ಮಂಡ್ಯ, ಏ.14: ಪ್ರಧಾನಿ ನರೇಂದ್ರ ಮೋದಿ ( PM Narendra Modi) ಅವರು ನಾಳೆ (ಏಪ್ರಿಲ್ 15) ಆದಿಚುಂಚನಗಿರಿ (AdiChunchanagiri) ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಂಡ್ಯ (Mandya) ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಭದ್ರತೆಯ ದೃಷ್ಟಿಯಿಂದ ಪ್ರಮುಖ ಹೆದ್ದಾರಿಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಿವಿಧ ನಿರ್ಬಂಧಗಳನ್ನು ಹೇರಿ ಜಿಲ್ಲಾಧಿಕಾರಿ ಡಾ. ಕುಮಾರ್ ಆದೇಶ ಹೊರಡಿಸಿದ್ದಾರೆ.
ಪರ್ಯಾಯ ಮಾರ್ಗ ಬಳಸಲು ಸೂಚನೆ
ಪ್ರಧಾನಿಯವರ ಭದ್ರತೆಯ ಹಿತದೃಷ್ಟಿಯಿಂದ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರಮುಖ ಹೆದ್ದಾರಿಗಳಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ:
NH 150-A ಮತ್ತು NH 75-A ಹೆದ್ದಾರಿಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರಲಿದೆ. ವಾಹನ ಸವಾರರು ತೊಂದರೆ ತಪ್ಪಿಸಲು ಜಿಲ್ಲಾಡಳಿತ ಸೂಚಿಸಿರುವ ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಲು ಕೋರಲಾಗಿದೆ.
ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧ
ಕ್ಷೇತ್ರದ ಸುತ್ತಮುತ್ತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಬೆಳ್ಳೂರು ಪಟ್ಟಣ ಪಂಚಾಯಿತಿಯ ಸುತ್ತಮುತ್ತಲಿನ 8 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಬಂಧ ಅನ್ವಯವಾಗಲಿದೆ. ಅವಧಿ- ಏಪ್ರಿಲ್ 15ರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ.
"ಅವರ ಹಾಡುಗಳು ಜನರ ಮನಸಲ್ಲಿ ಶಾಶ್ವತ"; ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಡಿಸಿ ಆದೇಶಿಸಿದ್ದಾರೆ.
ಡ್ರೋನ್ ಹಾರಾಟಕ್ಕೆ ತಡೆ
ಭದ್ರತಾ ಕಾರಣಗಳಿಗಾಗಿ ಆದಿಚುಂಚನಗಿರಿ ಮತ್ತು ಬೆಳ್ಳೂರು ಸುತ್ತಮುತ್ತಲಿನ ಪ್ರದೇಶವನ್ನು ತಾತ್ಕಾಲಿಕವಾಗಿ ‘ನೋ ಫ್ಲೈ ಝೋನ್’ ಎಂದು ಘೋಷಿಸಲಾಗಿದೆ. ಬೆಳ್ಳೂರು ಪಟ್ಟಣ ಪಂಚಾಯಿತಿಯ ಸುತ್ತಮುತ್ತಲಿನ 12 ಕಿ.ಮೀ ವ್ಯಾಪ್ತಿಯಲ್ಲಿ ದ್ರೋಣ್ ಕ್ಯಾಮೆರಾಗಳು ಹಾಗೂ ಮಾನವರಹಿತ ಏರ್ಕ್ರಾಫ್ಟ್ಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
PM Narendra Modi: ಏ.15ರಂದು ಪ್ರಧಾನಿ ಮೋದಿ ಆದಿಚುಂಚನಗಿರಿ ಮಠಕ್ಕೆ ಭೇಟಿ; ಭಕ್ತರಿಗೆ ನಿರ್ಬಂಧ
ಕ್ಷೇತ್ರದ ಸುತ್ತಮುತ್ತ ಈಗಾಗಲೇ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.