ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾರ್‌ ಲೈಸೆನ್ಸ್ ನೀಡಲು 60 ಲಕ್ಷ ಲಂಚಕ್ಕೆ ಬೇಡಿಕೆ; ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ ಅಮಾನತು

Bribe case: ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದರ ಬೆನ್ನಲ್ಲೇ ಮದ್ಯದಂಗಡಿ ಲೈಸೆನ್ಸ್ ನೀಡಲು ಬರೋಬ್ಬರಿ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯದ ಅಬಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಅಬಕಾರಿ ಉಪ ಆಯುಕ್ತ ನಾಗಶಯನ.

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ (Excise department) 6,000 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿ ವಿಧಾನಸೌಧದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದರು. ಅಲ್ಲದೇ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಮದ್ಯದಂಗಡಿ ಲೈಸೆನ್ಸ್ ನೀಡಲು ಬರೋಬ್ಬರಿ 60 ಲಕ್ಷ ರೂ. ಲಂಚಕ್ಕೆ (Bribe case) ಬೇಡಿಕೆ ಇಟ್ಟಿದ್ದ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ನಾಗಶಯನ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸುಂದರ್ ಎಂಬುವವರು ಹೊಸದಾಗಿ ಸಿಎಲ್-7 (CL-7) ಬಾರ್ ತೆರೆಯಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಬಕಾರಿ ಅಧಿಕಾರಿಗಳು ಸಣ್ಣಪುಟ್ಟ ಕಾರಣ ನೀಡಿ ಪದೇಪದೆ ಅರ್ಜಿ ವಜಾ ಮಾಡುತ್ತಿದ್ದರು. ಅರ್ಜಿದಾರ ಸುಂದರ್ ಅವರು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ, ಪರವಾನಗಿ ನೀಡುವಂತೆ ನ್ಯಾಯಾಲಯದಿಂದ ಆದೇಶ ತಂದಿದ್ದರೂ ಪ್ರಯೋಜನವಾಗಿರಲಿಲ್ಲ.

ಪರವಾನಗಿ ನೀಡಲು 60 ಲಕ್ಷ ರೂ. ಬೇಡಿಕೆ

ಪರವಾನಗಿ ನೀಡಬೇಕಾದರೆ 60 ಲಕ್ಷ ರೂ. ಲಂಚ ನೀಡಬೇಕು ಎಂದು ಉಪ ಆಯುಕ್ತ ನಾಗಶಯನ ಅವರು ಸುಂದರ್ ಅವರಿಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತ ಆಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ಸುಂದರ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಭ್ರಷ್ಟಾಚಾರದ ವಿರುದ್ಧ ಸುಂದರ್ ಏಕಾಂಗಿ ಹೋರಾಟ ನಡೆಸುತ್ತಾ ಬಂದಿದ್ದರು.

ಈ ಪ್ರಕರಣವು ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲೂ ಭಾರಿ ಸದ್ದು ಮಾಡಿದೆ. ರಾಜ್ಯದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಯ ಅಮಾನತು ಆಗಿರುವುದು ಕಂಡುಬಂದಿದೆ.

Gold theft: ಕರಗ ಖ್ಯಾತಿಯ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಚಿನ್ನ ಕಳವು, ಅಧಿಕಾರಿ ಅಮಾನತು

ಸದನದಲ್ಲಿನ ತೀವ್ರ ಚರ್ಚೆ ಮತ್ತು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ಸರ್ಕಾರ, ಕೊನೆಗೂ ಅಬಕಾರಿ ಅಧಿಕಾರಿ ನಾಗಶಯನ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ ಎಂದು ತಿಳಿದುಬಂದಿದೆ.