ಮಂಡ್ಯ: ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಇತ್ತೀಚೆಗೆ ಮೃತಪಟ್ಟ ಭಿಕ್ಷುಕಿ ಮನೆಯಲ್ಲಿ ಲಕ್ಷಗಟ್ಟಲೇ ಹಣ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ಜಿಲ್ಲೆಯ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ (Mandya Beggar woman) ರಾಶಿ ರಾಶಿ ಹಣ ಪತ್ತೆಯಾಗಿದೆ.
ಹೌದು, ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯ ಸಾವಿತ್ರಿ ಎಂಬ ವೃದ್ಧ ಭಿಕ್ಷುಕಿಯ ಮನೆಯಲ್ಲಿ ಹಣದ ರಾಶಿ ಪತ್ತೆಯಾಗಿದೆ. ಸಾವಿತ್ರಿ ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಬಂದ ಹಣವನ್ನು ಸಂಗ್ರಹಿಸಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಸುಮಾರು 10 ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಚೀಲಗಳಲ್ಲಿ ತುಂಬಿ ಮನೆಯಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ವೃದ್ಧೆ ಹಲವು ವರ್ಷಗಳಿಂದ ಒಂಟಿಯಾಗಿ ಮನೆಯೊಂದರಲ್ಲಿ ವಾಸವಾಗಿದ್ದರು. ಗುರುವಾರ ಸಾವಿತ್ರಿ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ. ಬಳಿಕ ಮನೆಗೆ ತೆರಳಿ ಪರಿಶೀಲಿಸಿದಾಗ, ವೃದ್ಧೆ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂದಿದೆ.
ತಕ್ಷಣ ಸ್ಥಳೀಯರು ಆಕೆಗೆ ಊಟ-ತಿಂಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಳಿಕ ಮನೆಯ ಪರಿಸ್ಥಿತಿ ಪರಿಶೀಲಿಸಿದ ಸಂದರ್ಭದಲ್ಲಿ ಚೀಲಗಳಲ್ಲಿ ಅಪಾರ ಪ್ರಮಾಣದ ನೋಟುಗಳು ಮತ್ತು ಚಿಲ್ಲರೆ ನಾಣ್ಯಗಳು ತುಂಬಿರುವುದು ಕಂಡುಬಂದಿವೆ.
ಹಣ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಹಾಗೂ ಸ್ವಯಂ ಸೇವಕರು ಸೇರಿ ಹಣ ಎಣಿಕೆ ಕಾರ್ಯ ಆರಂಭಿಸಿದ್ದಾರೆ. ವೃದ್ಧೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತ ಸಂಗ್ರಹವಾಗಿದೆ ಎಂದು ತಿಳಿದುಬಂದಿದ್ದು, ಆ ಹಣವನ್ನು ಅವರ ಹೆಸರಿನಲ್ಲೇ ಬ್ಯಾಂಕ್ ಖಾತೆಯಲ್ಲಿ ಡೆಪಾಸಿಟ್ ಮಾಡಲು ನಿರ್ಧರಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮಂಡ್ಯದಲ್ಲಿ ಮೃತಪಟ್ಟ ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ಹಣ; ಸಂಬಂಧಿಕರು ಶಾಕ್!
ಇತ್ತೀಚೆಗಷ್ಟೇ ಮಂಡ್ಯ ನಗರದಲ್ಲಿ ಮೃತಪಟ್ಟಿದ್ದ ವೃದ್ಧೆಯೊಬ್ಬರ ಮನೆಯಲ್ಲಿ ಇದೇ ರೀತಿಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಇದೀಗ ಶ್ರೀರಂಗಪಟ್ಟಣದಲ್ಲೂ ಭಿಕ್ಷುಕಿಯ ಮನೆಯಲ್ಲಿ ಹಣದ ರಾಶಿ ಪತ್ತೆಯಾಗಿರುವುದು ಮಂಡ್ಯ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.