ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysuru Dasara 2026) ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಸೋಮವಾರ ಭೇಟಿ ಮಾಡಿ, ಮೈಸೂರು ದಸರಾ ಉದ್ಘಾಟನೆಗೆ ಆಗಮಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.
ಕೊಪ್ಪಳದ ಗವಿಮಠಕ್ಕೆ ಆಗಮಿಸಿದ ಸಚಿವ ಶಿವರಾಜ್ ತಂಗಡಗಿ ಅವರು ಶ್ರೀಗಳ ಆಶೀರ್ವಾದ ಪಡೆದು, ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುವಂತೆ ಸರ್ಕಾರದ ಪರವಾಗಿ ಶ್ರೀಗಳಿಗೆ ಆಹ್ವಾನ ನೀಡಿದರು.
ಮೈಸೂರು ದಸರಾ ಉದ್ಘಾಟನೆಯಂತಹ ಐತಿಹಾಸಿಕ ಗೌರವವು ಕೊಪ್ಪಳದ ಗವಿಮಠಕ್ಕೆ ಹಾಗೂ ಇಡೀ ಕೊಪ್ಪಳ ಜಿಲ್ಲೆಗೆ ದೊರೆತಿರುವುದು ವಿಶೇಷವೆನಿಸಿದೆ. ಸರಳತೆ, ಸಮಾಜಮುಖಿ ಚಿಂತನೆ, ಶಿಕ್ಷಣ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗವಿಮಠದ ಸೇವೆ ರಾಜ್ಯಾದ್ಯಂತ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವುದು ಮಹತ್ವ ಪಡೆದಿದೆ.
ತ್ರಿವಿಧ ದಾಸೋಹಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಮಠದ 18ನೇ ಪೀಠಾಧಿಪತಿಗಳಾಗಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ, ಸಮಾಜಮುಖಿ ಕಾಯಕಗಳ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದಾರೆ. ಗವಿಮಠದಲ್ಲಿ ಸಾವಿರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಮತ್ತು ನಿರಂತರ ದಾಸೋಹವನ್ನು ಕಲ್ಪಿಸಿಕೊಟ್ಟಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಕೆರೆಗಳ ಹೂಳೆತ್ತುವುದು, ‘ಹಿರೇಹಳ್ಳ ಪುನಶ್ಚೇತನ’ ಯೋಜನೆ ಸೇರಿ ಹಲವು ನದಿ-ತೊರೆಗಳ ಜಲಮೂಲಗಳನ್ನು ಸಂರಕ್ಷಿಸಿ ಲಕ್ಷಾಂತರ ಜನರಿಗೆ ಆಸರೆಯಾಗುವ ಮೂಲಕ ಇವರು ನಾಡಿನಲ್ಲಿ ‘ಜಲಋಷಿ’ ಎಂದೇ ಖ್ಯಾತಿ ಗಳಿಸಿದ್ದಾರೆ. ಇನ್ನು ಪ್ರತಿವರ್ಷ ಜರುಗುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಶಿಸ್ತುಬದ್ಧವಾಗಿ, ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ಸೌಹಾರ್ದತೆಯ ಪ್ರತೀಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.