ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನವರಾತ್ರಿ ಸಂಭ್ರಮದ ನಡುವೆ ತಲಕಾವೇರಿಯಲ್ಲಿ ತೀರ್ಥೋದ್ಭವ; ಸಾವಿರಾರು ಭಕ್ತರು ಸಾಕ್ಷಿ

Cauvery Theerthodbhava: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾಗಿದೆ. ಸಂಜೆ 7.50ರ ಸುಮಾರಿಗೆ ಈ ತೀರ್ಥೋದ್ಭವ ಸಂಭವಿಸಿದ್ದು ಸಹಸ್ರಾರು ಭಕ್ತರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಗುರುರಾಜ್ ಆಚಾರ್ ಹಾಗೂ ಪ್ರಶಾಂತ್ ಆಚಾರ್ ನೇತೃತ್ವದ ಅರ್ಚಕರ ತಂಡ ತೀರ್ಥೋದ್ಭವದ ವಿಶೇಷ ಪೂಜೆ ನಡೆಸಿತು.

ಸಾಂದರ್ಭಿಕ ಚಿತ್ರ

ಮಡಿಕೇರಿ, ಅ. 17: ದಸರಾ ಸಂಭ್ರಮದ ನಡುವೆ ಕರುನಾಡ ಭಕ್ತರು ಮತ್ತೊಂದು ಧಾರ್ಮಿಕ ಕ್ಷಣಕ್ಕೆ ಸಾಕ್ಷಿಯಾದರು. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾಗಿದೆ (Cauvery Theerthodbhava). ಶನಿವಾರ (ಅಕ್ಟೋಬರ್‌ 17) ಸಂಜೆ 7.50ರ ಸುಮಾರಿಗೆ ಈ ತೀರ್ಥೋದ್ಭವ ಸಂಭವಿಸಿದ್ದು, ಸಹಸ್ರಾರು ಭಕ್ತರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿ ಕಾವೇರಿ ತಾಯಿಯ ದರ್ಶನ ಪಡೆದರು. ಸ್ಥಳೀಯಾಡಳಿತದ ವತಿಯಿಂದ ತಲಕಾವೇರಿಯ ಕಾವೇರಿ ಉಗಮ ಸ್ಥಾನ ಹಾಗೂ ಭಾಗಮಂಡಲದ ಭಗಂಡೇಶ್ವರ ದೇವಾಲಯ ಮತ್ತು ತ್ರಿವೇಣಿ ಸಂಗಮದ ಸುತ್ತಮುತ್ತ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಶಾಸಕ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಮೊದಲೇ ಅಗತ್ಯ ಸಿದ್ಧತೆ ಮಾಡಲಾಗಿತ್ತು. ತೀರ್ಥೋದ್ಭವದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಭಕ್ತರ ಸುಗಮ ಸಂಚಾರ, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲು ಹಾಗೂ ಕ್ಷೇತ್ರದ ಸ್ವಚ್ಛತೆ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತರ ಸುಗಮ ಓಡಾಟಕ್ಕೆ ಅನುಕೂಲವಾಗುವಂತೆ ವಿಶೇಷ ಪಾದಚಾರಿ ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ. ಗುರುರಾಜ್ ಆಚಾರ್ ಹಾಗೂ ಪ್ರಶಾಂತ್ ಆಚಾರ್ ನೇತೃತ್ವದ ಅರ್ಚಕರ ತಂಡ ತೀರ್ಥೋದ್ಭವದ ವಿಶೇಷ ಪೂಜೆ ನಡೆಸಿತು. ಭಾಗಮಂಡಲದ ತ್ರಿವೇಣಿ ಸಂಗಮದ ಹೂಳು ತೆಗೆದು ನದಿಯ ಹರಿವಿಗೆ ಮರದ ಹಲಗೆಗಳನ್ನು ಅಳವಡಿಸಿ ಪವಿತ್ರ ಸ್ಥಾನಕ್ಕೆ ನೀರಿನ ಶೇಖರಣೆ ಮಾಡಲಾಗಿದೆ. ಪಕ್ಕದಲ್ಲೇ ಕೇಶ ಮುಂಡನ ಮತ್ತು ಪಿಂಡ ಪ್ರದಾನಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಭಾಗಮಂಡಲದಿಂದ ತಲ ಕಾವೇರಿಗೆ ತೆರಳುವ ಭಕ್ತರಿಗೆ ಸಾರಿಗೆ ನಿಗಮದ ಬಸ್‌ಗಳನ್ನು ಕಲ್ಪಿಸಲಾಗಿದೆ. ಜತೆಗೆ ಶ್ರೀ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯಗಳಿಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ

ತೀರ್ಥೋದ್ಭವದ ಪ್ರಸಾರಕ್ಕೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ತೀರ್ಥ ಕುಂಡಿಕೆಯ ಪ್ರವೇಶ ದ್ವಾರದಲ್ಲಿ ಪೊಲೀಸ್ ಇಲಾಖೆ ಭಕ್ತರ ದಟ್ಟಣೆಯನ್ನು ತಡೆಯಲು ಅಂದಾಜು 20 ಅಡಿ ಎತ್ತರದ ಬಿದಿರಿನ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು ಹದ್ದಿನ ಕಣ್ಣಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ತೀರ್ಥೋದ್ಭವ?

ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಯು ಕಾವೇರಿ ನದಿಯ ಉಗಮಸ್ಥಾನವೆಂದು ಪೂಜಿಸಲ್ಪಡುವ ಪುಣ್ಯಕ್ಷೇತ್ರ. ಇಲ್ಲಿರುವ ಬ್ರಹ್ಮಕುಂಡಿಕೆಯಲ್ಲಿ ಪ್ರತಿವರ್ಷ ತುಲಾ ಸಂಕ್ರಮಣದಂದು ಪವಿತ್ರ ತೀರ್ಥ ಉದ್ಭವವಾಗುತ್ತದೆ ಎಂಬ ನಂಬಿಕೆ ಇದೆ. ಕುಂಡಿಕೆಯಲ್ಲಿ ನೀರು ಉಕ್ಕಿ ಬರುವ ಈ ವಿದ್ಯಾಮಾನವನ್ನು ಕಾವೇರಿ ತೀರ್ಥೋದ್ಭವ ಎಂದು ಕರೆಯಲಾಗುತ್ತದೆ. ನಿಗದಿತ ಮುಹೂರ್ತದಲ್ಲಿ ಅರ್ಚಕರು ಉಗಮಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕಾವೇರಿ ದೇವಿಗೆ ಪೂಜೆ ಸಲ್ಲಿಸಿ, ಪವಿತ್ರ ತೀರ್ಥವನ್ನು ಸ್ವೀಕರಿಸುವುದು ಪ್ರಮುಖ ಸಂಪ್ರದಾಯ. ಇದರಿಂದ ಪಾಪಗಳೆಲ್ಲ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಮನೆ ಮಾಡಿದೆ. ಈ ಅ‍ದ್ಭುತ ಕಾರ್ಯಕ್ಕೆ ಸಾಕ್ಷಿಯಾಗಲು ಪ್ರತಿವರ್ಷ ಸಾವಿರಾರು ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸುತ್ತಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author