ಮುಡಾ ಹಗರಣ; ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರಿಗೆ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾ ಮಾಡಿದೆ.
ಸಿದ್ದರಾಮಯ್ಯ, ಮುಡಾ (ಸಂಗ್ರಹ ಚಿತ್ರ) -
ಬೆಂಗಳೂರು, ಜ. 28: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ (MUDA Scam Case) ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರಿಗೆ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾ ಮಾಡಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರ ಬಿ-ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಕೋರ್ಟ್ ಮೆಟ್ಟಿಲೇರಿದ್ದರು. ಇದರ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಬಿ ರಿಪೋರ್ಟ್ ಅನ್ನು ಪುರಸ್ಕರಿಸಿದ್ದು, ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ವಿರುದ್ಧ ಮುಡಾ ಸೈಟ್ ಹಂಚಿಕೆ ಆರೋಪಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಮುಡಾ ಹಗರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲಕ ದೇವರಾಜು ವಿಚಾರದಲ್ಲಿ ನೀಡಿರುವ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ಜಡ್ಜ್ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮತ್ತೊಂದು ಕ್ಲೀನ್ ಚಿಟ್
ಸಾಮಾನ್ಯವಾಗಿ ಪೊಲೀಸರು, ಲೋಕಾಯುಕ್ತ ಅಥವಾ ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳು ಪ್ರಕರಣವೊಂದರ ತನಿಖೆ ನಡೆಸಿ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಗದೆ ಹೋದರೆ ‘ಬಿ ರಿಪೋರ್ಟ್’ ಸಲ್ಲಿಸುತ್ತವೆ. ಕೆಲವು ಸಮಯಗಳ ಹಿಂದೆ ಕೇಳಿ ಬಂದ ಮುಡಾ ಹಗರಣ ಸಿದ್ದರಾಮಯ್ಯ ಅವರ ರಾಜಕೀಯಕ್ಕೆ ಕಪ್ಪು ಚುಕ್ಕೆಯಾಗಲಿದೆ ಎನ್ನಲಾಗಿತ್ತು. ಆದರೆ ಅವರು ಇದೀಗ ಆರೋಪಮುಕ್ತರಾಗಿದ್ದಾರೆ.
ಪ್ರಕರಣದ ವಿವರ
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ. 464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಪ್ರಾಧಿಕಾರವು ಬಳಸಿಕೊಂಡಿತ್ತು. ಇದಕ್ಕೆ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ತನಗೆ ಪ್ರಾಧಿಕಾರ ನೀಡಿದ್ದ 14 ಸೈಟುಗಳನ್ನು ವಾಪಸ್ ನೀಡುವುದಾಗಿ ಪಾರ್ವತಿ ಸಿದ್ದರಾಮಯ್ಯ ಘೋಷಿಸಿದ್ದರು.
ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಸಿದ್ದರಾಮಯ್ಯ ಹಗರಣ ಎಸಗಿದ್ದಾರೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿತ್ತು. ಇನ್ನು ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ, ಸಂಬಂಧಿ ಹಾಗೂ ಜಮೀನಿನ ಮಾಲೀಕರ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಕೊನೆಗೆ ಸಾಕ್ಷಿಗಳ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸಿದ್ದರು.