ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗೆ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಎಂಇಎಸ್ ಯುವ ಮುಖಂಡ ಶುಭಂ ಶೆಳಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಾಳಮಾರುತಿ ಠಾಣೆ ಪೊಲೀಸರು ಶುಭಂ ಶೆಳಕೆಯನ್ನು ಬಂಧಿಸಿ, ಜಿಲ್ಲಾಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಗೆ ಗಡಿ, ಭಾಷೆಯ ಪ್ರಸ್ತಾಪ ಮಾಡಿ ಪ್ರಚೋದನಕಾರಿ ಭಾಷಣ ಮಾಡಿದ ಪರಿಣಾಮ ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿ ಬಳಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯ ಘಟನೆಯನ್ನು ಶುಭಂ ತನ್ನ ಫೇಸ್‌ಬುಕ್ ಖಾತೆಯಲ್ಲಿ ಸಮರ್ಥಿಸಿಕೊಂಡಿದ್ದರು. 'ಕರ್ನಾಟಕದಲ್ಲಿರುವ ಕನ್ನಡ ಸಂಘಟನೆಗಳು ನಾಲಾಯಕ್' ಎಂದು ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟು, ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸೌಹಾರ್ದತೆ ಕದಡಲು ಯತ್ನಿಸಿದ್ದರು ಎಂಬ ಆರೋಪದಡಿ ಮಾಳಮಾರುತಿ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು.
ಅಲ್ಲದೇ, ಮರಾಠಿ ಭಾಷೆಯಲ್ಲಿಯೇ ಮಾತನಾಡುವಂತೆ ಕಿಣಿಯೆ ಗ್ರಾಮದ ಪಿಡಿಒಗೆ ಬೆದರಿಕೆ ಹಾಕಿದ ತಿಪ್ಪಣ್ಣ ಡೋಕ್ರೆ ಎಂಬಾತನನ್ನು ಸನ್ಮಾನಿಸಿದ್ದರು. ಮೇಲಿಂದ ಮೇಲೆ ಕನ್ನಡ ವಿರೋಧಿ ಹಾಗೂ ಭಾಷಾ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Pralhad Joshi: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಪ್ರಲ್ಹಾದ್ ಜೋಶಿ