ಕೆ.ಎಸ್.ಮಂಜುನಾಥ ರಾವ್ ಕೋಲಾರ
ಕೇಂದ್ರ ಸರಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ ನಕಲಿ ಫಲಾನುಭವಿ ಗಳನ್ನು ಸೃಷ್ಟಿಸಿ ಲಕ್ಷಾಂತರ ರು. ಲೂಟಿ ಮಾಡಿರುವ ಪ್ರಕರಣದಲ್ಲಿ ಎಲ್ಲವನ್ನೂ ಅಂಗನವಾಡಿ ಕಾರ್ಯಕರ್ತೆ ತಲೆಗೆ ಕಟ್ಟಿ ವಜಾ ಮಾಡಿರುವ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿ ಆಗಿರುವ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಪರಿ, ಅಧಿಕಾರಿಗಳ ಅಸಲಿಯತ್ತನ್ನೇ ಪ್ರಶ್ನಿಸು ವಂತಾಗಿದೆ. ಈ ಘಟನೆ ಮಾಲೂರು ತಾಲೂಕಿನ ಕುಂಟನಹಳ್ಳಿಯಲ್ಲಿ ನಡೆದಿದ್ದು ಆರೋಪಿಗಳನ್ನು ರಕ್ಷಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಪ್ರಯತ್ನ ಸಫಲವಾಗಿದೆ.
ಮಾಲೂರಿನ ಕುಂಟನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಎಸ್. ವರಲಕ್ಷ್ಮೀ ಮಾತೃವಂದನಾ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಮಾತೃ ವಂದನಾ ಕಾರ್ಯಕ್ರಮದ ತಲಾ 11 ಸಾವಿರ ರು. ಗಳನ್ನು ಸ್ವಂತಕ್ಕೆ ಬಳಸಿಕೊಂಡಿರುವ ಪ್ರಕರಣದ ಕುರಿತು ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ತಾಲೂಕು ಅಧ್ಯಕ್ಷ ವಿನೋದ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಉಮಾದೇವಿ, ನಾರಾಯಣಸ್ವಾಮಿ ಮತ್ತು ಬುಟ್ಟೆಪ್ಪ ಅವರು ದಾಖಲೆಗಳ ಸಹಿತ ಸಿಡಿಪಿಒ ಬಿ.ಶೋಭಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್ .ನಾರಾಯಣಸ್ವಾಮಿ ಅವರಿಗೆ ದೂರು ನೀಡಿದ ಮೇರೆಗೆ ತನಿಖೆ ನಡೆದು ಇದೀಗ ಕಾರ್ಯಕರ್ತೆ ವರಲಕ್ಷ್ಮಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಇದನ್ನೂ ಓದಿ: Kolar News: ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಗೆ ಭರ್ಜರಿ ಗೆಲುವು, ಕಾಂಗ್ರೆಸ್ ಶೂನ್ಯ ಸಾಧನೆ
ರೈತ ಸಂಘದ ಕಾರ್ಯಕರ್ತರು ಒಂದೂವರೆ ವರ್ಷದ ಹಿಂದೆ ನೀಡಿದ ದೂರಿಗೆ ಇದೀಗ ಕಾಟಾ ಚಾರದ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕರ್ತೆ ವರಲಕ್ಷ್ಮಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸದೆ ಕಾಟಾಚಾರಕ್ಕೆ 72 ಸಾವಿರ ರು.ಗಳನ್ನು ಸರಕಾರಕ್ಕೆ ವಾಪಸ್ ಕಟ್ಟಿಸಿ ಪ್ರಕರಣವನ್ನು ಮುಕ್ತಾಯ ಗೊಳಿಸಲು ತೋರಿರುವ ಮುತುವರ್ಜಿ ಹಿಂದಿನ ಕಾಣದ ಕೈಗಳ ಒತ್ತಡಕ್ಕೆ ಸಾಕ್ಷಿಯಾಗಿದೆ.
60 ವರ್ಷದ ವೃದ್ಧರು, ವಿಧವೆಯರು, ಬೇರೆ ಜಿಲ್ಲೆಗೆ ಮದುವೆಯಾಗಿ ಹೋಗಿರುವ ಹೆಣ್ಣು ಮಕ್ಕಳು, ಮಕ್ಕಳಾಗದವರು, ಹೆಣ್ಣು ಮಕ್ಕಳಿಲ್ಲದವರ ಖಾತೆಗೂ ಬಸುರಿ ಮತ್ತು ಬಾಣಂತಿಯರಿಗೆ ನೀಡುವ 11 ಸಾವಿರ ರು. ಬ್ಯಾಂಕ್ ಖಾತೆಯ ಮೂಲಕ ಪಾವತಿ ಆಗಿರುವ ಅಕ್ರಮದಲ್ಲಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸದೆ ಇಡೀ ಪ್ರಕರಣವನ್ನು ಅಂಗನವಾಡಿ ಕಾರ್ಯಕರ್ತೆ ಮೇಲೆ ಹಾಕಿ ಶಿಕ್ಷೆ ನೀಡಲಾಗಿದ್ದು ಅಧಿಕಾರಿಗಳ ಪಾತ್ರ ಇದರಲ್ಲಿ ಏನೇನೂ ಇಲ್ಲವೇ ಎಂಬ ಶಂಕೆ ವ್ಯಕ್ತವಾಗಿದೆ.
ಹಗರಣ ಬಯಲಾದ ಬಗೆ
ಕುಂಟನಹಳ್ಳಿ ಮಂಜುಳ ಮುನಿರಾಜು ಅವರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರ ಗಳನ್ನು ಪಡೆದುಕೊಂಡ ಅಂಗನವಾಡಿ ಕಾರ್ಯಕರ್ತೆ ವರಲಕ್ಷ್ಮೀ ಅವರು 24.02.2025ರಂದು 11 ಸಾವಿರ ರು.ಗಳನ್ನು ಮಹಿಳೆ ಖಾತೆಗೆ ಹಾಕಿಸಿ ಫೋನ್‌ಪೇ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿ ಕೊಂಡಿದ್ದರು. ಮೊಬೈಲ್ ನೋಡಿದಾಗ ಮಾತೃ ವಂದನಾದಲ್ಲಿ ಪತ್ನಿಗೆ 11 ಸಾವಿರ ರು. ಮಂಜೂ ರಾಗಿರುವ ಮಾಹಿತಿ ಸಿಕ್ಕು ಅವಕ್ಕಾದ ಮುನಿರಾಜು ಹೆಣ್ಣು ಮಕ್ಕಳೇ ಇಲ್ಲದ ತನ್ನ ಕುಟುಂಬಕ್ಕೆ ಮಾತೃ ವಂದನಾ ಯೋಜನೆ ಮಂಜೂರಾದ ರಹಸ್ಯವನ್ನು ಪತ್ತೆ ಹಚ್ಚಿದಾಗ ಕಾರ್ಯಕರ್ತೆ ಅಸಲಿ ಬಣ್ಣ ಬಯಲಾಗಿದೆ.
![]()
ಲಕ್ಷಾಂತರ ರು. ಭ್ರಷ್ಟಾಚಾರ ನಡೆಸಿರುವ ಅಂಗನವಾಡಿ ಕಾರ್ಯಕರ್ತೆಯನ್ನು ವಜಾ ಮಾಡಿರು ವುದು ಸರಿಯಾದರೂ ಕ್ರಿಮಿನಲ್ ಕೇಸ್ ದಾಖಲಿಸದೆ ಬಿಟ್ಟಿದ್ದು ಏಕೆ? ಜಿಲ್ಲೆಯಲ್ಲಿ ಮಂಜೂರಾಗಿ ರುವ ಮಾತೃ ವಂದನಾ ಯೋಜನೆಯ ಫಲಾನುಭವಿಗಳ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಅಟ್ಟಬೇಕು. ಮಾಲೂರು ಸಿಡಿಪಿಒ ಕಚೇರಿಯ ಎಲ್ಲ ಸಿಬ್ಬಂದಿಯನ್ನು ವರ್ಗ ಮಾಡುವ ಮೂಲಕ ಸಾಕ್ಷಿನಾಶ ಆಗದಂತೆ ತಡೆಯಬೇಕು. ಕಾರ್ಯಕರ್ತೆ ಜತೆ ಶಾಮೀಲಾಗಿರುವ ಮೇಲ್ವಿಚಾರಕರು ಮತ್ತು ಸಿಡಿಪಿಓ ವಿರುದ್ದವೂ ಕ್ರಮ ಕೈಗೊಳ್ಳಬೇಕು.
-ಕೆ.ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷರು, ರೈತ ಸಂಘ