Karnataka Monsoon: ಗುಡ್ ನ್ಯೂಸ್, ತುಸು ಮೊದಲೇ ಬರಲಿದೆ ಮಾನ್ಸೂನ್
Monsoon news: ಉಪಗ್ರಹ ಚಿತ್ರಗಳು ಈಗಾಗಲೇ ಅಂಡಮಾನ್ ಸಮುದ್ರ ಮತ್ತು ಕೇರಳ ಪ್ರದೇಶದ ಸುತ್ತಲೂ ದಟ್ಟವಾದ ಮೋಡ ಕವಿದಿರುವುದನ್ನು ಸೂಚಿಸಿವೆ. ಮೇ 13ರ ಸುಮಾರಿಗೆ ಅಂಡಮಾನ್ ಸಮುದ್ರ, ಬಂಗಾಳಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಆರಂಭ ಸಂಭವಿಸಬಹುದು.


ಬೆಂಗಳೂರು: ಈ ವರ್ಷ ಭಾರತದ ನೈಋತ್ಯ ಮಾನ್ಸೂನ್ ನಿಗದಿತ ಸಮಯಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಆಗಮಿಸುವ ಸಾಧ್ಯತೆಯಿದೆ. ಮೇ 27ರ ಸುಮಾರಿಗೆ ಕೇರಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಶನಿವಾರ ಪ್ರಕಟಿಸಿದೆ. ಮುನ್ಸೂಚನೆಯಂತೆ 4 ದಿನಗಳ ʼದೋಷದ ಅಂತರʼ ಆಗಬಹುದು, ಅಂದರೆ ನಾಲ್ಕು ದಿನ ಆಚೀಚೆ ಆಗಬಹುದು ಎಂದಿದೆ. ಇದು ಒಂದೆರಡು ದಿನಗಳಲ್ಲಿ ಕರ್ನಾಟಕ (karnataka monsoon news) ಪಶ್ಚಿಮ ಕಾರವಳಿಯನ್ನು ಪ್ರವೇಶಿಸುತ್ತದೆ.
ದಕ್ಖನ್ ಪ್ರದೇಶ ಹೆಚ್ಚುತ್ತಿರುವ ಶಾಖದ ಒತ್ತಡಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಈ ಮುನ್ಸೂಚನೆ ರಿಲೀಫ್ ನೀಡಿದೆ. ಇದು ಇಲ್ಲಿನ ಕೃಷಿ ಮತ್ತು ಆರ್ಥಿಕತೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ವಿಶೇಷವಾಗಿ ಜಾಗತಿಕ ಆರ್ಥಿಕ ಒತ್ತಡಗಳ ನಡುವೆ ಹಣದುಬ್ಬರ ಕಾಳಜಿಯನ್ನು ನಿರ್ವಹಿಸುವಲ್ಲಿ. "ಎಲ್ಲಾ ಪರಿಸ್ಥಿತಿಗಳು ಆರಂಭಿಕ ಮಾನ್ಸೂನ್‌ಗೆ ಅನುಕೂಲಕರವಾಗಿವೆ. ವಾಯುವ್ಯ ಭಾರತದಲ್ಲಿ ಹೆಚ್ಚಿನ ರಾತ್ರಿಯ ತಾಪಮಾನವೂ ಒಂದು ಸೂಚನೆ. ನಮ್ಮ ಮಾದರಿಗಳು ಬೇಗನೆ ಆರಂಭಿಕ ಮಾನ್ಸೂನ್ ತೋರಿಸುತ್ತಿವೆ" ಎಂದು ಐಎಂಡಿ ಮಹಾನಿರ್ದೇಶಕ ಎಂ. ಮೊಹಾಪಾತ್ರ ಹೇಳಿದರು.
ಉಪಗ್ರಹ ಚಿತ್ರಗಳು ಈಗಾಗಲೇ ಅಂಡಮಾನ್ ಸಮುದ್ರ ಮತ್ತು ಕೇರಳ ಪ್ರದೇಶದ ಸುತ್ತಲೂ ದಟ್ಟವಾದ ಮೋಡ ಕವಿದಿರುವುದನ್ನು ಸೂಚಿಸಿವೆ. "ಈ ಪ್ರದೇಶದ ಮೇಲಿನ ಮೋಡವು ಮೇ 13ರ ಸುಮಾರಿಗೆ ಅಂಡಮಾನ್ ಸಮುದ್ರ, ಬಂಗಾಳಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಆರಂಭ ಸಂಭವಿಸಬಹುದು ಎಂದು ಸೂಚಿಸುತ್ತಿದೆ" ಎಂದು ಮೊಹಾಪಾತ್ರ ಹೇಳಿದರು.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರಂದು ಕೇರಳದಲ್ಲಿ ಆರಂಭವಾಗುತ್ತದೆ. ಸುಮಾರು ಏಳು ದಿನಗಳ ವಿಚಲನೆಯೊಂದಿಗೆ. ಉತ್ತರದತ್ತ ಇದು ಸಾಗಿ ಸಾಮಾನ್ಯವಾಗಿ ದೇಶಾದ್ಯಂತದ ಬೇಸಿಗೆಯ ಸುಡುವ ತಾಪಮಾನಕ್ಕೆ ತಂಪನ್ನು ತರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾರ್ಚ್‌ನಲ್ಲಿ ದಿಢೀರ್ ಬದಲಾವಣೆ ಕಂಡುಬಂದಿದೆ. ಕೆಲವು ಪ್ರದೇಶಗಳಲ್ಲಿ ಪ್ರವಾಹ ಮತ್ತು ಇತರ ಪ್ರದೇಶಗಳಲ್ಲಿ ಮಳೆಯ ಕೊರತೆ ಆಗಿದೆ.
ಐಎಂಡಿಯ ವಿಸ್ತೃತ ವ್ಯಾಪ್ತಿಯ ಮುನ್ಸೂಚನೆಯು ಮೇ 22-29 ಮತ್ತು ಮುಂದಿನ ವಾರದ ನಡುವೆ ಕೇರಳ ಮತ್ತು ನೈಋತ್ಯ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ತೋರಿಸಿದೆ.
ಮಾನ್ಸೂನ್ ಆರಂಭದ ಮುನ್ಸೂಚನೆಯು ಆರು ಪ್ರಮುಖ ಮುನ್ಸೂಚಕಗಳನ್ನು ಅವಲಂಬಿಸಿದೆ: ವಾಯುವ್ಯ ಭಾರತದಲ್ಲಿ ಹೆಚ್ಚಿನ ಕನಿಷ್ಠ ತಾಪಮಾನ, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮಾನ್ಸೂನ್ ಪೂರ್ವ ಮಳೆಯ ಗರಿಷ್ಠ, ಉಪೋಷ್ಣವಲಯದ ವಾಯುವ್ಯ ಪೆಸಿಫಿಕ್ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದ ಒತ್ತಡ, ಹೊರಹೋಗುವ ದೀರ್ಘ ತರಂಗ ವಿಕಿರಣ, ದಕ್ಷಿಣ ಚೀನಾ ಸಮುದ್ರದ ಮೇಲೆ ಮತ್ತು ಈಶಾನ್ಯ ಹಿಂದೂ ಮಹಾಸಾಗರ ಮತ್ತು ಇಂಡೋನೇಷ್ಯಾ ಪ್ರದೇಶದ ಮೇಲೆ ಗಾಳಿಯ ಮಾದರಿಗಳು.
ಕಳೆದ 20 ವರ್ಷಗಳಲ್ಲಿ (2005-2024) ತನ್ನ ಕಾರ್ಯಾಚರಣೆಯ ಮುನ್ಸೂಚನೆಗಳು 2015 ಹೊರತುಪಡಿಸಿ ಉಳಿದ ವರ್ಷಗಳಲ್ಲಿ ಸರಿಯಾಗಿವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇತ್ತೀಚಿನ ವರ್ಷಗಳ ಭವಿಷ್ಯವಾಣಿ ಹೆಚ್ಚು ನಿಖರವಾಗಿವೆ. 2023ರಲ್ಲಿ ಜೂನ್ 4ರಂದು ಸೂಚನೆ ಇತ್ತು, ಆದರೆ ಮಾನ್ಸೂನ್ ಜೂನ್ 8ರಂದು ಪ್ರಾರಂಭವಾಯಿತು. 2024ರಲ್ಲಿ ಮುನ್ಸೂಚನೆ ಮೇ 31ಕ್ಕೆ ಇತ್ತು, ಆದರೆ ಮಾನ್ಸೂನ್ ಮೇ 30ರಂದು ಆಗಮಿಸಿತು.
ಇದನ್ನೂ ಓದಿ: ಮುಂಗಾರು ಮಳೆಯಲ್ಲಿ ಮಾನ್ಸೂನ್ ರಾಗ