ಮಡಿಕೇರಿ: ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ (Madikeri Accident) ಸಂಭವಿಸಿದ್ದು, ಪ್ರವಾಸಿಗರಿದ್ದ ಟಿಟಿ ವಾಹನದ ಮೇಲೆ ಲಾರಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಟಿಟಿ ವಾಹನದಲ್ಲಿದ್ದ ಆರು ಮಂದಿ ಹಾಗೂ ಲಾರಿಯಲ್ಲಿದ್ದ ಇಬ್ಬರು ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ಸಂಪಾಜೆ ಸಮೀಪದ ಜೋಡುಪಾಲ ಅಬ್ಬಿಕೊಲ್ಲಿ ಜಲಪಾತದ ಬಳಿ ಈ ಘಟನೆ ನಡೆದಿದೆ. ಗುಜರಾತ್‌ನ ಅಹಮದಾಬಾದ್‌ನಿಂದ ಕೊಡಗು ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಮಡಿಕೇರಿಯಿಂದ ಮಂಗಳೂರಿನತ್ತ ತೆರಳುತ್ತಿದ್ದರು.
ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೆಲವರು ಟೀ ಕುಡಿಯಲು ತೆರಳಿದ್ದ ವೇಳೆ ಲಾರಿ ನಿಯಂತ್ರಣ ತಪ್ಪಿ ವಾಹನದ ಮೇಲೆ ಮಗುಚಿ ಬಿದ್ದಿದೆ ಎನ್ನಲಾಗಿದೆ. ಪರಿಣಾಮ ಟಿಟಿ ವಾಹನದಲ್ಲಿದ್ದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇನ್ನು ಲಾರಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯ ರಸ್ತೆಯಲ್ಲೇ ಕಾರು ನಿಲ್ಲಿಸಿ ಗಾಢ ನಿದ್ದೆಗೆ ಜಾರಿದ ʼಕುಂಭಕರ್ಣʼ: ಎಚ್ಚರಿಸಲು ಹರಸಾಹಸ ಪಟ್ಟ ಸ್ಥಳೀಯರು
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಅದೃಷ್ಟವಶಾತ್ ಟಿಟಿ ವಾಹನದಲ್ಲಿದ್ದ ಇತರ ಪ್ರವಾಸಿಗರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.