ಮಂಡ್ಯ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ (Kabini Reservoir) ಜಲಾಶಯಗಳು ತುಂಬುತ್ತಿವೆ. ಇದೀಗ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಾಗಿನ ಅರ್ಪಿಸಿದ್ದಾರೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಒಂದೇ ದಿನ ಬಾಗಿನ ಅರ್ಪಿಸುತ್ತಿದ್ದ ವಾಡಿಕೆ ಇತ್ತು. ಆದರೆ ರೈತರು ಹಾಗೂ ಹೋರಾಟಗಾರರ ಪ್ರತಿಭಟನೆಗೆ ಹೆದರಿ ಸರ್ಕಾರ ಬಾಗಿನ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿತ್ತು. ಇದೀಗ ಬಾಗಿನ ಅರ್ಪಣೆ ಕಾರ್ಯಕ್ರಮ ನೆರವೇರಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಹಾಗೂ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು. ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಡ್ಯಾಂ ರಾಜ್ಯದಲ್ಲೇ ಅತಿ ವೇಗವಾಗಿ ತುಂಬುವ ಜಲಾಶಯ ಎಂಬ ಖ್ಯಾತಿ ಹೊಂದಿದೆ. ಅದರಂತೆ, ಕೇರಳದ ವಯನಾಡ್ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯವು ಕಳೆದ ವಾರವೇ ಬಹುತೇಕ ತುಂಬಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯದ ಗರಿಷ್ಠಮಟ್ಟ 84 ಅಡಿಗಳಾಗಿದ್ದು, ಮಂಗಳವಾರದ (ಜೂ.24) ನೀರಿನ ಮಟ್ಟ 78 ಅಡಿಗಳಿದೆ. ಸುಮಾರು 12 ಸಾವಿರ ಕ್ಯೂಸೆಕ್ ನೀರನ್ನು ಕಬಿನಿ ನದಿಗೆ ಹರಿಬಿಡಲಾಗಿದೆ. ಜಲಾಶಯಕ್ಕೆ ಸದ್ಯ 15,078 ಕ್ಯೂಸೆಕ್ ಒಳಹರಿವಿದ್ದು, ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದೆ.
93 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್‌ಎಸ್ (ಕೃಷ್ಣರಾಜಸಾಗರ) ಡ್ಯಾಂ ಸಂಪೂರ್ಣ ಭರ್ತಿ ಆಗಿದ್ದು ಜೂನ್ 30 ರಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಸಮರ್ಪಿಸಿದ್ದರು. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚೆಲುವರಾಯಸ್ವಾಮಿ ಹಾಗೂ ಹೆಚ್.ಸಿ ಮಹದೇವಪ್ಪ ಸೇರಿ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿಎಂ ಸಿದ್ದರಾಮಯ್ಯ ಅವರು ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದರು. ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯಗಳು ನೆರವೇರಿದ್ದವು.
ಈ ಸುದ್ದಿಯನ್ನೂ ಓದಿ: Kabini Dam: ಕಬಿನಿ ಡ್ಯಾಂ ಸುರಕ್ಷತೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ: ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ
ಕೆಆರ್‌ಎಸ್ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾದರೂ ಈ ಹಿಂದಿನ ಯಾವ ಮುಖ್ಯಮಂತ್ರಿ ಕೂಡ ಜೂನ್ನಲ್ಲಿ ಬಾಗಿನ ಅರ್ಪಿಸಿರಲಿಲ್ಲ.