ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KSDL: ಕೆಎಸ್‌ಡಿಎಲ್‌ಗೆ 416 ಕೋಟಿ ರೂ. ದಾಖಲೆಯ ನಿವ್ವಳ ಲಾಭ

KSDL: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್‌ಡಿಎಲ್) 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, ₹416 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ಸಾಲಿಗಿಂತ ₹54 ಕೋಟಿ ಹೆಚ್ಚಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.

KSDL: ಕೆಎಸ್‌ಡಿಎಲ್‌ಗೆ 416 ಕೋಟಿ ರೂ. ದಾಖಲೆಯ ನಿವ್ವಳ ಲಾಭ

Profile Siddalinga Swamy Apr 2, 2025 5:48 PM

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್‌ಡಿಎಲ್) (KSDL)‌ 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, ₹416 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ಸಾಲಿಗಿಂತ ₹54 ಕೋಟಿ ಹೆಚ್ಚಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ್ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಸಚಿವರು, ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆಯು 43,144 ಮೆಟ್ರಿಕ್ ಟನ್ ಸಾಬೂನು ಮತ್ತು ಮಾರ್ಜಕಗಳನ್ನು ಮಾರಾಟ ಮಾಡಿ, ದಾಖಲೆಯ ಲಾಭ ಗಳಿಸಿದೆ. ಲಾಭದಲ್ಲಿ ನಿಯಮಾನುಸಾರ ಶೇ.30 ರಷ್ಟನ್ನು, ಅಂದರೆ ₹123 ಕೋಟಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಸಂಸ್ಥೆಯು 2023-24ರಲ್ಲಿ 37,916 ಟನ್ ಉತ್ಪನ್ನ ಮಾರಾಟ ಮಾಡಿ, 1,570 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ 362 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಆ ಪೈಕಿ 108 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಕೊಡಲಾಗಿತ್ತು. ಹಿಂದೆ ಸಂಸ್ಥೆಯು ಲಾಭಾಂಶ ಕೊಡುವ ಸರ್ಕಾರಿ ಉದ್ದಿಮೆಗಳ ಪೈಕಿ 21ನೇ ಸ್ಥಾನದಲ್ಲಿತ್ತು. ಈಗ 3ನೇ ಸ್ಥಾನದಲ್ಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

2024-25 ರಲ್ಲಿ ಸಂಸ್ಥೆಯು ಉತ್ಪಾದನೆ, ಮಾರಾಟ ಮತ್ತು ಲಾಭ ಮೂರರಲ್ಲೂ ಸಾರ್ವಕಾಲಿಕ ದಾಖಲೆ ಬರೆದಿದೆ.‌ ಕಳೆದ ಸಾಲಿನಲ್ಲಿ ರಫ್ತು ವಹಿವಾಟಿನ ಮೂಲಕವೂ ಕೆಎಸ್‌ಡಿಎಲ್ 23.2 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ವಿವರಿಸಿದ್ದಾರೆ.

ಸಂಸ್ಥೆಯು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ 19 ಉತ್ಪನ್ನಗಳನ್ನು ಒಳಗೊಂಡಿದೆ. ಇದರಲ್ಲಿ ಮೈಸೋಪು, ಹ್ಯಾಂಡ್ ವಾಶ್, ಶವರ್ ಜೆಲ್, ಕುಡಿಯುವ ನೀರು, ಅಗರಬತ್ತಿ ಮುಂತಾದ ಉತ್ಕೃಷ್ಟ ಉತ್ಪನ್ನಗಳನ್ನು ಹೊಂದಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ದಕ್ಷ ಉತ್ಪಾದನಾ ವಿಧಾನದ ಮೂಲಕ ಲಾಭವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯು ಈಗ ಇ-ಕಾಮರ್ಸ್ ಮತ್ತು ಆಧುನಿಕ ವ್ಯಾಪಾರ ಮಾದರಿಗಳನ್ನು ಅಳವಡಿಸಿಕೊಂಡಿದೆ. ಸಂಸ್ಥೆಯ ಚೆನ್ನೈ, ಹೈದರಾಬಾದ್, ಮುಂಬೈ, ಅಹಮದಾಬಾದ್, ದೆಹಲಿ, ಛತ್ತೀಸ್‌ಗಢ ಮತ್ತು ಕೋಲ್ಕತಾ ಹಾಗೂ ಒಡಿಶಾ ಶಾಖೆಗಳಲ್ಲಿ ಕೂಡ ವಹಿವಾಟು ಹೆಚ್ಚಳ ಕಂಡಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯಲ್ಲಿ ಈಗ ಮೂರು ಪಾಳಿಗಳ ಕೆಲಸದ ವ್ಯವಸ್ಥೆ ಇದೆ. ವಿಜಯಪುರದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸ್ಥೆಯ ಘಟಕವನ್ನು ತೆರೆಯಲಾಗುವುದು.‌ ಇದಕ್ಕೆ 50 ಎಕರೆ ಜಾಗವನ್ನು ಕೆಐಎಡಿಬಿ ಹಂಚಿಕೆ ಮಾಡಿದೆ. 2025-26ರಲ್ಲಿ ಸಂಸ್ಥೆಯು 1,819 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | DK Shivakumar: ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ: ಡಿ.ಕೆ.ಶಿವಕುಮಾರ್

ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ.ಪ್ರಶಾಂತ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ಲಾಭದ ಪ್ರಮಾಣ ಏರುಮುಖವಾಗಿದೆ. ಪಾರದರ್ಶಕತೆ, ದಕ್ಷತೆ, ಮಾರುಕಟ್ಟೆ ವಿಸ್ತರಣೆ ಮತ್ತು ಗುಣಮಟ್ಟ ಈ‌ ‌ನಾಲ್ಕು ಅಂಶಗಳಿಗೆ ಆದ್ಯತೆ ನೀಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು. ಸಂಸ್ಥೆಯ ಸಾಬೂನು ಘಟಕವು ಕಳೆದ ಸಾಲಿನಲ್ಲಿ 36,268 ಟನ್, ಡಿಟರ್ಜೆಂಟ್ ಘಟಕವು 5,788 ಟನ್ ಮತ್ತು ಸೌಂದರ್ಯ ವರ್ಧಕಗಳ ಘಟಕವು 1,087 ಟನ್ ಉತ್ಪನ್ನಗಳನ್ನು ತಯಾರಿಸಿದೆ ಎಂದು ಅವರು ಹೇಳಿದ್ದಾರೆ.