ಕೊಪ್ಪಳ: ಹುಬ್ಬಳ್ಳಿ ಬಳಿಕ ಇದೀಗ ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ ಪ್ರಕರಣ (Koppal Love Jihad case) ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ರಾಶಿ ರಾಶಿ ಫೋಟೊ ಹಾಗೂ ವಿಡಿಯೊಗಳು ಪತ್ತೆಯಾಗಿದೆ. ನರ್ಸಿಂಗ್ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಹಲವೆಡೆ ಸುತ್ತಾಡಿಸಿದ್ದು, ಈ ವಿದ್ಯಾರ್ಥಿನಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಎನ್ನಲಾಗಿದೆ.
ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಕಳೆದ ಮೂರು ದಿನಗಳ ಹಿಂದೆ ಇವರಿಬ್ಬರು ಜಿಲ್ಲಾಸ್ಪತ್ರೆ ಬಳಿ ಇದ್ದಾಗ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಮುಸ್ತಫಾ ಮೊಬೈಲ್ ಪರಿಶೀಲಿಸಿದಾಗ ಹತ್ತಾರು ಹಿಂದೂ ಯುವತಿಯರ ಜತೆಗೆ ಇರುವ ರಾಶಿ ರಾಶಿ ವಿಡಿಯೊಗಳು ಪತ್ತೆಯಾಗಿವೆ. ಇವುಗಳಲ್ಲಿ ಹಿಂದೂ ಯುವತಿಯರಿಗೆ ಬೀಯರ್ ಕುಡಿಸಿ, ಮಾಂಸ ಸೇವನೆ ಮಾಡಿಸಿದ್ದು, ಅರೆನಗ್ನಾವಸ್ಥೆಯಲ್ಲಿ ಇರುವ ವಿಡಿಯೊಗಳು ಪತ್ತೆಯಾಗಿವೆ. ಜತೆಗೆ ಗಾಂಜಾ, ಹುಕ್ಕಾ ಸಹ ಹೊಡೆಯುವ ವಿಡಿಯೊಗಳು ಸಹ ಪತ್ತೆಯಾಗಿವೆ.
ಇನ್ನು ಮುಸ್ತಫಾ ಮಟ್ಕಾ ಬುಕ್ಕಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್‌ನ ಮುಖಂಡರು, ಕಾರ್ಯಕರ್ತರು ಎಸ್ಪಿ ಡಾ.ರಾಮ್ ಅರಸಿದ್ದಿಯವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಈ ಕೂಡಲೇ ಪ್ರಕರಣದ ತನಿಖೆ ನಡೆಸಿ, ಮುಸ್ತಫಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆರೋಪಿ ಮುಸ್ತಾಫ ವಶಕ್ಕೆ
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ ಅವರು ಪ್ರತಿಕ್ರಿಯೆ ನೀಡಿದ್ದು, ಆರೋಪಿ ಮುಸ್ತಫಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.