ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Drought: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಎಚ್.ಡಿ.ಕುಮಾರಸ್ವಾಮಿ ಆರೋಪ

ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಸರಣಿ ಆರಂಭವಾಗಿದೆ. ನೂರಾರು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಸಾಕಷ್ಟು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದೆ. ಈ ಸರ್ಕಾರದವರು ನೋಡಿದರೆ ರೈತರ ನೆರವಿಗೆ ಹೋಗುವುದನ್ನು ಬಿಟ್ಟು ಹೊಲದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟು ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಡ್ಯ: ಬರ ಪರಿಸ್ಥಿತಿ (Karnataka Drought) ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು, ಈಗಾಗಲೇ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭವಾಗಿವೆ. ಕೂಡಲೇ ಸರ್ಕಾರ ಅಮೂಲ್ಯ ಜೀವಗಳ ಸಾವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮಂಡ್ಯ ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ಸಾಲ ಬಾಧೆಗೆ ಹೆದರಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತೀವ್ರ ಕಳವಳ ಹಾಗೂ ಆತಂಕ ವ್ಯಕ್ತಪಡಿಸಿದ ಸಚಿವರು, ಇಂದು ಗ್ರಾಮಕ್ಕೆ ಬಂದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಸರಣಿ ಆರಂಭವಾಗಿದೆ. ನೂರಾರು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಸಾಕಷ್ಟು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದೆ. ಈ ಸರ್ಕಾರದವರು ನೋಡಿದರೆ ರೈತರ ನೆರವಿಗೆ ಹೋಗುವುದನ್ನು ಬಿಟ್ಟು ಹೊಲದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟು ಬರುತ್ತಿದ್ದಾರೆ. ಅದರ ಬದಲಿಗೆ ಇವರು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಾಲ ಪಡೆದಿರುವ ರೈತರಿಗೆ ಬ್ಯಾಂಕುಗಳು ನೋಟಿಸ್ ಕೊಡಲು ಶುರು ಮಾಡಿವೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ದುರಂತವೆಂದರೆ ಈ ರಾಜ್ಯದಲ್ಲಿ ಈಗ ಕೃಷಿ ಸಚಿವರೇ ಇಲ್ಲ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳಿಗೆ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಗ್ಯಾರಂಟಿಗಳು ಜನರ ಜೀವನ ಉತ್ತಮಗೊಳಿಸಿದ್ದರೆ ರೈತರು ಜೀವ ಏಕೆ ತೆಗೆದುಕೊಳ್ಳುತ್ತಿದ್ದರು? ಈಗ ಬೇರೆ ಗ್ಯಾರಂಟಿ ಪರಿಷ್ಕರಣೆ ಅಂತ ಹೊರಟಿದ್ದಾರೆ. ಗ್ಯಾರಂಟಿ ಪಕ್ಕಕ್ಕೆ ಇಟ್ಟು ಸರ್ಕಾರ ರೈತರ ಕಡೆಗೆ ಗಮನ ಹರಿಸಲಿ. ಸಂಪುಟ ವಿಸ್ತರಣೆ ಎಂದು ಕಳೆದ ಮೂರು ನಾಲ್ಕು ದಿನಗಳಿಂದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಶಾಸಕರು ಹೋಗಿ ದೆಹಲಿಯಲ್ಲಿ ಬಿಡು ಬಿಟ್ಟಿದ್ದಾರೆ. ಸಂಪುಟ ವಿಸ್ತರಣೆ ಹೆಸರುಗಳನ್ನು ನಿಮ್ಮ ಪಕ್ಷದ ಹೈಕಮಾಂಡ್ ಅಂತಿಮಗೊಳಿಸುತ್ತದೆ. ಇಲ್ಲಿ ಕೆಲಸ ಮಾಡುವುದು ಬಿಟ್ಟು ಅಲ್ಲಿ ಹೋಗಿ ಏನು ಮಾಡುತ್ತಿದ್ದೀರಿ ಎಂದು ಸಚಿವರು ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಸರ್ಕಾರ ಇದೆ ಎಂದು ಭಾವನೆಯನ್ನೇ ಮಾಡಿಲ್ಲ. ಮುಖ್ಯವಾಗಿ ಈ ಸರ್ಕಾರ ಟೇಕಾಫ್ ಆಗಿಯೇ ಇಲ್ಲ. ಮಂತ್ರಿಗಿರಿ, ಸಂಪುಟ ವಿಸ್ತರಣೆ ಇವೆಲ್ಲವುಗಳನ್ನು ಪಕ್ಕಕ್ಕಿಟ್ಟು ಮೊದಲು ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಸರ್ವಪಕ್ಷ ಸಭೆ ಕರೆಯುವುದು ಹೊಸ ವಿಚಾರವೇನಲ್ಲ

ಕಾವೇರಿ ವಿಷಯಕ್ಕಾಗಿ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ರಾಜ್ಯದ ರೈತರಹಿತಕ್ಕಾಗಿ ನಾವು ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ವಾದವನ್ನು ಪ್ರಬಲವಾಗಿ ಮಂಡಿಸುತ್ತೇವೆ ಎಂದ ಕೇಂದ್ರ ಸಚಿವರು; ಸರ್ವಪಕ್ಷ ಸಭೆ ಕರೆಯುವುದು ಹೊಸ ವಿಚಾರವೇನಲ್ಲ. ಸಭೆಯಲ್ಲಿ ರಾಜ್ಯದ ಇದಕ್ಕಾಗಿ ಎಲ್ಲ ಪಕ್ಷಗಳು ಒಗ್ಗಟ್ಟಾಗಿ ನಿರ್ಣಯ ಅಂಗೀಕರಿಸಬೇಕು ಎಂಬುದು ನನ್ನ ಮನವಿ. ಆದರೆ ಕಾವೇರಿ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರದ ಕಡೆಯಿಂದ ಯಾವ ರೀತಿಯ ವಾದ ಮಂಡನೆ ಆಗಿದೆ ಎಂಬುದು ನಮಗೆ ಗೊತ್ತಿಲ್ಲ. ಪ್ರಾಧಿಕಾರದ ತೀರ್ಮಾನ ತಪ್ಪು ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಪ್ರತಿ ಸಂದರ್ಭದಲ್ಲಿಯೂ ನೀರಿನ ಕೊರತೆ ಉಂಟಾದಾಗ ಕರ್ನಾಟಕವನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದಲ್ಲಿರುವ ಕಾವೇರಿ ಕಣಿವೆಯ ಅಣೆಕಟ್ಟುಗಳಲ್ಲಿರುವ ನೀರಿನ ಪರಿಸ್ಥಿತಿಯ ಬಗ್ಗೆ ಪ್ರಾಧಿಕಾರ ತಿಳಿದುಕೊಳ್ಳಬೇಕು. ಹಾಗೆಯೇ ತಮಿಳುನಾಡಿನ ಮೆಟ್ಟೂರು ಮತ್ತು ಭವಾನಿ ಜಲಾಶಯಗಳಲ್ಲಿ ಸಂಗ್ರಹ ಇರುವ ನೀರಿನ ಮಟ್ಟದ ಬಗ್ಗೆಯೂ ಮಾಹಿತಿ ಪಡೆಯಬೇಕು. ಪ್ರಾಧಿಕಾರ ತನ್ನ ತಂಡಗಳನ್ನು ಎರಡು ರಾಜ್ಯಗಳಿಗೆ ಕಳಿಸಿ ಪರಿವಿಕ್ಷಣೆ ನಡೆಸಿ ತದನಂತರ ತನ್ನ ಆದೇಶವನ್ನು ಹೊರಡಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಇಷ್ಟಕ್ಕೂ ತಮಿಳುನಾಡು ಕುಡಿಯುವ ಉದ್ದೇಶಕ್ಕೆ ನೀರು ಕೇಳುತ್ತಿದೆಯೋ ಅಥವಾ ಕೃಷಿ ಉದ್ದೇಶಕ್ಕೆ ನೀರು ಕೇಳುತ್ತಿದೆಯೋ ಎಂಬುದು ಗೊತ್ತಿಲ್ಲ. ಇದರ ಬಗ್ಗೆ ರಾಜ್ಯ ಸರ್ಕಾರ ಖಚಿತ ಮಾಹಿತಿ ಪಡೆಯಬೇಕು. ನಮ್ಮ ರೈತರಿಗೆ ನೀರು ಬಿಡಲು ಸಾಧ್ಯವೇ ಆಗುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನೆರೆ ರಾಜ್ಯಕ್ಕೆ ನೀರು ಹರಿಸುವುದು ಸಾಧ್ಯವಾಗದ ಮಾತು ಎಂದು ಅವರು ಒತ್ತಿ ಹೇಳಿದರು.

ಎಲ್ಲಾ ಅಂಶಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅಲ್ಲದೆ ರಾಜ್ಯದ ನೀರಾವರಿ ಹಿತಾಸಕ್ತಿಗಾಗಿ ಸರ್ಕಾರಕ್ಕೆ ಕೆಲವು ಕಠಿಣ ಒತ್ತಾಯಗಳನ್ನು ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ನೇಮಕಾತಿ ಪ್ರಕ್ರಿಯೆಗೆ ಕೆಪಿಎಸ್‌ಸಿ, ಕೆಇಎ ಕೈಗೊಂಡ ಕ್ರಮ ಪರಿಶೀಲಿಸಲು ತಜ್ಞರ ಸಮಿತಿ ರಚನೆಗೆ ಸಿಎಂ ಸೂಚನೆ

ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ರಮೇಶ್ ಮತ್ತು ಹಿರಿಯ ಮುಖಂಡ ರಾಮಚಂದ್ರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.