Priyank Kharge: ಪ್ರಿಯಾಂಕ್ ಖರ್ಗೆ ಇಲಾಖೆಯೊಂದರಲ್ಲೇ 1000 ಕೋಟಿ ಭ್ರಷ್ಟಾಚಾರ: ಪಿ. ರಾಜೀವ್ ಆರೋಪ
P. Rajeev: ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ ರಾಜೀವ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ದಾಖಲೆ ಬಿಡುಗಡೆ ಮಾಡಿದರು.


ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅರಾಜಕತೆ ಸೃಷ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ 4,09,549 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಕೊಡುತ್ತಿರುವುದು 50,000 ಕೋಟಿ. ಇನ್ನುಳಿದ 3.60 ಲಕ್ಷ ಕೋಟಿ ಎಲ್ಲಿ ಹೋಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಜಗತ್ತಿನ ಬಗ್ಗೆ ಮಾತನಾಡುತ್ತಾರೆ. ಆದರೆ ನಿಮ್ಮ ಇಲಾಖೆಯಲ್ಲಿ ಏನು ಭ್ರಷ್ಟಾಚಾರ ನಡೆದಿದೆ ಎಂದು ಗೊತ್ತಾ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯೊಂದರಲ್ಲೇ 1000 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯೊಂದರಲ್ಲೇ 1000 ಕೋಟಿ ಭ್ರಷ್ಟಾಚಾರ ನಡೆದಿದೆ. ಅದರಲ್ಲಿ ಕುಡಚಿ ಕ್ಷೇತ್ರದ ಒಂದು ಗ್ರಾಮ ಪಂಚಾಯಿತಿಯೊಂದರಲ್ಲಿ 17 ಕೋಟಿ ಅವ್ಯವಹಾರ ನಡೆದಿದೆ. ನಿಮ್ಮ ಇಲಾಖೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೆ ನೀವು ಏನು ಮಾಡುತ್ತಿದ್ದೀರಿ. ಒಂದು ಪಂಚಾಯಿತಿಯಲ್ಲೇ ಇಷ್ಟಾದರೆ ರಾಜ್ಯದ 6000 ಪಂಚಾಯಿತಿಗಳಲ್ಲಿ ಎಷ್ಟು ಅವ್ಯವಹಾರ ಅಗಿರಬೇಕು ಎಂದು ಪ್ರಶ್ನಿಸಿದರು.
ನರೇಗಾದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ನರೇಗಾ ಜಾಬ್ ಕಾರ್ಡ್‌ನಲ್ಲಿ ಕಾಣಿಸುವ ವ್ಯಕ್ತಿಗಳು ಹಾಗೂ ಹೆಸರುಗಳಿಗೆ ಸಂಬಂಧವೇ ಇಲ್ಲ. ಫೋಟೊದಲ್ಲಿರುವವವರು ಬೇರೆ, ಖಾತೆಗೆ ಹಣ ಪಡೆಯುವರು ಬೇರೆ. ಕಾಮಗಾರಿಗಳು ಬೇರೆ ಬೇರೆಯಾದರೂ, ಕಾರ್ಮಿಕರು ಮಾತ್ರ ಅವರೇ ಇರುತ್ತಾರೆ. ಮತ್ತೊಂದರಲ್ಲಿ ಅದೇ ಜನ ಇದ್ದರೂ ಹೆಸರುಗಳು ಬೇರೆ ಬೇರೆ ಇರುತ್ತವೆ. ಒಂದು ಪಂಚಾಯಿತಿಯಲ್ಲಿ 20ರಿಂದ 30 ಮಂದಿಯನ್ನು ಕರೆದುಕೊಂಡು, ಅವರನ್ನೇ ಎಲ್ಲಾ ಕಾಮಗಾರಿಗಳ ಬಳಿ ಫೋಟೋ ಇಳಿಸಿ, ಹೆಸರು ಬದಲಿಸುತ್ತಾರೆ. ಅವರಿಗೇ ಹಣ ಬಿಡುಗಡೆಯಾಗುತ್ತದೆ. ಇದಕ್ಕೆ ಸಂಬಂಧಿಸಿ ನನ್ನ ಬಳಿ ಹಲವು ದಾಖಲೆ ಇವೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
ನರೇಗಾ ಕಾಮಗಾರಿಗಳ ಬಗ್ಗೆ ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ನೀವು ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ದೀರಲ್ಲ, ಇದು ಎಷ್ಟು ಪರ್ಸೆಂಟ್ ಎಂದು ನೀವೇ ಹೇಳಬೇಕು. ವಿಜಯಪುರದಲ್ಲಿ ಶಾಲಾ ಮಕ್ಕಳನ್ನು ನಿಲ್ಲಿಸಿ ನರೇಗಾ ಬಿಲ್ ಮಂಜೂರು ಮಾಡಿದ್ದಾರೆ. ಯಾದಗಿರಿಯಲ್ಲಿ ಪುರುಷರಿಗೆ ಸೀರೆಯನ್ನು ಉಡಿಸಿ ಬಿಲ್ ತೆಗೆದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಮೂಗಿನಡಿ ಈ ಭ್ರಷ್ಟಾಚಾರ ನಡೆದಿದೆ. ಹೀಗೆ ಹಲವು ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದರು.
ಚಿಂಚಲಿಯಲ್ಲಿ ಪಿಡಬ್ಲ್ಯುಡಿ ಇಲಾಖೆಯಿಂದ ಡಾಂಬರು ರಸ್ತೆ ಕಾಮಗಾರಿ ನಡೆದಿದೆ. 2024ರ ಮೇ ಮೇ 14ರಂದು ಕಾಮಗಾರಿ ನಡೆದಿತ್ತು. ಇದೇ ಕಾಮಗಾರಿಗೆ ಜೂನ್‌ನಲ್ಲಿ ನರೇಗಾ ಕಾಮಗಾರಿ ನಡೆಸಿ, 5 ಲಕ್ಷ ಬಿಲ್ ಮಂಜೂರು ಆಗಿದೆ. ಈ ಕಾಮಗಾರಿ ಸ್ಥಳಕ್ಕೆ ನೀವು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರಿಗೆ ಆಗ್ರಹಿಸಿದರು.
ಕಾಮಗಾರಿಗಳಿಗೆ ಹಂತ ಹಂತವಾಗಿ ಫೋಟೊ ಅಪ್‌ಲೋಡ್ ಮಾಡಬೇಕು. ಆದರೆ, ನಮ್ಮ ಅಧಿಕಾರಿಗಳು ಗೂಗಲ್ ಮ್ಯಾಪ್ ಪೋಟೊಗಳನ್ನು ಹಾಕಿ ಕಾಮಗಾರಿ ಬಿಲ್ ತೆಗೆದುಕೊಂಡಿದ್ದಾರೆ. ಈ ರೀತಿ ಸಾವಿರಾರು ಕಾಮಗಾರಿಗಳಿಗೆ ಗೂಗಲ್ ಫೋಟೊ ಹಾಕಿದ್ದಾರೆ. ಇವೆಲ್ಲವೂಗಳಿಗೆ ಬಿಲ್ ರಿಲೀಸ್ ಆಗಿದೆ. ಇದರಲ್ಲಿ ನಿಮಗೆಷ್ಟು ಷೇರು ಇದೆ, ಈ ಬಿಲ್ ಮಂಜೂರಾದ ಕಡೆ ಕೆಲಸವೇ ಆರಂಭವಾಗಿಲ್ಲ. ಒಂದು ರೂಪಾಯಿ ಕೆಲಸ ಆಗಿಲ್ಲ, ಲಕ್ಷಾಂತರ ಬಿಲ್ ಮಂಜೂರು ಆಗಿದೆ ಎಂದರು.
ಈ ಸುದ್ದಿಯನ್ನೂ ಓದಿ | Greater Bengaluru: ವಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ಪಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ: ಡಿಕೆಶಿ
ನರೇಗಾದಲ್ಲಿ ಮೊದಲು ಬೇರೆ ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಡ್ರಾ ಮಾಡಲಾಗುತ್ತಿತ್ತು. ಈಗ ಅವರ ಕುಟುಂಬಸ್ಥರ ಹೆಸರಲ್ಲಿ ಹಣ ಪಡೆಯಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲಿ ಸಾವಿರಾರು ಕೋಟಿ ಲೂಟಿ ಆಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಡಾ. ಲಕ್ಷ್ಮೀ ಅಶ್ವಿನ್ ಗೌಡ, ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.