Cauvery Theerthodbhava: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ತೀರ್ಥರೂಪಿಣಿ ಕಾವೇರಿ ತಾಯಿ ದರ್ಶನ ಪಡೆದ ಸಹಸ್ರಾರು ಭಕ್ತರು
Kodagu News: ಶುಕ್ರವಾರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡಿದ್ದಾಳೆ. ಇದೀಗ ಸೂರ್ಯ ಕನ್ಯಾರಾಶಿಯಿಂದ ತುಲಾರಾಶಿಗೆ ಪಥ ಬದಲಾಯಿಸಿದ್ದು, ಈ ವೇಳೆ ಮಕರ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಉದ್ಭವಿಸಿದ್ದಾಳೆ.

-

ಕೊಡಗು: ಜಿಲ್ಲೆಯ ಭಾಗಮಂಡಲ ಸಮೀಪ ತಲಕಾವೇರಿಯಲ್ಲಿ ಶುಕ್ರವಾರ ಕಾವೇರಿ ತೀರ್ಥೋದ್ಭವವಾಗಿದೆ. ಕಾವೇರಿ ತಾಯಿ ತೀರ್ಥರೂಪಿಣಿಯಾಗಿ (Cauvery Theerthodbhava) ಭಕ್ತರಿಗೆ ದರ್ಶನ ನೀಡಿದ್ದು, ದೇವಿಯ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಸೇರಿದ್ದರು. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ, ಹಾಡು ನೃತ್ಯದ ಮೂಲಕ ಕಾವೇರಿ ಮಾತೆಗೆ ಆರತಿ ಬೆಳಗಿ ಸ್ವಾಗತಿಸಿದ್ದಾರೆ.
ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ಇದೀಗ ಸೂರ್ಯ ಕನ್ಯಾರಾಶಿಯಿಂದ ತುಲಾರಾಶಿಗೆ ಪಥ ಬದಲಾಯಿಸಿದ್ದು, ಈ ವೇಳೆ ಮಕರ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಉದ್ಭವಿಸಿದಳು. ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಹ ಭಾಗವಹಿಸಿದ್ದರು.
ತಲಕಾವೇರಿಯ ಕುಂಡಿಕೆಯಲ್ಲಿ ಮೊಗೆದಷ್ಟು ನೀರು ಉತ್ಪತ್ತಿ!
ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಕುಂಡಿಕೆಯಲ್ಲಿ ಮೊಗೆದಷ್ಟು ನೀರು ಉತ್ಪತ್ತಿಯಾಗುತ್ತಿರುವುದು ವಿಸ್ಮಯಕಾರಿಯಾಗಿದ್ದು, ಈ ಜೀವಜಲವನ್ನು ಕೊಡಗಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತಿಯಿಂದ ಪೂಜಿಸುತ್ತಾರೆ. ಜೀವ ನದಿಯನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸಿದ್ದಾರೆ.
ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿ ದರ್ಶನ ನೀಡುತ್ತಾಳೆ ಎನ್ನುವುದು ಪುರಾತನ ಕಾಲದಿಂದಲೂ ಇರುವ ನಂಬಿಕೆ. ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ಇಲ್ಲಿನ ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ, ಮನೆಗೆ ಕೊಂಡೊಯ್ಯುತ್ತಾರೆ. ಈ ಕುಂಡಿಕೆಯನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ನಿತ್ಯ ಇಲ್ಲಿ ಪೂಜೆ ನಡೆಯುತ್ತದೆ.