Toxic: ಜೂನ್ ತಿಂಗಳಿನಲ್ಲಿ ಕೆವಿಎನ್ ಪ್ರೊಡಕ್ಷನ್ಸ್‌ಗೆ ಎದುರಾಗಲಿದೆಯಾ ದೊಡ್ಡ ಚಾಲೆಂಜ್? ಇದು ಸಾವಿರಾರು ಕೋಟಿ ಮ್ಯಾಟರ್!
Yash's Toxic Postponed: ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಏಕಕಾಲಕ್ಕೆ ಎರಡು ಬೃಹತ್ ಸಿನಿಮಾಗಳ ಬಿಡುಗಡೆಯ ಜವಾಬ್ದಾರಿ ಹೊತ್ತಿದೆ. ಯಶ್ ಅಭಿನಯದ 'ಟಾಕ್ಸಿಕ್' ಜೂನ್ 4 ರಂದು ಬಿಡುಗಡೆಯಾಗುವುದು ಖಚಿತವಾಗಿದೆ. ಅತ್ತ, ಮುಂದೂಡಲ್ಪಟ್ಟಿರುವ ದಳಪತಿ ವಿಜಯ್ ಅವರ 'ಜನ ನಾಯಗನ್' ಕೂಡ ಜೂನ್‌ನಲ್ಲೇ ತೆರೆಕಾಣುವ ಸಾಧ್ಯತೆ ಇದೆ.
-
ನಟ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರವು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಹಾಗೂ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ತೆರೆಕಾಣಬೇಕಿತ್ತು. ಆದರೆ ಈ ಸಿನಿಮಾ ಈಗ ಅನಿವಾರ್ಯವಾಗಿ ಮುಂದೂಡಲ್ಪಟ್ಟಿದೆ. ಇದೀಗ ಯಶ್ ಅವರ ಬಹುನಿರೀಕ್ಷಿತ ʻಟಾಕ್ಸಿಕ್ʼ ಸಿನಿಮಾವು ಜೂನ್ 4ಕ್ಕೆ ಪೋಸ್ಟ್‌ಪೋನ್ ಆಗಿದೆ. ಅಂದಹಾಗೆ, ಇವೆರಡೂ ಸಿನಿಮಾಕ್ಕೆ ಒಂದು ಕನೆಕ್ಷನ್ ಇದೆ. ಅದೇನಪ್ಪ ಅಂದರೆ, ಈ ಚಿತ್ರಗಳನ್ನು ನಿರ್ಮಾಣ ಮಾಡಿರುವುದು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್‌ನ ಕೆ ವೆಂಕಟ್ ನಾರಾಯಣ್.
ಕೆವಿಎನ್ ಪ್ರೊಡಕ್ಷನ್ಸ್‌ಗೆ ಹೊಸ ಸವಾಲು?
ಸದ್ಯದ ಚಿತ್ರತಂಡವೇ ಹೇಳಿಕೊಂಡಿರುವ ಪ್ರಕಾರ, ಯಶ್ ಅವರ ಟಾಕ್ಸಿಕ್ ಸಿನಿಮಾವು ಜೂನ್ 4ರಂದು ಗುರುವಾರ ಗ್ರ್ಯಾಂಡ್ ಆಗಿ ತೆರೆಕಾಣಲಿದೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತತೆಯು ನಮ್ಮ ಚಿತ್ರವನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಉದ್ದೇಶ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ, ನಮ್ಮ ಪಾಲುದಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ ಬಿಡುಗಡೆಯ ದಿನಾಂಕವನ್ನು ಮರುನಿಗದಿಪಡಿಸಿದ್ದೇವೆ ಎಂದು ಟಾಕ್ಸಿಕ್ ಟೀಮ್ ಹೇಳಿಕೊಂಡಿದೆ. ಜೂನ್ 4ರಂದು ಸಿನಿಮಾವನ್ನು ತೆರೆಕಾಣಿಸುವುದಾಗಿ ಹೇಳಿಕೊಂಡಿದೆ.
ಇಲ್ಲೇ ಇದೆ ನೋಡಿ ಇನ್ನೊಂದು ಟ್ವಿಸ್ಟ್!
ಅತ್ತ ಜನವರಿ 9ರಂದು ಬಿಡುಗಡೆ ಆಗಬೇಕಿದ್ದ ಜನ ನಾಯಗನ್ ಪೋಸ್ಟ್‌ಪೋನ್ ಆಗಿದೆ. ಹೊಸ ರಿಲೀಸ್ ಡೇಟ್ ಅನ್ನು ಚಿತ್ರತಂಡ ಇನ್ನೂ ಘೋಷಣೆ ಮಾಡಿಲ್ಲ. ಆದರೂ ಮೂಲಗಳ ಪ್ರಕಾರ, ನಟ ವಿಜಯ್ ಅವರ 52ನೇ ಹುಟ್ಟುಹಬ್ಬದ (ಜೂನ್ 22) ಸಂಭ್ರಮದ ಅಂಗವಾಗಿ ಜೂನ್ 18ರಂದು ಜನ ನಾಯಗನ್ ಚಿತ್ರವನ್ನು ಬಿಡುಗಡೆ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಪ್ಲ್ಯಾನ್ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಆ ಹೊತ್ತಿಗೆ ಐಪಿಎಲ್, ಚುನಾವಣೆಗಳೆಲ್ಲಾ ಮುಗಿದಿರುವುದರಿಂದ ಪ್ರೇಕ್ಷಕರು ಯಾವುದೇ ಗೊಂದಲವಿಲ್ಲದೆ ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಾರೆ ಎಂಬ ನಂಬಿಕೆ ಚಿತ್ರತಂಡದ್ದಾಗಿದೆ ಎಂಬ ಮಾತು ಕೇಳಿಬಂದಿವೆ.
ಎರಡನೇ ಬಾರಿ ಪೋಸ್ಟ್‌ಪೋನ್
ಅಸಲಿಗೆ ಟಾಕ್ಸಿಕ್ ಸಿನಿಮಾವನ್ನು ಘೋಷಣೆ ಮಾಡಿದ್ದು 2023ರ ಡಿಸೆಂಬರ್‌ನಲ್ಲಿ. ಆಗಲೇ ಈ ಸಿನಿಮಾ 2026ರ ಏಪ್ರಿಲ್ 10ರಂದು ರಿಲೀಸ್ ಅಗಲಿದೆ ಎಂದು ಅಧಿಕೃತವಾಗಿ ಹೇಳಲಾಗಿತ್ತು. ಕೊನೆಗೆ 2026ರ ಮಾರ್ಚ್ 19ರಂದು ಬರುವುದು ಪಕ್ಕಾ ಎಂದೇ ಬಿಂಬಿಸಲಾಗಿತ್ತು. ಇದೀಗ ಕೊನೆ ಗಳಿಗೆಯಲ್ಲಿ ಜೂನ್ 4ಕ್ಕೆ ಮುಂದೂಡಲಾಗಿದೆ. ಇನ್ನು, ಮಾರ್ಚ್ 28ರಿಂದ ಮೇ 31ರ ತನಕ ಐಪಿಎಲ್ ಇರುವುದಿರಂದ, ಸೀದಾ ಜೂನ್ 4ನೇ ತಾರೀಕನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ.
15 ದಿನಗಳ ಅಂತರದಲ್ಲಿ ಎರಡು ಸಿನಿಮಾ?
ಇದೀಗ ಉದ್ಭವಿಸಿರುವ ಪ್ರಶ್ನೆ ಎಂದರೆ, 15 ದಿನಗಳ ಅಂತರದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ತಮ್ಮ ಎರಡು ಬಿಗ್ ಬಜೆಟ್ ಸಿನಿಮಾಗಳನ್ನು ರಿಲೀಸ್ ಮಾಡಲಿದೆಯಾ ಎಂಬುದು. ಇವೆರಡೂ ಸಿನಿಮಾಗಳ ಬಜೆಟ್ ಆಗಲೇ 1000 ಕೋಟಿ ರೂ. ಮೀರಿದೆ ಎಂಬುದು ಮೂಲಗಳ ಮಾಹಿತಿ. ಆಗಲೇ ದೊಡ್ಡ ರಿಸ್ಕ್‌ನಲ್ಲಿರುವ ಚಿತ್ರತಂಡ, ಮತ್ತೊಮ್ಮೆ ಇಂಥ ಕಠಿಣ ನಿರ್ಧಾರಕ್ಕೆ ಕೈ ಹಾಕಲಿದೆಯಾ ಎಂಬುದೇ ಎಲ್ಲರ ಪ್ರಶ್ನೆ.
ಸದ್ಯ ಟಾಕ್ಸಿಕ್ ಚಿತ್ರ ಜೂನ್ 4ರಂದು ರಿಲೀಸ್ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಆದರೆ ಜನ ನಾಯಗನ್ ರಿಲೀಸ್ ಬಗ್ಗೆ ಅಪ್ಡೇಟ್ ನೀಡಿಲ್ಲವಾದ್ದರಿಂದ, ಜನ ನಾಯಗನ್ ಬಿಡುಗಡೆಯು ಮತ್ತಷ್ಟು ಮುಂದಕ್ಕೆ ಹೋದರೂ ಅಚ್ಚರಿ ಏನಿಲ್ಲ!