K.N. Rajanna: 48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ: ಸಚಿವ ರಾಜಣ್ಣ ಶಾಕಿಂಗ್ ಹೇಳಿಕೆ
Honey Trap: ಎಲ್ಲ ಪಕ್ಷದ ನಾಯಕರು ಸೇರಿದಂತೆ ಸುಮಾರು 48 ಮಂದಿಯ ಹನಿಟ್ರ್ಯಾಪ್ ಸಿ.ಡಿ. ಮಾಡಲಾಗಿದೆ ಎಂದು ಸದನದಲ್ಲಿ ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಜತೆಗೆ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು, ಸತ್ಯಾಸತ್ಯತೆ ಹೊರಬರಲಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ.

ಸಚಿವ ಕೆ.ಎನ್.ರಾಜಣ್ಣ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ (Honey Trap) ಮತ್ತೆ ಸದ್ದು ಮಾಡುತ್ತಿದೆ. ಪ್ರಭಾವಶಾಲಿ ಸಚಿವರೊಬ್ಬರನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಲು ಯತ್ನಿಸಲಾಗಿತ್ತು ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೋರ್ವ ಸಚಿವ ಕೆ.ಎನ್.ರಾಜಣ್ಣ (K.N. Rajanna) ಈ ಬಗ್ಗೆ ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಎಲ್ಲ ಪಕ್ಷದ ನಾಯಕರು ಸೇರಿದಂತೆ ಸುಮಾರು 48 ಮಂದಿಯ ಹನಿಟ್ರ್ಯಾಪ್ ಸಿ.ಡಿ. ಮಾಡಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ. ಜತೆಗೆ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು, ಸತ್ಯಾಸತ್ಯತೆ ಹೊರಬರಲಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹನಿಟ್ರ್ಯಾಪ್ ಕುರಿತಾದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಬಜೆಟ್ ಭಾಷಣದ ಮೇಲಿನ ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾವಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ʼʼರಾಜ್ಯದಲ್ಲಿ ಸಹಕಾರಿ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್‌ನ ಪ್ರಯತ್ನ ನಡೆದಿದೆ. ಆ ಮೂಲಕ ಜನಪ್ರತಿನಿಧಿಗಳನ್ನು ಬ್ಲ್ಯಾಕ್ಮೇಲ್ ಮಾಡುವ ಕೆಟ್ಟ ಪ್ರವೃತ್ತಿ ಕಂಡುಬರುತ್ತಿದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ರಾಜಣ್ಣ, ''ರಾಜ್ಯವು ಪೆನ್‌ಡ್ರೈವ್, ಸಿ.ಡಿ. ಕಾರ್ಖಾನೆ ಆಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಇದೊಂದು ಗುರುತರ ಆರೋಪ. ಹನಿಟ್ರ್ಯಾಪ್ ಯತ್ನದಲ್ಲಿ ತುಮಕೂರಿನ ಪ್ರಭಾವಿ ಸಚಿವರ ಹೆಸರು ಕೇಳುಬರುತ್ತಿದೆ. ತಮಕೂರಿನ ಪ್ರಭಾವಿ ಸಚಿವರೆಂದರೆ, ನಾನು ಮತ್ತು ಗೃಹ ಸಚಿವ ಜಿ.ಪರಮೇಶ್ವರ್ʼʼ ಎಂದಿದ್ದಾರೆ.
ಮುಂದುವರಿದು, ''ಸುಮಾರು 48 ಜನರ ಮೇಲೆ ಹನಿಟ್ರ್ಯಾಪ್ ಸಿಡಿ, ಪೆನ್‌ಡ್ರೈವ್ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ಪಕ್ಷಗಳ ನಾಯಕರು, ಮುಖಂಡರ ಪೆನ್‌ಡ್ರೈವ್ ಇದೆ. ನನ್ನ ಮೇಲಿನ ಆರೋಪಕ್ಕೆ ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ. ಇದನ್ನು ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ ಎನ್ನುವ ವಿಚಾರ ಹೊರಗಡೆ ಬರಲಿ'' ಎಂದು ಸಚಿವ ರಾಜಣ್ಣ ಆಗ್ರಹಿಸಿದ್ದಾರೆ.
ದೂರು ಕೊಡುತ್ತೇನೆ
''ನಾನು ಈ ಬಗ್ಗೆ ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ. ಸೂಕ್ತ ತನಿಖೆ ನಡೆಯಲಿ. ಈ ಹನಿಟ್ರ್ಯಾಪ್ ಪ್ರಕರಣ ಸಾರ್ವಜನಿಕವಾಗಿ ಬಹಿರಂಗವಾಗಲಿ. ನನ್ನ ಮೇಲೆ ಯತ್ನಿಸಲಾದ ಹನಿಟ್ರ್ಯಾಪ್ ಬಗ್ಗೆ ಪುರಾವೆ ಇಟ್ಟುಕೊಂಡಿದ್ದೇನೆ. ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಮುನಿರತ್ನ ಹೇಳಿದ್ದೇನು?
ಈ ವಿಚಾರವಾಗಿ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಮಾತನಾಡಿ, ʼʼಹನಿಟ್ರ್ಯಾಪ್ ಟೀಮ್ ಯಾರು ಅಂತ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ. ಅಲ್ಲದೆ, ʼʼನನಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಂದ ಅನ್ಯಾಯ ಆಗಿದೆ. ನನ್ನ ವಿರುದ್ಧ ಅತ್ಯಾಚಾರದ ಕೇಸ್ ಹಾಕಿಸಿದ್ದಾರೆ.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ ಮೇಲೂ ಇದೇ ಕುತಂತ್ರ ಮಾಡಿದ್ದರು. ಈಗ ಸಚಿವ ರಾಜಣ್ಣ ಅವರ ಮೇಲೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ನಿಮ್ಮ ಹನಿಟ್ರ್ಯಾಪ್ ಟೀಂ ನನಗೆ ಗೊತ್ತಿದೆ. ನೀವು ರಾತ್ರಿ ಮೀಟಿಂಗ್ ಮಾಡಿದ್ದು ಗೊತ್ತಿದೆʼʼ ಎಂದು ಗುಡುಗಿದ್ದಾರೆ.