ಕೊಪ್ಪಳ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಟಿಕೆಟ್ ಕಲೆಕ್ಟರ್ ಹಲ್ಲೆ ಮಾಡಿರುವ ಘಟನೆ ಮೈಸೂರು-ಕೊಪ್ಪಳ ರೈಲಿನಲ್ಲಿ ನಡೆದಿದೆ. ಏ.24ರಂದು ರೈಲಿನಲ್ಲಿ ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಕರೊಬ್ಬರು ಸಂಚರಿಸುತ್ತಿದ್ದರು. ಬೆಂಗಳೂರಿನ ಯಲಹಂಕ ತಲುಪಿದಾಗ ಟಿಕೆಟ್ ತಪಾಸಣೆಗೆ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಬಂದಿದ್ದಾನೆ. ಈ ವೇಳೆ ಪ್ರಯಾಣಿಕ ಕನ್ನಡ ಮಾತನಾಡಿ ಎಂದು ಆಗ್ರಹಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಟಿಕೆಟ್ ಕಲೆಕ್ಟರ್, ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಕೊಪ್ಪಳ ಮೂಲದ ಪ್ರಯಾಣಿಕ ಮೊಹಮ್ಮದ್ ಭಾಷಾ ಹಲ್ಲೆಗೊಳಗಾದವರು. ಟಿಕೆಟ್ ಕಲೆಕ್ಟರ್‌ಗೆ ಕನ್ನಡ ಮಾತನಾಡು ಎಂದು ಇವರು ಆಗ್ರಹಿಸಿದಾಗ, ಟಿಕೆಟ್ ಕಲೆಕ್ಟರ್ ಕನ್ನಡ ಬರಲ್ಲ ಎಂದಿದ್ದಾನೆ. ಕರ್ನಾಟಕದಲ್ಲಿ ಇದ್ದೀರಿ, ಕನ್ನಡ ಕಲಿಯೋದಕ್ಕೆ ಆಗಲ್ವಾ ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ಟಿಕೆಟ್ ಕಲೆಕ್ಟರ್, ಮೊಹಮ್ಮದ್ ಭಾಷಾ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಇನ್ನು ಕನ್ನಡದ ನೆಲದಲ್ಲಿ ಕನ್ನಡಿಗನ ಮೇಲೆ ದೌರ್ಜನ್ಯ ಖಂಡಿಸಿ ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ದೌರ್ಜನ್ಯವೆಸಗಿದ ಟಿಕೆಟ್ ಕಲೆಕ್ಟರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ಪ್ರಯಾಣಿಕ ಮಹಮದ್ ಭಾಷಾ ಕೂಡ ಭಾಗಿಯಾಗಿದ್ದರು.
ಪ್ರಯಾಣಿಕನ ಮೇಲೆ ದೌರ್ಜನ್ಯ ಮಾಡಿದ ಟಿಕೆಟ್ ಕಲೆಕ್ಟರ್ ಅಮಾನತು ಮಾಡುವಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕನ್ನಡಿಗರು ಭಯದ ವಾತಾವರಣದಲ್ಲಿದ್ದು, ಕೂಡಲೇ ಕಲೆಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕರವೇ ಮುಖಂಡ ಗಿರೀಶಾನಂದ ಎಚ್ಚರಿಕೆ ನೀಡಿದ್ದಾರೆ.
ಹಲ್ಲೆ ಪ್ರಕರಣ; ಹೈಕೋರ್ಟ್ ಮೊರೆ ಹೋಗಿ ಬಚಾವಾದ ವಿಂಗ್ ಕಮಾಂಡರ್
ಬೆಂಗಳೂರು: ಕಾರಿಗೆ ಬೈಕ್ ಟಚ್ ಆದ ಕ್ಷುಲ್ಲಕ ಕಾರಣಕ್ಕೆ ಹುಟ್ಟಿಕೊಂಡ ರೋಡ್ ರೇಜ್ (Road Rage) ಪ್ರಕರಣದಲ್ಲಿ ಕನ್ನಡಿಗನ ಮೇಲೆ ಯದ್ವಾತದ್ವಾ ಹಲ್ಲೆ (Assault case) ಮಾಡಿ ಬಳಿಕ ಕನ್ನಡದ ನೆಪ ಒಡ್ಡಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ಎಸಗಲಾಗಿದೆ ಎಂಬ ಕತೆ ಕಟ್ಟಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ (Wing Commander Shiladitya Bose) ಇದೀಗ ಹೈಕೋರ್ಟ್ (Karnataka high court) ಮೊರೆ ಹೋಗಿದ್ದಾನೆ. ಪೊಲೀಸರು ಇವನ ಮೇಲೆ ಕೊಲೆ ಯತ್ನ ಪ್ರಕರಣ ಜಡಿದಿದ್ದರು. ಆದರೆ ಇವನ ಮೇಲೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ.
ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಏಕಾಏಕಿ ಬೈಕ್ ಸವಾರ ವಿಕಾಸ್ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆ ಕರ್ನಾಟಕದಲ್ಲಿ ಸಾಕಷ್ಟು ಆಕ್ರೋಶ ಹುಟ್ಟಿಸಿತ್ತು. ಬಳಿಕ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಾಗಿತ್ತು. ಸದ್ಯ ಈ ಕೊಲೆ ಯತ್ನ ಪ್ರಕರಣ ರದ್ದು ಕೋರಿ ಶಿಲಾದಿತ್ಯ ಬೋಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅವನ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಜೊತೆಗೆ ದೂರುದಾರ ವಿಕಾಸ್ ಕುಮಾರ್ಗೂ ನೋಟಿಸ್ ಜಾರಿಗೆ ಆದೇಶಿಸಿದೆ.
ಶಿಲಾದಿತ್ಯ ಬೋಸ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ವಿಕಾಸ್ ಹಲ್ಲೆಯಿಂದ ಶಿಲಾದಿತ್ಯ ಬೋಸ್ಗೆ ಗಂಭೀರ ಗಾಯವಾಗಿದೆ. ವಿಕಾಸ್ಗೆ ಸಣ್ಣ ಗಾಯವೆಂದು ಎಫ್ಐಆರ್ನಲ್ಲೇ ಉಲ್ಲೇಖವಾಗಿದೆ. ಆದರೂ ಶಿಲಾದಿತ್ಯ ವಿರುದ್ಧ ಕೊಲೆ ಯತ್ನದ FIR ದಾಖಲಿಸಲಾಗಿದೆ. 12 ಗಂಟೆ ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.
ವಾದ ಪ್ರತಿವಾದ ಆಲಿಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ, ಶಿಲಾದಿತ್ಯ ಬೋಸ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಶಿಲಾದಿತ್ಯ ಬೋಸ್ ಪೊಲೀಸರ ವಿಚಾರಣೆಗೆ ಸಹಕರಿಸಬೇಕು. ಸಮನ್ಸ್ ನೀಡುವಾಗ ಕಾನೂನಿನ ಪ್ರಕ್ರಿಯೆ ಪಾಲಿಸಬೇಕು. ಹೈಕೋರ್ಟ್ ಅನುಮತಿ ಇಲ್ಲದೇ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ಆದೇಶ ಹೊರಡಿಸಿದೆ.
ವಿಂಗ್ ಕಮಾಂಡರ್ ತನ್ನ ರಕ್ತ ಸುರಿಯುವ ಮುಖವಿಟ್ಟುಕೊಂಡು ಮಾಡಿದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಅದು ಸುದ್ದಿಯಾಗಿತ್ತು. ಹಲವು ರಾಷ್ಟ್ರೀಯ ಮಾಧ್ಯಮಗಳು ಈತನ ಮಾತನ್ನು ನಂಬಿ, ಕನ್ನಡದ ಕಾರಣಕ್ಕೆ ಹಲ್ಲೆ ಎಂದು ವರದಿ ಮಾಡಿದ್ದವು. ಬೆಂಗಳೂರಿಗರ ಇಮೇಜ್‌ಗೆ ಧಕ್ಕೆ ಬರುವಂತೆ ಈತ ಬಿಂಬಿಸಿದ್ದ. ಪೊಲೀಸರು, ಕನ್ನಡಿಗ ವಿಕಾಸ್‌ನನ್ನು ಬಂಧಿಸಿದ್ದರು. ಆದರೆ ಬಳಿಕ ಹೊರಬಂದ ಸಿಸಿಟಿವಿ ವಿಡಿಯೋಗಳು, ವಿಂಗ್ ಕಮಾಂಡರ್‌ನ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟಿದ್ದವು. ಈತನೇ ಮಾರಕ ಹಲ್ಲೆ ನಡೆಸಿದ್ದುದು ಗೊತ್ತಾಗಿತ್ತು. ಬಳಿಕ ಪೊಲೀಸರು ಆತನ ಮೇಲೆ ಕಠಿಣ ಕೇಸ್ ದಾಖಲಿಸಿದ್ದರು. ಸಿಎಂ ಕೂಡ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದರು.
ಇದನ್ನೂ ಓದಿ: Road Rage Case: ವಿಂಗ್ ಕಮಾಂಡರ್ ವಿರುದ್ಧ ಎಫ್‌ಐಆರ್; ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಎಂದ ಸಿಎಂ