ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸತತ ಕಾರ್ಯಾಚರಣೆ ನಡೆಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಹೊರರಾಜ್ಯ ಆಂಧ್ರ ಪ್ರದೇಶಕ್ಕೆ ತೆರಳಿ ರಹಸ್ಯ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲಾಖೆಯ ಕಾರ್ಯಚರಣೆ ಬಗ್ಗೆ ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಮಾಜ ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.
ಮಳವಳ್ಳಿಯ 30 ವರ್ಷದ ಮಹಿಳೆಗೆ 3 ಜನ ಹೆಣ್ಣುಮಕ್ಕಳಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಏಜೆಂಟ್ ಮೂಲಕ ಲಿಂಗ ಪತ್ತೆ ಮಾಡಿದ್ದು ಮಗು ಹೆಣ್ಣು ಅಂತಾ ಗೊತ್ತಾದಾಗ, ಐದು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣ ಹತ್ಯೆಗೆ ಮುಂದಾಗಿದ್ದನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಕ್ಷಣ ರಹಸ್ಯ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆಯು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ, ಇಲಾಖೆಯಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲು ಸಾಧ್ಯ ಅದನ್ನು ಪ್ರಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗೃತರಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದುಹಾಕಲು ಸಾಮಾಜಿಕ ಬದಲಾವಣೆ ಆಗುವುದು ಮುಖ್ಯ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಇಬ್ಬಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಅಜೀಂ ಪ್ರೇಂಜಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ