ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mekedatu Dam Project: ಮೇಕೆದಾಟು ಎರಡು ರಾಜ್ಯಗಳಿಗೂ ಅನುಕೂಲಕರ; ತಮಿಳುನಾಡು ರಾಜಕೀಯ ನಾಯಕರ ವಿರುದ್ಧ ಎಚ್‌ಡಿಕೆ ಕಿಡಿ

ತಮಿಳುನಾಡು ಕ್ಯಾತೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಕಳೆದ 50 ವರ್ಷದಿಂದಲೂ ಕಾವೇರಿ ವಿಚಾರದಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ತಮಿಳುನಾಡು ರಾಜ್ಯಕ್ಕೆ ನಿಗದಿಗಿಂತ ಎರಡು ಪಟ್ಟು ನೀರು ಕೊಟ್ಟಿದ್ದು ಇದೆ. ಅವರು ಅದನ್ನು ನೆನಪು ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ.

ಮಂಡ್ಯ, ಜೂನ್ 21: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಿದ್ದರೂ ನೆರೆಯ ತಮಿಳುನಾಡು ಕಾವೇರಿ ವಿಚಾರದಲ್ಲಿ ಕ್ಯಾತೆ ತೆಗೆದಿರುವುದು ಸರಿಯಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ತಮಿಳುನಾಡು ಕ್ಯಾತೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಕಳೆದ 50 ವರ್ಷದಿಂದಲೂ ಕಾವೇರಿ ವಿಚಾರದಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ತಮಿಳುನಾಡು ರಾಜ್ಯಕ್ಕೆ ನಿಗದಿಗಿಂತ ಎರಡು ಪಟ್ಟು ನೀರು ಕೊಟ್ಟಿದ್ದು ಇದೆ. ಅವರು ಅದನ್ನು ನೆನಪು ಮಾಡಿಕೊಳ್ಳುವುದಿಲ್ಲ. ಜಲಾಶಯಗಳು ತುಂಬಿದಾಗ ಯಥೇಚ್ಛವಾಗಿ ಆ ರಾಜ್ಯಕ್ಕೆ ನೀರು ಹರಿದು ಹೋಗಿದೆ. ಮಳೆ ಆಗದೆ ಜಲಾಶಯಗಳು ಖಾಲಿ ಬಿದ್ದಾಗ ಆ ರಾಜ್ಯವು ನಮ್ಮ ಮೇಲೆ ನೀರಿಗಾಗಿ ಒತ್ತಡ ಇರುವುದು ಸೂಕ್ತವಲ್ಲ ಎಂದು ಹೇಳಿದರು.

ವಾಸ್ತವ ಪರಿಸ್ಥಿತಿಯನ್ನು ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ನೆರೆಹೊರೆ ರಾಜ್ಯಗಳಲ್ಲಿ ವಾಸ ಮಾಡುವ ನಾವು ನಾವು ಅಣ್ಣ ತಮ್ಮಂದಿರ ರೀತಿ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ತಿಕ್ಕಾಟ ನಡೆಸುವುದು ಸರಿಯಲ್ಲ. ಇರುವ ಪರಿಸ್ಥಿತಿಯನ್ನು ಅರಿತು ಪರಸ್ಪರ ಹಂಚಿಕೊಂಡು ನಡೆದರೆ ಎರಡು ರಾಜ್ಯಗಳಿಗೂ ಉತ್ತಮ ಎಂಬುದನ್ನು ತಮಿಳುನಾಡು ತಿಳಿದುಕೊಳ್ಳಬೇಕು. ಹೊರತುಪಡಿಸಿ ಕಾಲು ಕೆರೆದು ಜಗಳಕ್ಕೆ ಬರುವುದು ಒಳ್ಳೆಯ ನಡೆ ಅಲ್ಲ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಕರ್ನಾಟಕಕ್ಕೆ ಎಲ್ಲಾ ಕಡೆಗಳಿಂದಲೂ ನಿರಂತರವಾಗಿ ಅನ್ಯಾಯ ಆಗುತ್ತದೆ. ನಮ್ಮ ರಾಜ್ಯದ ಜನರ ಹಣದಲ್ಲಿ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ ಸೇರಿದಂತೆ ಎಲ್ಲಾ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಹಣದಲ್ಲಿ ಕಷ್ಟಪಟ್ಟು ಅಣೆಕಟ್ಟೆ ಕಟ್ಟಿಕೊಂಡರೆ ಅವುಗಳನ್ನು ಪಕ್ಕದ ರಾಜ್ಯಗಳಿಗೆ ನೀರು ಬೀಳುವ ಯಂತ್ರಗಳನ್ನಾಗಿ ಮಾಡಿಕೊಂಡಿದ್ದೇವೆ. ಅಂತಹ ಪರಿಸ್ಥಿತಿ ಸೃಷ್ಟಿಯಾಗಲು ರಾಜ್ಯದ ವೈಫಲ್ಯವು ಇದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ದೇವೇಗೌಡರು ಈ ದೇಶದ ಪ್ರಧಾನಿ ಆಗುವವರೆಗೂ ನೀರಾವರಿ ವಿಷಯದಲ್ಲಿ ಆಗಿದ್ದ ಅನ್ಯಾಯ ಸರಿಪಡಿಸುವ ಕೆಲಸಗಳು ಆಗಿರಲಿಲ್ಲ. ಈ ರಾಜ್ಯದ ವಿಧಾನಸಭೆಯ ಸದಸ್ಯರಾಗಿದ್ದಾಗಲೇ ಅವರು ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡಿ ಕಬಿನಿ, ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಕಾರಣಿಭೂತರಾದರು. ಕೆಲವರು ಇದೇ ವಿಷಯವನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ನಮ್ಮ ಡ್ಯಾಂಗಳು ಪಕ್ಕದ ತಮಿಳುನಾಡಿಗೆ ನೀರು ಬಿಡುವ ಡ್ಯಾಂಗಳಾಗಿ ಬದಲಾಗಿವೆ ಎಂದು ಅವರು ದೂರಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುವ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ. ಅತಿ ಮುಖ್ಯವಾಗಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೆ ಈ ಅಣೆಕಟ್ಟೆ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಈಗಾಗಲೇ ರಾಜ್ಯವು ಕೇಂದ್ರ ಸರ್ಕಾರಕ್ಕೆ ಯೋಜನಾ ಸಮಗ್ರ ವರದಿ (DPR) ಸಲ್ಲಿಸಿದೆ. ತಮಿಳುನಾಡು ರಾಜ್ಯದ ಸಹಮತ ಅಗತ್ಯವಿದೆ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಹೇಳಿದರು.

ಮೇಕೆದಾಟು ಅನುಷ್ಠಾನಕ್ಕೆ ಬಂದರೆ ಎರಡು ರಾಜ್ಯಗಳಿಗೆ ಲಾಭವಾಗಲಿದೆ. ಅಣೆಕಟ್ಟುಗಳಲ್ಲಿ ನೀರು ತುಂಬಿದ ಮೇಲೆ ಹೆಚ್ಚುವರಿ ನೀರು ಆ ರಾಜ್ಯಕ್ಕೆ ಹರಿದು ಹೋಗುತ್ತದೆ. ಅದನ್ನು ತಡೆಯಲು ಆಗುವುದಿಲ್ಲ. ಈ ಸರಳ ವಿಚಾರವನ್ನು ತಮಿಳುನಾಡು ಕಗ್ಗಂಟನ್ನಾಗಿ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರಿಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ. ಅಷ್ಟೇ ಏಕೆ ಡಿಪಿಆರ್ ನಲ್ಲಿಯು ನಮೂದಿಸಿದ್ದೇವೆ. ವಸ್ತುಸ್ಥಿತಿ ಹೀಗಿದ್ದ ಮೇಲೆ ನರರಾಜ್ಯ ತಕರಾರು ಮಾಡುತ್ತಿರುವುದು ಸರಿಯಲ್ಲ. ತಮಿಳುನಾಡಿನ ರಾಜಕೀಯ ಪಕ್ಷಗಳು ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಅವರು ತೀಕ್ಷ್ಣವಾಗಿ ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ನೀಟ್ ಪರೀಕ್ಷಾರ್ಥಿಗಳಿಗೆ ಶುಭಕೋರಿದ ಕೇಂದ್ರ ಸಚಿವರು

ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶುಭ ಕೋರಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಪರೀಕ್ಷೆಯನ್ನು ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದಂತೆ ನಡೆಸಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದರು.

ಕಳೆದ ಎರಡು ವರ್ಷದಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಕೆಲವು ದಿನಗಳ ಹಿಂದೆ ನಡೆದ ಘಟನೆಯಿಂದ ಪರೀಕ್ಷಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ವಿಶೇಷವೆಂದರೆ ಪ್ರಧಾನಮಂತ್ರಿಗಳ ಕಾರ್ಯಾಲಯವೇ ಈ ಬಗ್ಗೆ ನಿಗಾ ವಹಿಸಿದೆ. ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕಮಲ-ದಳ ಮೈತ್ರಿ ಅಬಾಧಿತ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಪರೀಕ್ಷೆಗಳು ನಡೆಸುವ ಸಂದರ್ಭದಲ್ಲಿ ಹಲವಾರು ಬಾರಿ ಗೊಂದಲಗಳು ಆಗಿವೆ. ಹಿಂದಿನ ಅನುಭವಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ವೈದ್ಯಕೀಯ ಕೋರ್ಸ್ ಗಳನ್ನು ಪಡೆಯಲು ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಸಚಿವರು ಹಾರೈಸಿದರು.