ಬೆಂಗಳೂರು: ಇಂಧನ ಸಚಿವ ಕೆಜೆ ಜಾರ್ಜ್ (Power minister KJ George) ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಧಿಕಾರಿ 50 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ (Lokayukta Raid) ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಜ್ಯೋತಿ ಪ್ರಕಾಶ್ ಅವರು, ಇಂಧನ ಸಚಿವ ಕೆಜೆ ಜಾರ್ಜ್ ಅವರ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿದ್ಯುತ್ ಸಂಪರ್ಕಕ್ಕೆ ಅನುಮತಿ (ಎನ್‌ಒಸಿ) ನೀಡಲು ಲಂಚ ಪಡೆಯುತ್ತಿದ್ದ ಇಂಧನ ಸಚಿವರ ವಿಶೇಷಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 50 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಜ್ಯೋತಿ ಪ್ರಕಾಶ್ ಹಾಗೂ ಅವರ ಕಾರು ಚಾಲಕ ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಬ್ಯಾಡರಹಳ್ಳಿಯ ನಿವಾಸಿಯಾದ ಕೆ.ಎಂ. ಅನಂತರಾಜು ಅವರು ಬಡಾವಣೆ ನಿರ್ಮಾಣ ಕಾಮಗಾರಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Lokayukta Raid: ಕೊಪ್ಪಳದಲ್ಲಿ ಭ್ರಷ್ಟ ಅಧಿಕಾರಿಗಳ ಮನೆಗೆ ಲೋಕಾಯುಕ್ತ ದಾಳಿ
ಆದರೆ ಇದಕ್ಕೆ ಎನ್‌ಒಸಿ ನೀಡಲು ಜ್ಯೋತಿ ಪ್ರಕಾಶ್ ಅವರು 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಅನಂತರಾಜು ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದ ತಂಡ ಅನಂತರಾಜು ಅವರಿಂದ 50 ಸಾವಿರ ರೂ. ಸ್ವೀಕರಿಸುತ್ತಿದ್ದ ಜ್ಯೋತಿ ಪ್ರಕಾಶ್ ಮತ್ತು ಅವರ ಚಾಲಕ ನವೀನ್‌ನನ್ನು ಅರೆಸ್ಟ್ ಮಾಡಿದ್ದಾರೆ.