ಕೊರಟಗೆರೆ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗೃಹ ಸಚಿವ ಪರಮೇಶ್ವರ್ ಅವರ ಕ್ಷೇತ್ರದಲ್ಲಿ ನಡೆದಿದೆ. ಮರ್ಯಾದೆಗೆ ಅಂಜಿ 30 ಬಿಪಿ ಮಾತ್ರೆಗಳನ್ನು ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಂಗಳಮ್ಮ(45) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ಘಟನೆ ನಡೆದಿದೆ. ಮಂಗಳಮ್ಮ ಅವರು ಹೋಟೆಲ್ ಆರಂಭಿಸಲು ಗ್ರಾಮೀಣ ಕೂಟ ಎಂಬ ಸಂಸ್ಥೆಯಲ್ಲಿ 2 ಲಕ್ಷ ಸಾಲ ಪಡೆದಿದ್ದರು. ಎಲ್.ಎನ್. ಟಿ ಫೈನಾನ್ಸ್‌ನಲ್ಲಿ 70 ಸಾವಿರ, ಹಾಗೂ ಆಶೀರ್ವಾದ ಫೈನಾನ್ಸ್‌ನಲ್ಲಿ 80 ಸಾವಿರ ಸಾಲ ಪಡೆದಿದ್ದರು.
ಹೋಟೆಲ್‌ನಿಂದ ನಷ್ಟ ಆದ ಬಳಿಕ ಮಂಗಳಮ್ಮ ಕುಂಟುಂಬ ಸದ್ಯ ದಿನಗೂಲಿ ಕೆಲಸ ಮಾಡುತ್ತಿದೆ. ಸಾಲ ತೀರಿಸಲು ಮಂಗಳಮ್ಮ ಹಾಗೂ ಗಂಡ ಬಸವರಾಜು, ಮಗ ಪುನೀತ್ ಹರಸಾಹಸ ಪಡುತ್ತಿದ್ದಾರೆ. ಈಗಾಗಳೇ ಗ್ರಾಮೀಣ ಕೂಟದಲ್ಲಿ 40 ಕಂತು ಕಟ್ಟಿದ್ದು, ಇನ್ನೂ 42 ಕಂತು ಹಣ ಬಾಕಿ ಇದೆ. ಇಂದು ಗ್ರಾಮೀಣ ಕೂಟಕ್ಕೆ ಸಾಲದ ಕಂತು ಕೊಡಬೇಕಾಗಿತ್ತು. ಆದರೆ, ಎರಡು ದಿನಗಳಿಂದ ಮನೆ ಬಳಿ ಬಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಗಲಾಟೆ ಮಾಡುತ್ತಿದ್ದರು. ಇಂದು ಸಾಲದವರು ಮನೆಗೆ ಬರುವ ಮೊದಲೇ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು
ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೆಗೆದುಕೊಂಡಿದ್ದು ಎರಡೂವರೆ ಲಕ್ಷ, ಕಟ್ಟಿದ್ದು 4.7 ಲಕ್ಷ

ಮತ್ತೊಂದು ಪ್ರಕರಣದಲ್ಲಿ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಮನೆ ಸೀಜ್ ಮಾಡಿ, ಗೋಡೆ ಮೇಲೆ ಈ ಮನೆ ಅಡಮಾನ ಇಡಲಾಗಿದೆ ಎಂದು ಬರೆದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಕುಟುಂಬವೊಂದು ಎರಡೂವರೆ ಲಕ್ಷ ಸಾಲ ಪಡೆದು, 4,70,000 ರೂ. ಮರು ಪಾವತಿ ಮಾಡಿದೆ. ಆದರೂ ನೀವು ಸಾಲ ಕಟ್ಟಬೇಕು ಎಂದು ಫೈವ್ ಸ್ಟಾರ್ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ವಿಶೇಷಚೇತನ ಮಕ್ಕಳನ್ನು ಕರೆದುಕೊಂಡು ದಂಪತಿ ಊರು ಬಿಟ್ಟ ಘಟನೆ ಕೊರಟಗೆರೆ ಕ್ಷೇತ್ರದಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದ ದಂಪತಿ ವಿನುತಾ-ಮಾರುತಿ ಅವರು ಫೈವ್ ಸ್ಟಾರ್ ಕಂಪನಿಯಲ್ಲಿ ಎರಡೂವರೆ ಲಕ್ಷ ಸಾಲ ಮಾಡಿದ್ದರು. ಸಾಲ ಪಡೆದು ವಿಶೇಷಷೇತನ ಮಕ್ಕಳ ಚಿಕಿತ್ಸೆಗಾಗಿ ಖರ್ಚು ಮಾಡಿದ್ದರು.
ಕಷ್ಟದಲ್ಲೂ 4.50 ಲಕ್ಷ ರೂ. ಬಡ್ಡಿ ಸಮೇತ ಕಟ್ಟಿದ್ದರೂ, ಮನೆ ಸೀಜ್ ಮಾಡಿ, ಗೋಡೆ ತುಂಬಾ ಸಾಲದ ಬೋರ್ಡ್ ಹಾಕಿ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಕಿರುಕುಳ ತಾಳಲಾರದೆ ದಂಪತಿ ಊರನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ.