ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart attacks: ರಾಜ್ಯದಲ್ಲಿ ಹಠಾತ್ ಸಾವು ʼಅಧಿಸೂಚಿತ ಕಾಯಿಲೆʼ ಎಂದು ಪರಿಗಣನೆ; ಮರಣೋತ್ತರ ಪರೀಕ್ಷೆ ಕಡ್ಡಾಯ

Heart attacks: ಹಠಾತ್ ಸಾವುಗಳನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ನಾವು ನಿರ್ಧರಿಸಿದ್ದೇವೆ. ಆಸ್ಪತ್ರೆಗಳ ಹೊರಗೆ ಹಠಾತ್ ಸಾವು ಸಂಭವಿಸಿದರೆ, ಅದನ್ನು ಸರ್ಕಾರಕ್ಕೆ ತಿಳಿಸಬೇಕು. ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಹಠಾತ್ ಸಾವು ʼಅಧಿಸೂಚಿತ ಕಾಯಿಲೆʼ ಎಂದು ಪರಿಗಣನೆ

Profile Prabhakara R Jul 7, 2025 10:42 PM

ಬೆಂಗಳೂರು: ರಾಜ್ಯ ಸರ್ಕಾರ ಹಠಾತ್ ಸಾವುಗಳನ್ನು 'ಅಧಿಸೂಚಿತ ಕಾಯಿಲೆ' ಎಂದು ಸೋಮವಾರ ಘೋಷಿಸಿದ್ದು, ಅಂತಹ ಪ್ರಕರಣಗಳಲ್ಲಿ (Heart attacks) ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದೆ. ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವು ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

ಹಠಾತ್ ಸಾವುಗಳನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ನಾವು ನಿರ್ಧರಿಸಿದ್ದೇವೆ. ಆಸ್ಪತ್ರೆಗಳ ಹೊರಗೆ ಹಠಾತ್ ಸಾವು ಸಂಭವಿಸಿದರೆ, ಅದನ್ನು ಸರ್ಕಾರಕ್ಕೆ ತಿಳಿಸಬೇಕು. ಹುಟ್ಟಿನಿಂದಲೇ ರೋಗಗಳನ್ನು ಹೊಂದಿರುವ ಜನ ಇರುವುದರಿಂದ, ಸುಮಾರು 15 ವರ್ಷ ವಯಸ್ಸಿನ ಮಕ್ಕಳು ಸೇರಿದಂತೆ ಹೆಚ್ಚಿನ ಜನರನ್ನು ವರ್ಷಕ್ಕೊಮ್ಮೆಯಾದರೂ ತಪಾಸಣೆ ಮಾಡುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.

ಹೃದಯಾಘಾತ ಮತ್ತು ಹಠಾತ್ ಸಾವುಗಳಿಗೆ ಕಾರಣವಾಗುವ ರೋಗಗಳ ಕುರಿತು ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕ ಪಠ್ಯ ಅಳವಡಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗುವುದು ಎಂದ ಸಚಿವರು, ಸಿಪಿಆರ್ ಕುರಿತು ಜನರಿಗೆ ತರಬೇತಿ ನೀಡಲು ಸಹ ನಿರ್ಧರಿಸಲಾಗಿದೆ. ಇದಲ್ಲದೆ, ರಾಜ್ಯದ 86 ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಈ ವರ್ಷ ತಾಲೂಕು ಮಟ್ಟದ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಹಠಾತ್ ಹೃದಯಾಘಾತದಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಹಠಾತ್ ಹೃದಯಾಘಾತ ಮತ್ತು ಕೋವಿಡ್ -19 ಸೋಂಕು ಮತ್ತು ಲಸಿಕೆಯೊಂದಿಗೆ ಅವುಗಳ ಸಂಭಾವ್ಯ ಸಂಬಂಧದ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ವರದಿಯನ್ನು ಉಲ್ಲೇಖಿಸಿ, ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ದಿನೇಶ್ ಗೂಂಡುರಾವ್ ಹೇಳಿದರು.

ಈ ಸುದ್ದಿಯನ್ನೂ ಓದಿ | Pavagada News: ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಶಿಕ್ಷಣ ಪ್ರೇಮ ಮೆರೆದ ಅಂಗನವಾಡಿ ಕಾರ್ಯಕರ್ತೆ!