಡ. ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸುತ್ತಿರುವ ಬಿಜೆಪಿ ರಾಜಕೀಯ ದಿವಾಳಿತನದೊಂದಿಗೆ ನೈತಿಕ ಪ್ರಜ್ಞೆಯೂ ದಿವಾಳಿಯಾಗಿರುವುದನ್ನು ನಿರೂಪಿಸುತ್ತಿದೆʼʼ ಎಂದಿದ್ದರು.
ಪ್ರಿಯಾಂಕ್ ಖರ್ಗೆ ಇಲಾಖೆಯೊಂದರಲ್ಲೇ 1000 ಕೋಟಿ ಭ್ರಷ್ಟಾಚಾರ: ಪಿ. ರಾಜೀವ್ ಆರೋಪ
ʼʼಕಲಬುರಗಿ ಜಿಲ್ಲೆಯಲ್ಲಿನ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮಕ್ಕಳಿಗೂ ದಡ್ಡರು ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ? ಜಿಲ್ಲೆಯ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವಂತಹ ಮಾತುಗಳನ್ನಾಡುತ್ತಿರುವ ಬಿಜೆಪಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದು ನಾಡಿನ ದುರಂತ. ಕಲಬುರಗಿ ಜಿಲ್ಲೆಯ ಮಕ್ಕಳ ಶ್ರಮವನ್ನು, ಅವರ ಬೌದ್ಧಿಕ ಸಾಮರ್ಥ್ಯವನ್ನು ಅವಮಾನಿಸುವ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕುʼʼ ಎಂದು ಹೇಳಿದ್ದರು.
ನೆಟ್ಟಿಗರಿಂದ ತರಾಟೆ
ಇನ್ನು ಪ್ರಿಯಾಂಕ್ ಖರ್ಗೆ ಅವರ ಈ ಎಕ್ಸ್ ಪೋಸ್ಟ್‌ಗೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬೇರೆ ಜಿಲ್ಲೆಯ ಬಗ್ಗೆ ಹೇಳಿಕೆ ನೀಡುವ ಮುನ್ನ ಅವರದೇ ಜಿಲ್ಲೆಯ ಶೈಕ್ಷಣಿಕ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ʼʼನಿಮ್ಮ ದುರಾಡಳಿತಕ್ಕೆ ವಿದ್ಯಾರ್ಥಿಗಳನ್ನೇಕೆ ಎಳೆದು ತರುತ್ತೀರಿ?ಇಲ್ಲಿ ವಿದ್ಯಾರ್ಥಿಗಳನ್ನು ಅವಮಾನಿಸಿಲ್ಲ, ಅವಮಾನಿಸಿದ್ದು ನಿಮ್ಮನ್ನು, ನಿಮ್ಮ ದುರಾಡಳಿತವನ್ನು. ಪ್ರತಿವರ್ಷವೂ ಇದೇ ಸಾಧನೆ ಮಾಡುವ ನಿಮ್ಮ ಜಿಲ್ಲೆಗೆ ಏನು ಕ್ರಮ ಕೈಗೊಂಡಿದ್ದೀರಿ? ಬೇರೆ ಜಿಲ್ಲೆಗಳ ಬಗ್ಗೆ ನಿಮ್ಮ ರಾಜಕೀಯ ಓಲೈಕೆಗಾಗಿ ನೀವಾಡುವ ತುಚ್ಛ ಮಾತುಗಳನ್ನು ನಿಲ್ಲಿಸಿʼʼ ಎಂದು ಒಬ್ಬರು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್‌ಗೆ ಕೋರ್ಟ್ ನೋಟಿಸ್
ʼʼರೀ ಮಂತ್ರಿ ನಿಮ್ಮ ಜಿಲ್ಲೆಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿಲ್ಲ. ನಿಮ್ಮ ಜಿಲ್ಲೆಯ ಶೈಕ್ಷಣಿಕ ಮಟ್ಟ ಎಲ್ಲಿ ಮುಟ್ಟಿದೆ ಅಂತ ತೋರಿಸಿಕೊಟ್ಟಿದ್ದು. ನಿಮ್ಮ ಜಿಲ್ಲೆಯ ಎಜುಕೇಶನ್‌ಗೆ ಸುಧಾರಣೆಗೆ ಕ್ರಮ ಕೈಗೊಳ್ಳಿ ಅಂದಿದ್ದು. ಬಿಡಿ 10ನೆ ಫೇಲ್ ಆದ ನಿಮಗೆ ಎಲ್ಲಿ ಅರ್ಥ ಆಗಬೇಕು?ʼʼ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಖರ್ಗೆ ಮಿನಿಸ್ಟರ್ ಸರ್ ಹಾಗೂ ಖರ್ಗೆ ಸಾಹೇಬರೇ ನೀವು ಯಾವಾಗಲೂ ಬಿಜೆಪಿಯವರನ್ನು ಅದರಲ್ಲೂ ಮೋದಿಜಿಯನ್ನ ಟೀಕೆ ಮಾಡ್ತಾ ನಿಮ್ಮ ಟೈಮ್ ಕಳಿಯುವ ಬದಲು ನಿಮ್ಮ ಜಿಲ್ಲೆಯ ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಿದ್ದರೆ ಇವತ್ತು ನಿಮ್ಮ ಜಿಲ್ಲೆ ಕೊನೆಯ ಸ್ಥಾನಕ್ಕಿಂತ ಮೇಲೆಯಾದರೂ ಇರ್ತಾ ಇತ್ತು. ದಯವಿಟ್ಟು ಯೋಚನೆ ಮಾಡಿ ಇದು ಯಾರ ವೈಫಲ್ಯ ಅಂತʼʼ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಪೋಸ್ಟ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.