ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ: ಗಡಿಪಾರು ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡಿಪಾರು ಆದೇಶ ವಿರೋಧದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಏಕಸದಸ್ಯ ಪೀಠದ ಆದೇಶವನ್ನು ಸಮರ್ಥಿಸಿಕೊಂಡ ನ್ಯಾಯಾಲಯ, ತಿಮರೋಡಿಗೆ ಆರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ನಿಷೇಧವನ್ನು ಮುಂದುವರಿಸಿದೆ.

ಮಹೇಶ್ ಶೆಟ್ಟಿ (ಸಂಗ್ರಹ ಚಿತ್ರ)

ಬೆಂಗಳೂರು, ಮಾ. 18: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಷಡ್ಯಂತ್ರ ಆರೋಪ ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Timarodi) ಮತ್ತೊಮ್ಮೆ ಕಾನೂನು ಹಿನ್ನಡೆ ಆಗಿದೆ. ಗಡಿಪಾರು ಆದೇಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದೆ.

ಗಡಿಪಾರು ಆದೇಶದ ವಿರುದ್ಧದ ಆಕ್ಷೇಪಣೆಗಳನ್ನು ಪರಿಗಣಿಸಲು ಹಾಗೂ ಮೂರು ವಾರಗಳೊಳಗೆ ಆದೇಶ ನೀಡಲು ಉಪವಿಭಾಗಾಧಿಕಾರಿಗೆ ಏಕಸದಸ್ಯ ಪೀಠ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಏಕಸದಸ್ಯ ಪೀಠದ ಆದೇಶವನ್ನು ಸಮರ್ಥಿಸಿಕೊಂಡ ವಿಭಾಗೀಯ ಪೀಠ, ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿ ವಜಾ ಮಾಡಿದೆ.

ಈ ಮೂಲಕ ಸತತವಾಗಿ ಕಾನೂನು ಹೋರಾಟದ ಮೂಲಕ ರಕ್ಷಣೆ ಪಡೆಯಲು ಯತ್ನಿಸುತ್ತಿದ್ದ ತಿಮರೋಡಿಗೆ ಭಾರೀ ಮುಖಭಂಗವಾಗಿದೆ.

ಪ್ರಕರಣ ಹಿನ್ನಲೆ

ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುವ ಪ್ರಚೋದನಕಾರಿ ಭಾಷಣಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಗಣಿಸಿ, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ತಿಮರೋಡಿ ವಿರುದ್ಧ ಗಡಿಪಾರು ಆದೇಶ ಹೊರಡಿಸಿದ್ದರು.

ಕೋರ್ಟ್ ಕಠಿಣ ನಿಲುವು

ಈ‌ ಆದೇಶವನ್ನು ಪ್ರಶ್ನಿಸಿ ತಿಮ್ಮರೋಡಿ ಹೈಕೋರ್ಟ್ ಮೊರೆ ಹೋಗಿದ್ದರು. ವಾದ, ಪ್ರತಿ ವಾದಗಳನ್ನು ಆಲಿಸಿದ ಘನ ನ್ಯಾಯಾಲಯವು ತಿಮ್ಮರೋಡಿಯವರ ಅರ್ಜಿಯನ್ನಿ ವಜಾಗೊಳಿಸಿ‌ ಆದೇಶ ಹೊರಡಿಸಿದೆ.

ತಿಮ್ಮರೋಡಿ ವಿರುದ್ಧ 3ನೇ ಬಾರಿ ಗಡಿಪಾರು ಆದೇಶ

ಇನ್ನು ಈ‌ ಹಿಂದಿನ ಗಡಿಪಾರು‌ ಆದೇಶವನ್ನು ಪ್ರಶ್ನಿಸಿ ತಿಮ್ಮರೋಡಿ ಹೈಕೊರ್ಟ್ ಮೊರೆ ಹೋಗಿದ್ದರು. ಅದರಂತೆ, ಹಿಂದಿನ ಎರಡನೇ ಗಡಿಪಾರು‌ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿ, ನಿಯಮಬದ್ಧವಾಗಿ ಮರುಪರಿಶೀಲನೆ ನಡೆಸುವಂತೆ ಪುತ್ತೂರು ಎಸಿಗೆ ಸೂಚಿಸಿತ್ತು. ಅದರಂತೆ ಎಸಿ ಅವರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಹೈಕೋರ್ಟ್ ನೀಡಿದ ಗಡುವಿನೊಳಗೆ ಹೊಸದಾಗಿ ಈ ಮೂರನೇ ಆದೇಶವನ್ನು ಹೊರಡಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ; ಪುತ್ತೂರು ಎಸಿಯಿಂದ ಕ್ರಮ

ಈ ಆದೇಶದ ಪ್ರಕಾರ, ತಿಮರೋಡಿ ಅವರು 2026ರ ಮಾರ್ಚ್ 16 ರಿಂದ ಸೆಪ್ಟೆಂಬರ್ 19 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ. ಈ ಆರು ತಿಂಗಳ ಅವಧಿಯಲ್ಲಿ ಅವರು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಕಡ್ಡಾಯವಾಗಿ ನೆಲೆಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಬಾರಿ ಆದೇಶವು ಕಾನೂನುಬದ್ಧವಾಗಿ ಮತ್ತು ಹೈಕೋರ್ಟ್ ಸೂಚನೆಯಂತೆಯೇ ಇರುವುದರಿಂದ, ತಿಮರೋಡಿ ಅವರ ಅರ್ಜಿಯನ್ನು ಮಾನ್ಯ ಮಾಡಲು ನ್ಯಾಯಾಲಯ ನಿರಾಕರಿಸಿದೆ.

ಇನ್ನು, ಹೈಕೋರ್ಟ್‌ನ ಈ ನಿರ್ಧಾರದಿಂದಾಗಿ ತಿಮರೋಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ತೊರೆಯುವುದು ಈಗ ಅನಿವಾರ್ಯವಾಗಿದೆ. ಈಗಾಗಲೇ ಪೊಲೀಸರು ತಿಮರೋಡಿ ಅವರ ಮನೆಗೆ ಭೇಟಿ ನೀಡಿ, ಆದೇಶದ ಪ್ರತಿಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಜಿಲ್ಲೆಯಾದ್ಯಂತ ಈ ಬೆಳವಣಿಗೆಯು ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ಆರು ತಿಂಗಳು ಅವರು ಜಿಲ್ಲೆಯಿಂದ ಹೊರಗುಳಿಯಬೇಕಿದೆ.