ಮದ್ದೂರು, ನ.24: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇವೇಗೌಡನ ದೊಡ್ಡಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಜೆಡಿಎಸ್ ಪಕ್ಷದ (JDS Party) ಕಾರ್ಯಕರ್ತ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಅಭಿಮಾನಿ ಮಹದೇವು ಅವರ ನಿವಾಸಕ್ಕೆ ಸೋಮವಾರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು. ಈ ಘಟನೆಯಿಂದ ನನಗೆ ಹಾಗೂ ಕುಮಾರಣ್ಣ ಅವರಿಗೆ ತುಂಬ ಮನಸ್ಸಿಗೆ ನೋವಾಗಿದೆ. ಕುಮಾರಣ್ಣ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದರು. ಈಗ ಮಹದೇವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ, ಹೋದ ಜೀವ ವಾಪಸ್ಸು ತರಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೃತ ಮಹದೇವು ಅವರ ಕುಟುಂಬದ ಜೀವನೋಪಾಯಕ್ಕೆ ನೆರವು ನೀಡುತ್ತೇವೆ. ಆ ನೋವನ್ನು ಭರಿಸುವ ಶಕ್ತಿಯನ್ನ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷ ಡಿ. ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಮುಖಂಡ ಹನುಮಂತೇಗೌಡ ಉಪಸ್ಥಿತರಿದ್ದರು.
ಇದನ್ನೂ ಓದಿ : ಎನ್‌ಡಿಎ ಜತೆ ಮೈತ್ರಿ ಕಡಿದುಕೊಳ್ಳಲ್ಲ: ಎಚ್.ಡಿ. ದೇವೇಗೌಡ
ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು: ನಿಖಿಲ್
ಮದ್ದೂರು: ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ (Congress Party) ಸಲ್ಲಬೇಕು. ಕಳೆದ ಎರಡೂವರೆ ವರ್ಷದಲ್ಲಿ ಐದು ಲಕ್ಷ ಕೋಟಿ ಹೆಚ್ಚು ಸಾಲ ಮಾಡಿದೆ. ಇದು ಕಾಂಗ್ರೆಸ್ ಆಡಳಿತ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇವೇಗೌಡನ ದೊಡ್ಡಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತ ಮಹದೇವ್ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಗ್ಯಾರಂಟಿ, ಗ್ಯಾರಂಟಿ ಅಂತಾರೆ ಅದನ್ನು ಕೂಡ ಸರಿಯಾಗಿ ಕೊಟ್ಟಿಲ್ಲ. ಯುವನಿಧಿ ಕೊಟ್ಟಿದ್ದಿರಾ? ಚುನಾವಣೆ ಸಂದರ್ಭದಲ್ಲಿ ಮಾತ್ರ ದುಡ್ಡು ಬಿಡುಗಡೆ ಮಾಡ್ತಾರೆ. ಈ ಸರ್ಕಾರದಲ್ಲಿ ಬಡವರು ಬದುಕಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ನಮ್ಮ ಪಕ್ಷದ ಬಗ್ಗೆ ಕಲಾಪದಲ್ಲಿ ಕೀಳಾಗಿ ಮಾತನಾಡಿದ್ರು. ಜೆಡಿಎಸ್ 18 ಸೀಟ್ ಮುಂದೆ ಸಿಂಗಲ್ ಡಿಜಿಟ್‌ಗೆ ಬರುತ್ತೆ ಅಸ್ತಿತ್ವ ಇಲ್ಲ ಅಂತ ಲೇವಡಿ ಮಾಡಿದ್ರು. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು? ಅಲ್ಲಿನ ಜನರು ಕಾಂಗ್ರೆಸ್ ಪರಿಸ್ಥಿತಿ ತೋರಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷ ಮೇಲೆ ಚಲುವರಾಯಸ್ವಾಮಿಗೆ ಯಾಕೆ ಚಿಂತೆ?
ಬಂಡವಾಳ ಇದ್ದಿದ್ದಕ್ಕೆ ಕುಮಾರಸ್ವಾಮಿಗೆ ರೆಡ್ ಕಾರ್ಪೆಟ್ ಹಾಕಿ ಎನ್‌ಡಿಎ ಗೆ ಸೇರಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರಪ್ಪನಾಣೆ ಗೆಲ್ಲಲ್ಲ ಅಂತಾ ಕಾಂಗ್ರೆಸ್‌ನವರು ಭಾಷಣ ಬಿಗಿದ್ರು. ಆದರೆ ಮಂಡ್ಯ ಜನರ ಆಶೀರ್ವಾದದಿಂದ ದಾಖಲೆ ಗೆಲುವು ಸಿಕ್ತು. ಬಂಡವಾಳ ಇರೋದಕ್ಕೆ ಕುಮಾರಣ್ಣನ ಗೆಲ್ಲಿಸಿರೋದು, ಚುನಾವಣೆಯಲ್ಲಿ ಗೆದ್ದಾಗ ತಲೆ ಎತ್ತಿ ಮೆರೆಯಲ್ಲ, ಸೋತಾಗ ಕೈ ಕಟ್ಟಿ ಮನೆಯಲ್ಲಿ ಕೂರಲಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಅವರು ಟಾಂಗ್ ನೀಡಿದರು.
ಇದನ್ನೂ ಓದಿ | ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆಶಿ ಒಪ್ಪಬೇಕು: ಸಿದ್ದರಾಮಯ್ಯ
ಮದ್ದೂರು ತಾಲೂಕಿನಲ್ಲಿ ಪೊಲೀಸ್ ಠಾಣೆ ಇವರಪ್ಪನ ಮನೆನಾ? ಇಲ್ಲಿರುವ ಶಾಸಕರ ನಡವಳಿಕೆ ಸರಿಯಿಲ್ಲ. ಜಿಲ್ಲೆಯ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಮಂಡ್ಯ ಜಿಲ್ಲೆಗೆ ಅವರು ಏನು ಬಿರುದ್ದು ಕೊಟ್ಟರು? ಛತ್ರಿಗಳು ಅಂದ್ರು ಅದರ ಅರ್ಥ ತಿಳಿದಿಕೊಳ್ಳಬೇಕು. ಜೆಡಿಎಸ್ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಾರೆ? ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.