SL Bhyrappa: ಎಸ್‌ಎಲ್ ಭೈರಪ್ಪನವರ ಚಿತಾಭಸ್ಮ ಕಾವೇರಿ ನದಿಯಲ್ಲಿ ವಿಸರ್ಜನೆ
SL Bhyrappa: ಶ್ರೀರಂಗಪಟ್ಟಣದಲ್ಲಿರುವ ಸ್ನಾನಘಟ್ಟದಲ್ಲಿ ಕಾವೇರಿ ನದಿಯಲ್ಲಿ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಯಿತು. ಭೈರಪ್ಪನವರ ಮಕ್ಕಳಾದ ಉದಯಶಂಕರ್, ರವಿಶಂಕರ್ ಅಸ್ಥಿ ವಿಸರ್ಜನೆ ನೆರವೇರಿಸಿದರು. ಕಾವೇರಿ ನದಿ ಭೈರಪ್ಪನವರ ಕಾದಂಬರಿಗಳಲ್ಲಿ ಅವಿಭಾಜ್ಯ ಅಂಗವಾಗಿದೆ.

-

ಮೈಸೂರು: ಕನ್ನಡದ ಖ್ಯಾತ ಕಾದಂಬರಿಕಾರ, ಪದ್ಮವಿಭೂಷಣ ಪುರಸ್ಕೃತ ಎಸ್ ಎಲ್ ಭೈರಪ್ಪನವರ (SL Bhyrappa) ಚಿತಾಭಸ್ಮವನ್ನು ಇಂದು ಕಾವೇರಿ ನದಿಯಲ್ಲಿ (Kaveri river) ವಿಸರ್ಜನೆ ಮಾಡಲಾಯಿತು. ಶ್ರೀರಂಗಪಟ್ಟಣದ ರಂಗನಾಥ ಸ್ನಾನಘಟ್ಟದಲ್ಲಿ ಭೈರಪ್ಪನವರ ಪುತ್ರರಾದ ರವಿಶಂಕರ್, ಉದಯಶಂಕರ್ ಹಾಗೂ ಕುಟುಂಬ ಸದಸ್ಯರು ಅಸ್ಥಿವಿಸರ್ಜನೆ ಮಾಡಿದರು. ನಿನ್ನೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭೈರಪ್ಪನವರ ಅಂತ್ಯಕ್ರಿಯೆ ನೆರವೇರಿತ್ತು.
ಕಳೆದ ಬುಧವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಎಸ್.ಎಲ್ ಭೈರಪ್ಪ ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನ ಚಿರಶಾಂತಿ ಧಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗು ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತ್ತು. ಪುತ್ರರಾದ ರವಿಶಂಕರ್ ಹಾಗು ಉದಯಶಂಕರ್ ಅಂತಿಮ ವಿಧಿ ವಿಧಾನ ನೆರವೇರಿಸಿದ್ದರು. ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್, ಮಾಜಿ ಸಂಸದ ಪ್ರತಾಪ್‌ಸಿಂಹ ಮತ್ತಿತರರು ಜೊತೆಯಾಗಿ ಅಗ್ನಿಸ್ಪರ್ಶ ಮಾಡಿದ್ದರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಡಾ.ಎಚ್ ಸಿ ಮಹದೇವಪ್ಪ, ಮಧು ಬಂಗಾರಪ್ಪ ಮೊದಲಾದ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಮೈಸೂರು ಹಾಗೂ ಬೆಂಗಳೂರಿನಲ್ಲಿ ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು. ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದರು. ಸಿಎಂ ಸಿದ್ದರಾಮಯ್ಯ ಅವರು ಅಂತಿಮ ದರ್ಶನ ಪಡೆದಿದ್ದರು. ಮೈಸೂರಿನಲ್ಲಿ ಭೈರಪ್ಪನವರ ಸ್ಮಾರಕ ನಿರ್ಮಿಸುವುದಾಗಿಯೂ ಘೋಷಣೆ ಮಾಡಿದ್ದರು.