ಮಂಡ್ಯ: ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ಹೋಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಂಡ್ಯ (Mandya Accident) ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ರಸ್ತೆಯಲ್ಲಿ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ತಂದೆ-ತಾಯಿ, ಮಗಳು ದಾರುಣವಾಗಿ ಅಂತ್ಯ ಕಂಡಿದ್ದಾರೆ. ಮತ್ತೊಂದು ಮಗು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಮಂಡ್ಯದ ಮದ್ದೂರಿನ ಕೊಪ್ಪ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಬರುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬೆಂಗಳೂರಿನ ಮುತ್ತುರಾಜ್ (35), ಕಾವ್ಯ (30) ಹಾಗೂ ಕೀರ್ತನಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಪುಟ್ಟ ಮಗು ತೀವ್ರವಾಗಿ ಗಾಯಗೊಂಡಿದೆ.
ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ಬಂದಿದ್ದ ಮುತ್ತುರಾಜ್ ಕುಟುಂಬ ಹಬ್ಬ ಮುಗಿಸಿ ಇಂದು ಬೆಳಗ್ಗೆ ಬೈಕ್ನಲ್ಲೇ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ಜೇವರ್ಗಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ
ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಹತ್ತಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಮಯೂರ ಗ್ರಾಮದಲ್ಲಿ ನಡೆದಿದೆ. ಮಯೂರ ಗ್ರಾಮದ ಗುರುರಾಜ್ ಬಿರಾದರ್ (18) ಹಲ್ಲೆಗೊಳಗಾದ ಯುವಕ. ಯುವಕ ಒಂಟಿಯಾಗಿ ಸಿಕ್ಕ ವೇಳೆ ಶ್ರೀಶೈಲ್, ಅಜಯಕುಮಾರ್, ಮುತ್ತುರಾಜ್ ಸೇರಿ ಹತ್ತಕ್ಕೂ ಹೆಚ್ಚು ಮಂದಿ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಯುವಕನನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಲ್ಲೆಗೊಳಗಾದ ಗುರುರಾಜ್ ಬಿರಾದರ್ ನೀಡಿದ ದೂರಿನ ಮೇರೆಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಲ್ಲೆಗೆ ನಿಖರ ಕಾರಣವೇನು ಹಾಗೂ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.