Lakkundi Excavation: ಲಕ್ಕುಂಡಿಯಲ್ಲಿ ಉತ್ಖನನ: ಎರಡನೇ ದಿನ ಶಿವಲಿಂಗದ ಪೀಠ ಪತ್ತೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಹಂತ ಹಂತವಾಗಿ ಉತ್ಖನನ ಕಾರ್ಯ ನಡೆಯುತ್ತಿದೆ. ಉತ್ಖನನದ ಎರಡನೇ ದಿನದ ಆರಂಭದಲ್ಲೇ ಶಿವಲಿಂಗ ಪೀಠದ ಮಾದರಿಯ ಪುರಾತನ ಅವಶೇಷ ಗೋಚರವಾಗಿದ್ದು, ಇದು ಶೈವ ಸಂಸ್ಕೃತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ಕುರುಹು ಎಂದು ಪುರಾತತ್ವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಕ್ಕುಂಡಿಯಲ್ಲಿ ಪಾಣಿಪೀಠ ಪತ್ತೆ -
ಗದಗ, ಜ.17: ಕಲ್ಯಾಣಿ ಚಾಲುಕ್ಯರ ಕಲಾ ವೈಭವದ ಜೀವಂತ ಸಾಕ್ಷಿಯಾಗಿರುವ, “ದೇವಸ್ಥಾನಗಳ ಸ್ವರ್ಗ” ಎಂದೇ ಖ್ಯಾತಿ ಪಡೆದ ಗದಗ (gadag news) ಜಿಲ್ಲೆಯ ಲಕ್ಕುಂಡಿಯಲ್ಲಿ (Lakkundi Excavation) ಪುರಾತತ್ವ ಇಲಾಖೆಯಿಂದ ಶೋಧ ನಿನ್ನೆ ಆರಂಭವಾಗಿದ್ದು, ಎರಡನೇ ದಿನ ಮಹತ್ವದ ಅವಶೇಷಗಳು ಪತ್ತೆಯಾಗಿವೆ. ಲಕ್ಕುಂಡಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ಎರಡನೇ ದಿನ ಶಿವಲಿಂಗದ ಪಾಣಿಪೀಠದ ಮಾದರಿಯ ಪ್ರಾಚೀನ ಆಕೃತಿಗಳು ಪತ್ತೆಯಾಗಿದೆ.
ಉತ್ಖನನದ ಎರಡನೇ ದಿನದ ಆರಂಭದಲ್ಲೇ ಶಿವಲಿಂಗ ಪೀಠದ ಮಾದರಿಯ ಪುರಾತನ ಅವಶೇಷ ಗೋಚರವಾಗಿದ್ದು, ಇದು ಶೈವ ಸಂಸ್ಕೃತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ಕುರುಹು ಎಂದು ಪುರಾತತ್ವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಹಂತ ಹಂತವಾಗಿ ಉತ್ಖನನ ಕಾರ್ಯ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಎರಡನೇ ದಿನದ ಉತ್ಖನನ ಕಾರ್ಯವನ್ನು ಸುಮಾರು 10 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಕೈಗೊಳ್ಳಲಾಗಿದೆ.
ನಿನ್ನೆ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎನ್ ಶ್ರೀಧರ್ ಅವರು ಉತ್ಖನನ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಮೊದಲ ದಿನ ತಂಡವು ಸುಮಾರು ನಾಲ್ಕು ಇಂಚಿನಷ್ಟು ಆಳಕ್ಕೆ ತೋಡಿ ಪರಿಶೀಲನೆ ನಡೆಸಿದ್ದು, ಎರಡನೇ ದಿನದಿಂದ ಇನ್ನಷ್ಟು ಆಳವಾಗಿ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಉತ್ಖನನ ಮುಂದುವರಿಸಲಾಗಿದೆ. ಪುರಾತತ್ವ ಇಲಾಖೆಯ ಮಾಹಿತಿ ಪ್ರಕಾರ, ಈ ಉತ್ಖನನ ಕಾರ್ಯವು ಸುಮಾರು ಎರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನ ಆರಂಭ; ಇಡೀ ಗ್ರಾಮ ಸ್ಥಳಾಂತರ?
ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ
ಉತ್ಖನನ ಕಾರ್ಯ ನಿರ್ವಿಘ್ನವಾಗಿ ನಡೆಯುವ ದೃಷ್ಟಿಯಿಂದ, ಉತ್ಖನನ ನಡೆಯುತ್ತಿರುವ ಪ್ರದೇಶವನ್ನು ‘ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲಾಗಿದೆ. ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಅವರು ಉತ್ಖನನ ಕಾರ್ಯ ಮುಗಿಯುವವರೆಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ ಸಾರ್ವಜನಿಕರ ಫೋಟೋ ಹಾಗೂ ವೀಡಿಯೋಗ್ರಫಿಗೂ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಉತ್ಖನನ ಕಾರ್ಯಕ್ಕೆ ಯಾವುದೇ ರೀತಿಯ ಅಡಚಣೆ ಆಗಬಾರದು ಎಂಬ ಕಾರಣದಿಂದಲೇ ಈ ನಿರ್ಬಂಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಒಂದು ಪಾಲು ಕುಟುಂಬಕ್ಕೆ! ನಮಗೆ ಆ ಜಾಗ ಬೇಡ ಎಂದು ಕುಟುಂಬ!
ಆದರೆ, ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಉತ್ಖನನಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಉತ್ಖನನ ನಡೆಯುವ ಪ್ರದೇಶಕ್ಕೆ ಏಕಾಏಕಿ ಸಾರ್ವಜನಿಕ ಪ್ರವೇಶ ನಿಷೇಧಿಸಿದ ಕ್ರಮ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ನಡೆಯುವ ಪ್ರಸಿದ್ಧ ವೀರಭದ್ರೇಶ್ವರ ಜಾತ್ರೆಗೆ ಉತ್ಖನನದಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಅಗ್ನಿಕುಂಡ ನಿರ್ಮಿಸುವ ಜಾಗದಲ್ಲಿಯೇ ಉತ್ಖನನ ಕಾರ್ಯ ನಡೆಯುತ್ತಿರುವುದು ಅವರ ಆಕ್ಷೇಪಕ್ಕೆ ಪ್ರಮುಖ ಕಾರಣವಾಗಿದೆ.
ದೇವಸ್ಥಾನ ಸಮಿತಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಉತ್ಖನನ ಕಾರ್ಯ ಆರಂಭಿಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಳೆದ 50 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ಉತ್ಖನನದಿಂದ ಧಕ್ಕೆಯಾಗಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. “ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಪುರಾತತ್ವ ಕಾರ್ಯಗಳ ಜೊತೆಗೆ ಧಾರ್ಮಿಕ ಸಂಪ್ರದಾಯಗಳಿಗೂ ಗೌರವ ನೀಡಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಏಕಾಏಕಿ ಪ್ರದೇಶವನ್ನು ನಿರ್ಬಂಧಿಸಿರುವ ಕ್ರಮ ಜನರಲ್ಲಿ ಆಕ್ರೋಶ ಮೂಡಿಸಿದೆ.