Yelahanka MLA Vishwanath: ಹೆಚ್.ಎನ್.ವ್ಯಾಲಿ ನೀರು ವಿಷಕನ್ಯೆಯ ರೀತಿ ಬಳಕೆಗೆ ಬಂದವರ ಮುಗಿಸುತ್ತದೆ: ಯಲಹಂಕ ಶಾಸಕ ವಿಶ್ವನಾಥ್ ಅಭಿಮತ
ರಾಜರ ಆಳ್ವಿಕೆಯಲ್ಲಿ ಶತೃಗಳನ್ನು ಸಂಹರಿಸಲು ವಿಷಕನ್ಯೆಯ ಬಳಸುತ್ತಿದ್ದರು. ಆದರೆ ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವದಲ್ಲಿ ನಮ್ಮನ್ನಾಳುವ ಸರಕಾರಗಳು, ಜನತೆ ಕುಡಿಯಲು ಶುದ್ಧ ನೀರು ಕೊಡಿ ಎಂದು ಕೇಳಿದರೆ, ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿವೆ. ಅದನ್ನೂ ಕೂಡ ಪರಿಪೂರ್ಣವಾಗಿ ಮಾಡದ ಕಾರಣ ವಿಷದ ನೀರು ಕರೆಗಳಿಗೆ ಬಂದು ತುಂಬಿದೆ
-
ಚಿಕ್ಕಬಳ್ಳಾಪುರ : ಅಂತರ್ಜಲ ವೃದ್ದಿಯ ಹೆಸರಿನಲ್ಲಿ ಜಿಲ್ಲೆಯ ಅಸಂಖ್ಯಾತ ಕೆರೆಗಳ ಒಡಲನ್ನು ಸೇರಿರುವ ಹೆಚ್.ಎನ್.ವ್ಯಾಲಿ(H.N.Valley) ನೀರು ಚಂದ್ರಗುಪ್ತ ಮೌರ್ಯನ ಕಾಲದಲ್ಲಿದ್ದ ವಿಷಕನ್ಯೆಯ ಪರಿಯಂತಾಗಿದೆ ಎಂದು ಯಲಹಂಕ ಶಾಸಕ ವಿಶ್ವನಾಥ್ (Yelahanka MLA Vishwanath) ತಿಳಿಸಿದರು.
ನಗರದಲ್ಲಿ ಭಾನುವಾರ ಜೀವಜಲ ಜಲಾಗ್ರಹ ವೇದಿಕೆ, ಶುದ್ಧ ನೀರಿಗಾಗಿ ಜನಾಂದೋಲನ ಹೆಸರಿನಲ್ಲಿ ಏರ್ಪಡಿಸಿದ್ದ ಹೆಚ್.ಎನ್.ವ್ಯಾಲಿ ತ್ಯಾಜ್ಯ ನೀರಿನ 3ನೇ ಹಂತದ ಶುದ್ಧೀಕರಣ ಮಾಡಬೇಕೆಂದು ಆಗ್ರಹಿಸಿ ನಡೆಸಿದ ಬೃಹತ್ ಪ್ರತಿಭಟನಾ ರ‍್ಯಾಲಿಯ ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಜನತೆ ಉದ್ದೇಶಿಸಿ ಮಾತನಾಡಿದರು.
ರಾಜರ ಆಳ್ವಿಕೆಯಲ್ಲಿ ಶತೃಗಳನ್ನು ಸಂಹರಿಸಲು ವಿಷಕನ್ಯೆಯ ಬಳಸುತ್ತಿದ್ದರು. ಆದರೆ ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವದಲ್ಲಿ ನಮ್ಮನ್ನಾಳುವ ಸರಕಾರಗಳು, ಜನತೆ ಕುಡಿಯಲು ಶುದ್ಧ ನೀರು ಕೊಡಿ ಎಂದು ಕೇಳಿದರೆ, ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿವೆ. ಅದನ್ನೂ ಕೂಡ ಪರಿಪೂರ್ಣವಾಗಿ ಮಾಡದ ಕಾರಣ ವಿಷದ ನೀರು ಕರೆಗಳಿಗೆ ಬಂದು ತುಂಬಿದೆ ಎಂದರು.
ಹೆಚ್.ಎನ್. ವ್ಯಾಲಿ ನೀರು ಕುಡಿಯಲಾಗಲಿ, ಕೃಷಿಗಾಗಲಿ ಬಳಸಲು ಯೋಗ್ಯವಲ್ಲದೆ ಇದ್ದರೂ, ಈ ನೀರು ಹರಿಯುವ ಕರೆಗಳ ಸೆರಗಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಇಂಗಿ ಅಂತರ್ಜಲದ ರೂಪದಲ್ಲಿ ಕುಡಿಯಲು ಬಳಸುತ್ತಿರುವುದರಿಂದ ಕ್ಯಾನ್ಸ್ರ್, ಕಿಡ್ನಿ ಸಮಸ್ಯೆ, ಕಾಣಿಸಿಕೊಂಡು ನಿಷ್ಪಾಪಿ ಜನರ ಬದುಕು ಮತ್ತು ಭವಿಷ್ಯವನ್ನು ಹಾಳು ಮಾಡಿದೆ. ಇದಕ್ಕೆಲ್ಲಾ ನಾವೂ ಕಾರಣವಾಗಿದ್ದೇವೆ ಎಂಬುದು ಬೇಸರದ ಸಂಗತಿಯಾಗಿದೆ.
ನೀರಾವರಿ ಹೋರಾಟಗಾರರ ಪ್ರತಿಭಟನೆಯ ನಡುವೆಯೂ ಕಾರ್ಯಗತವಾದ ಹೆಚ್.ಎನ್. ವ್ಯಾಲಿ ಯೋಜನೆ ಜಿಲ್ಲೆಯ ಜನರನ್ನು ವ್ಯವಸ್ಥಿತವಾಗಿ ಮುಗಿಸಲು ಕೊಳಚೆ ನೀರನ್ನು ಬಳಸಿಕೊಳ್ಳಲಾಗಿರುವುದು ನೋವಿನ ಸಂಗತಿಯಾಗಿದೆ ಎಂದರು.
60-70 ವರ್ಷಗಳ ಕಾಲ ನಂದಿಬೆಟ್ಟ(Nandi Hill)ದಲ್ಲಿ ಹುಟ್ಟುವ ಮೊದಲ ನದಿ ವೃಷಭಾ ವತಿ ನದಿ(Vrishabhavati River)ಯು ನಂದಿ ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಜನತೆಗೆ ಶುದ್ಧ ಕುಡಿಯುವ ನೀರನ್ನು ಕೊಟ್ಟಿದೆ. ಇದಾದ ನಂತರ ಚಿತ್ರಾವತಿ, ಪಾಲಾರ್ ಪೆನ್ನಾರ್ ನದಿಗಳು ಕೊಟ್ಟಿವೆ. ಇಂತಹ ಶುದ್ಧನೀರು ಕೊಟ್ಟ ಜಿಲ್ಲೆಗೆ ಸರಕಾರ ಅಶುದ್ಧ ನೀರು ಹರಿಸಿ ಪಾಪದ ಕೆಲಸ ಮಾಡಿದೆ. ನಾನೂ ಮಾಡಿದ್ದೇನೆ ಎಂದು ಅನ್ನಿಸಿದ ಕಾರಣದಿಂದ ಇದನ್ನು ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ನಾನು ಬಂದಿದ್ದೇನೆ ವಿನಃ ಯಾರ ವಿರುದ್ಧದ ಹೋರಾಟಕ್ಕೂ ಅಲ್ಲ ಎಂದರು.
ಪ್ರದೀಪ್ ಈಶ್ವರ್(MLA Pradeep Eshwar) ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಅವರು ನನ್ನ ಲೆವೆಲ್ ಏನಿದ್ದರೂ ಮೋದಿ ಲೆವೆಲ್ ಎಂದಿದ್ದಾರೆ. ಹೀಗಾಗಿ ನಾನು ಸಾಮಾನ್ಯರಲ್ಲಿ ಸಾಮಾನ್ಯ, ನನ್ನ ಲೆವೆಲ್ ನಿಮ್ಮ ಲೆವೆಲ್. ಸಾಮಾನ್ಯ ಲೆವೆಲ್‌ನಿಂದಲೇ ನಾನು ಈ ಲೆವೆಲ್‌ಗೆ ಬಂದಿದ್ದೇನೆ. ನನ್ನ ಪ್ರಕಾರ ಮಾತೇ ಕೆಲಸವಾಗಬಾರದು, ಕೆಲಸ ಮಾತಾಗಬೇಕು. ಮಾತಾಡುವುದೇ ವೃತ್ತಿಯಾಗಬಾರದು ಎಂದು ಶಾಸಕರನ್ನು ಮಾತಲ್ಲೇ ಕುಟುಕಿದರು.
ಹಿಂದೆ ಹೆಚ್.ಎನ್.ವ್ಯಾಲಿ ನೀರಿನ ಬಗ್ಗೆ ವಿಧಾನ ಸಭೆಯಲ್ಲಿ ಸ್ಪೀಕರ್ ರಮೇಶ್‌ಕುಮಾರ್ ಕಣ್ಣೀರು ಹಾಕುತ್ತಾ ನಮ್ಮದು ಬರಪೀಡಿತ ಜಿಲ್ಲೆ. 1500 ಅಡಿ ಹೋದರೂ ನೀರು ಸಿಗುತ್ತಿಲ್ಲ. ಬೆಂಗಳೂರಿನ ಮೂತ್ರದ ನೀರನ್ನಾದರೂ ಕೊಡಿ ಎಂದು ಗೋಗರೆದರು. ಬಹುಶ: ಅವರಿಗೂ ಕೂಡ ಈ ಕಲ್ಪನೆ ಇರಲಿಲ್ಲ. ಅವರಂದುಕೊಂಡಿದ್ದಂತೆ ಬಹುಶಃ ಶುದ್ಧವಾದ ನೀರು ಕೊಡುತ್ತಾರೆ, ಕೆರೆಗಳಿಗೆ ಬಂದ ಮೇಲೆ ಅಂತರ್ಜಲ ಜಾಸ್ತಿ ಆಗುತ್ತದೆ. ನಮ್ಮ ಬದುಕು ಬಂಗಾರ ಆಗಲಿದೆ ಎಂದು ಭಾವಿಸಿದ್ದರು. ನಾವೂ ಕೂಡ ಅವರಿಗೆ ಬೆಂಬಲ ಕೊಟ್ಟೆವು. ಹೊಸ ಯೋಜನೆ ಕಂಡು ಸಂತೋಷ ಪಟ್ಟಿದ್ದೆವು. ಬೆಂಗಳೂರಿನ ಜನ ಬಳಸಿರುವ ತ್ಯಾಜ್ಯ ನೀರಲ್ಲವಾ ಫಿಲ್ಟರ್ ಮಾಡಿ ಕೊಡಬಹುದು ಎಂದೇ ಭಾವಿಸಿದ್ದೆವು. ಆಗ ನಾನೂ ಕೂಡ ವಿಧಾನ ಸಭೆಯಲ್ಲಿದ್ದೆ ದುಷ್ಪರಿಣಾಮಗಳನ್ನು ಎಣಿಸಿರಲಿಲ್ಲ. ಈಗ ರಮೇಶ್ ಕುಮಾರ್ ಪಶ್ಚಾತ್ತಾಪ ಪಡುತ್ತಿದ್ದಾರೆ. ನಾನು ಪಡುತ್ತಿದ್ದೇನೆ ಎಂದರು.
ಐಐಎಸ್‌ಸಿ, ಎನ್‌ಜಿಟಿ ಸಂಸ್ಥೆಗಳು ತನಿಖಾ ತಂಡ ಬಿಟ್ಟು ತನಿಖೆ ಮಾಡಿಸಿದ್ದಾರೆ. ಹೆಚ್.ಎನ್.ವ್ಯಾಲಿ ಕೆರೆಗಳ ಅಚ್ಚುಕಟ್ಟುಗಳಲ್ಲಿ ಇರುವ ಬೋರ್‌ಗಳಿಂದ ಬರುವ ಅಂತರ್ಜಲವೂ ಕೂಡ ಕುಡಿಯುವಷ್ಟು ಶುದ್ಧವಿಲ್ಲ ಎಂದಿದ್ದಾರೆ. ಭೂಮಿ ಒಳಗೆ ಹೋಗಿ ಬರುವ ಅಂತರ್ಜಲದಲ್ಲೂ ಅನೇಕ ರಾಸಾಯನಿಕ ಇದೆ ಎಂದು ವರದಿ ಕೊಟ್ಟಿದ್ದಾರೆ. ಇಂತಹ ಅಂತರ್ಜಲದ ನೀರಿನಿಂದ ಬೆಳೆದಿರುವ ಹಣ್ಣು ತರಕಾರಿಗಳಲ್ಲಿ ಸೀಸ,ತಾಮ್ರ,ಸತು ಇತ್ಯಾದಿ ಮನುಷ್ಯರ ಆರೋಗ್ಯಕ್ಕೆ ಹಾನಿ ಮಾಡುವಂತಹ ರಾಸಾಯನಿಕ ಮಿಶ್ರಿತ ಅಂಶಗಳಿವೆ ಎಂದು ಹೇಳಿದರು.
ಈ ನೀರು ಬಳಸಿ ಬೆಳೆಯುತ್ತಿರುವ ಎಲ್ಲಾ ಬೆಳೆಗಳಲ್ಲೂ ವಿಷಯುಕ್ತ ರಸಾಯನಿಕ ಇದೆ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕೂಡ ವಿಧಾನ ಸಭೆಯಲ್ಲಿ ಸರಕಾರದ ಗಮನ ಸೆಳೆದಿದ್ದಾರೆ. ಡಾ.ಅಶ್ವತ್ಥ್ ನಾರಾಯಣ್ (Dr. Ashwath Narayan)ಕೂಡ ನೀರಿನ ಆಹಾರ ದಲ್ಲಿರುವ ವಿಷದ ಅಂಶಗಳನ್ನು ಸಭೆಗೆ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಸಭೆಯಲ್ಲಿ, ಲೋಕಸಭೆಯಲ್ಲಿ ಡಾ.ಮಂಜುನಾಥ್ ಗಮನ ಸೆಳೆದಿದ್ದಾರೆ. ಡಾ.ಸುಧಾಕರ್ ಕೂಡ ಮಾತನಾಡಬಹುದು.ಗೆಲ್ಲುವರೆಗೆ ಪಕ್ಷ ಬೇಕು ಗೆದ್ದ ಮೇಲೆ ಎಲ್ಲರೂ ನಮ್ಮವರೇ. ಒಳ್ಳೆಯ ಕೆಲಸ ಮಾಡಿದರೆ ಜನರೇ ಹೆಗಲ ಮೇಲೆ ಹೊತ್ತು ಮೆರೆಸುತ್ತಾರೆ ಎಂದರು.
ನಾವು ಕೇಳಿದ್ದು ಎತ್ತಿನಹೊಳೆ ನೀರು. 24 ಟಿಎಂಸಿ ನೀರು ಪ್ರಾರಂಭದಲ್ಲಿ ಚಿಕ್ಕಬಳ್ಳಾಪುರ ಕೋಲಾರಕ್ಕೆ ಹರಿಸಲು ಈ ಯೋಜನೆ 8 ಸಾವಿರ ಕೋಟಿಯಿಂದ ಪ್ರಾರಂಭವಾಗಿ ಈಗ 35 ಸಾವಿರ ಕೋಟಿಗೆ ಹೋಗಿ ನಿಂತಿದೆ. ಯೋಜನೆ ಮಾತ್ರ ಇನ್ನೂ ಕೂಡ ಸಕಲೇಶಪುರದಲ್ಲೇ ನಿಂತಿದೆ. ಒಂದು ವೇಳೆ ಶುದ್ಧ ನೀರು ಕೆರೆಗಳಿಗೆ ಹರಿಸಿದರೂ ಈಗಾಗಲೇ ಹರಿದಿರುವ ಹೆಚ್.ಎನ್.ವ್ಯಾಲಿ ನೀರು ಹರಿಸಿರುವ ಕಾರಣ ಅಂತರ್ಜಲ ಸೇರಿರುವ ವಿಷಕಾರಿ ಅಂಶಗಳು ಡೈಲ್ಯೂಟ್ ಆಗಲು 60-70 ವರ್ಷ ಹೋದರೂ ಆಗದು ಎಂದು ಎಚ್ಚರಿಸಿದರು.
ಇನ್ನಾದರೂ ಸರಿಯೆ ರಾಜ್ಯ ಸರಕಾರ 3ನೇ ಹಂತದ ಶುದ್ಧೀಕರಣ ಮಾಡಲು ಮನಸ್ಸು ಮಾಡಬೇಕು. ಇಲ್ಲದಿದ್ದಲ್ಲಿ ಜನತೆ ಆಕ್ರೋಶಕ್ಕೆ ತುತ್ತಾಗಬೇಕಾಗಬಹುದು. ನೇಪಾಳ ಬಾಂಗ್ಲಾ, ಶ್ರೀಲಂಕಾ ದೇಶಗಳಲ್ಲಿ ಜನತೆಯ ಸಿಟ್ಟು ಉಂಟು ಮಾಡಿದ ಪರಿಣಾಮವನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
*
ಹೆಚ್.ಎನ್.ವ್ಯಾಲಿ ನೀರನ್ನು ಕುಡಿದು ಕ್ಯಾನ್ಸ್ರ್ ಬರುತ್ತಿದೆ, ಕಿಡ್ನಿ ವೈಫಲ್ಯ ಆಗುತ್ತಿದೆ, ಇಲ್ಲಿನ ತರಕಾರಿಗಳಲ್ಲಿ ರಾಸಾಯನಿಕ ಅಂಶಗಳಿವೆ ಎಂಬುದನ್ನು ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೇರೆಕಡೆಯಿಂದ ಹೆಣ್ಣು ಕೊಡಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗೆ ಆದರೆ ಏನು ಮಾಡಬೇಕು.ನನ್ನ ತಾಯಿಯ ಊರು ಇದೇ ತಾಲೂಕಿನಲ್ಲಿರುವ ಕಾರಣ ಇಲ್ಲಿಗೇನಾದರೂ ಆದರೆ ನನಗೆ ನೋವಾಗುತ್ತದೆ. ಜನತೆಯ ಹಿತಾಸಕ್ತಿಗಾಗಿ ನಡೆಯುವ ಪ್ರತಿಭಟನೆ ಹೋರಾಟದಲ್ಲಿ ನಾನು ಸದಾ ಭಾಗಿಯಾಗುತ್ತೇನೆ. ಪಕ್ಷದ ಬಾವುಟ ಇಲ್ಲದೆ ನಡೆಯುವ ಹೋರಾಟಕ್ಕೆ ಶಾಸಕ ಪ್ರದೀಪ್ ಈಶ್ವರ್ ಕರೆದರೂ ಬರುತ್ತೇನೆ ಎಂದರು.
*
ನಾನು ಇತ್ತೀಚೆಗೆ ಬಿಡಬ್ಲ್ಯುಸಿ ಇಂಜನಿಯರ್ ಅವರನ್ನು ಕರೆಸಿ ಹೆಚ್.ಎನ್. ವ್ಯಾಲಿ ನೀರನ್ನು 3ನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಇರುವ ಅಡ್ಡಿ ಆತಂಕ ಏನು? ಎಂದು ಕೇಳಿದೆ.ಅವರು ಹೇಳಿದಂತೆ 1 ಟಿಎಂಸಿ ನೀರನ್ನು 3ನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು 190 ಕೋಟಿ ರೂಪಾಯಿ ಖರ್ಚಾಗಲಿದೆ. ಹೀಗಾದಲ್ಲಿ ಈ ನೀರಿನಿಂದ ಮೀನುಗಳು ಬದುಕಲು ಏನೂ ಸಿಗಲ್ಲ ಅಂತಾರೆ.ಕೆರೆಗೆ ನೀವು ಫಿಲ್ಟರ್ ವಾಟರ್ ಮಾತ್ರ ಬಿಡಲ್ಲ, ಮಳೆ ನೀರು ಬರಲ್ಲವಾ? ಮೊದಲು ಮನುಷ್ಯರನ್ನು ಉಳಿಸಿ ಎಂದು ತಿಳಿಸಿರುವುದಾಗಿ ಹೇಳಿದರು. ಮುಂದುವರೆದು ಸಿಂಗಾಪುರದಲ್ಲಿ ಶುದ್ಧೀಕರಿಸಿದ ನೀರನ್ನೇ ಅವರು ಕುಡಿಯುತ್ತಾರೆ.ಟಾಯ್ಲೆಟ್ ನೀರನ್ನು ಶುದ್ಧೀಕರಿಸಿಯೇ ಕೊಡುತ್ತಾರೆ.ಇಲ್ಲಿಯೂ ಹಾಗೆ ಮಾಡಲಿ ಎಂದರು.
ಹೆಬ್ಬಾಳದಿಂದ ಶುದ್ಧೀಕರಿಸಿ ಕೆರೆಗಳಿಗೆ ಹರಿಸುವ ಯೋಜನೆ ಇದಾಗಿದ್ದರೂ, ಅಧಿಕಾರಿಗಳ ವೈಫಲ್ಯದಿಂದ ಪ್ರತಿ ದಿನ ಪ್ರಯೋಗಾಯಕ್ಕೆ ಕಳಿಸುವಾಗ 2ನೇ ಹಂತದ ಶುದ್ದೀಕರಿಸಿದ ನೀರನ್ನೇ ಕಳಿಸುತ್ತಾರೆ.ರಾತ್ರಿ ಹೊತ್ತು 2ನೇ ಹಂತದಲ್ಲಿ ಶುದ್ಧೀಕರಣ ಮಾಡದೆಯೇ ಹಾಗೆಯೇ ಹರಿಸಿಬಿಡುತ್ತಾರೆ. ಹೀಗಾಗಿ ಈ ಸಮಸ್ಯೆ ಉಂಟಾಗಿದೆ.ಇದು ಅತ್ಯಂತ ಅಪಾಯ ಕಾರಿ ಬೆಳವಣಿಗೆಯಾಗಿದೆ. ಬೊಮ್ಮಾಯಿ ಸರಕಾರದಲ್ಲಿ ನಾವು 3ನೇ ಹಂತದ ಶುದ್ದೀಕರಣ ಕ್ಕೆ ಬಜೆಟ್‌ನಲ್ಲಿಯೇ ತಿಳಿಸಿದ್ದೆವು. ನಂತರದಲ್ಲಿ ನಮ್ಮ ಸರಕಾರ ಬರಲಿಲ್ಲ. ಈಗಿರುವ ಕಾಂಗ್ರೆಸ್ ಸರಕಾರಕ್ಕೆ ಆಬದ್ಧತೆಯಿಲ್ಲ ಎಂದು ಹರಿಹಾಯ್ದರು.
ಇದು ಸರಕಾರದ ಪ್ರಶ್ನೆ ಅಲ್ಲ ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ಹೋರಾಟ ಅತ್ಯಂತ ಶ್ರೇಷ್ಟವಾದ ಕೆಲಸವಾಗಿದೆ. ಇವತ್ತು ಈ ಸರಕಾರ ಇದೆ, ನಾಳೆ ನಮ್ಮ ಸರಕಾರವೇ ಬರಬಹುದು. ಜನಪರ ಹೋರಾಟಗಳಿಗೆ ಅವರಿವರೆನ್ನದೆ ಎಲ್ಲರೂ ಬರಬೇಕು. ಶಾಸಕ ಪ್ರದೀಪ್ ಈಶ್ವರ್ ಕೂಡ ಬರಬೇಕು. ಅವರಿಲ್ಲಿಗೆ ಬಾರದಿರಲು ಅವರ ಹೈಕಮಾಂಡ್ ಏನು ಸೂಚನೆ ಕೊಟ್ಟಿದೆಯೋ ಗೊತ್ತಿಲ್ಲ.ಆದರೆ ಅವರು ಬಹಳ ನಿರ್ಭೀತಿಯಿಂದ ಮಾತನಾಡು ತ್ತಾರೆ. ಸೋಮವಾರದ ಅಸೆಂಬ್ಲಿಯಲ್ಲಿ ಅವರು ಗುಡುಗಬಹುದು ಅಂದುಕೊಂಡಿದ್ದೇನೆ. ಅವರು ಗುಡುಗಿ 3ನೇ ಹಂತದ ಶುದ್ದೀಕರಣಕ್ಕೆ ಸರಕಾರ ಒಪ್ಪಿದರೆ ಅವರನ್ನು ಸಂದೀಪ್ ರೆಡ್ಡಿ ಹೊತ್ತು ಮೆರವಣಿಗೆ ಮಾಡಲಿದ್ದಾರೆ.ಆ ಕಾರ್ಯಕ್ರಮಕ್ಕೆ ನಾನೂ ಬರುತ್ತೇನೆ.ಇದು ನಾನು ಅವರಿಗೆ ಕೊಡುವ ಗೌರವ ಎಂದರು.
ನಮ್ಮ ತಾಯಿಯ ತವರು ಇಲ್ಲಿಯೇ ಇರುವ ಕಾರಣ ಆಗಾಗ ನಮ್ಮ ಬಂಧುಗಳನ್ನು ಭೇಟಿ ಮಾಡಲು ಬರುತ್ತಿರುತ್ತೇನೆ. ಆಗ ಅದೇ ನೀರು ಕುಡಿದು ನನಗೂ ಆರೋಗ್ಯ ಕೆಡಬಾರದು, ಬಂಧುಗಳಿಗೂ ಆಗಬಾರದು.ಹೀಗಾಗಿ ಈ ಹೋರಾಟಕ್ಕೆ ಬೆಂಬಲಿಸಿದ್ದೇನೆ. ಬಹಳ ಮುಖ್ಯ ವಾಗಿ ಕೃಷ್ಣಾ ನದಿ ನೀರು ಜಿಲ್ಲೆಯ ಗಡಿವರೆಗೂ ಬಂದಿದೆ. ಗೋದಾವರಿ ನೀರೂ ಬರಲಿದೆ. ಈ ನೀರನ್ನು ಜಿಲ್ಲೆಗೆ ತರುವ ಕೆಲಸ ಮಾಡಬೇಕು. ಕುಡಿಯುವ ಕಾರಣ ನೀಡಿದರೆ ಯಾವ ರಾಜ್ಯ ಮುಖ್ಯಮಂತ್ರಿಯೂ ತಕರಾರು ಮಾಡುವುದಿಲ್ಲ.ಬೇಸಾಯಕ್ಕೆ ಅಲ್ಲ ಕುಡಿಯುವ ಕಾರಣಕ್ಕೆ. ನೀರಿನಿಂದಲೇ ಅನೇಕ ಖಾಯಿಲೆಗಳು ಬರುತ್ತಿವೆ.ಕೋಲಾರದ ಟೊಮೆಟೋ ಎಂದರೆ ಜನ ಹಿಂಜರಿಯುತ್ತಾರೆ. ಮುಂದೆ ಚಿಕ್ಕಬಳ್ಳಾಪುರದ ಹೂವು ಹಣ್ಣು, ತಕಾರಿಗಳಿಗೆ ಆ ಸ್ಥಿತಿ ಬಾರದು. ಒಮ್ಮೆ ಹೀಗೆ ಅಪಪ್ರಚಾರ ಆದರೆ ಸಾಕು ಆರ್ಥಿಕವಾಗಿ ಜಿಲ್ಲೆ ದಿವಾಳಿ ಆಗಲಿದೆ. ದೊಡ್ಡಬಳ್ಳಾಪುರಕ್ಕೆ ಬೆಂಗಳೂರಿನ ಶುದ್ಧನೀರು ಬರುತ್ತಿದೆ. ಅಲ್ಲಿಂದ 1 ಪೈಪು ಚಿಕ್ಕಬಳ್ಳಾಪುರಕ್ಕೆ ಕೊಟ್ಟರೆ ನಮ್ಮ ವಿರೋಧ ಇಲ್ಲ. ಹೀಗಾಗಿ ಹೋರಾಟ ಅಗತ್ಯ ಎಂದು ಎಚ್ಚರಿಕೆ ನೀಡಿದರು.
*
ಸಂದೀಪ್‌ರೆಡ್ಡಿ ಮಾತನಾಡಿ ಇದು ವ್ಯಕ್ತಿಕೇಂದ್ರಿತ ಕಾರ್ಯಕ್ರಮವಾಗಲಿ, ಹೋರಾಟ ವಾಗಲಿ ಅಲ್ಲ.ಚಿಕ್ಕಬಳ್ಳಾಪುರ ಜನರ ಆರೋಗ್ಯಕ್ಕೋಸ್ಕರ ನಡೆಯುತ್ತಿರುವ ಶುದ್ಧ ನೀರಿಗಾಗಿನ ಜನಾಂದೋಲನವಾಗಿದೆ. ಇದರ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಂಘಟನೆಗಳ ಮುಖಂಡರಿಗೆ,ಅಕ್ಕ ತಂಗಿ ಅಣ್ಣ ತಮ್ಮ ತಾಯಂದಿರಿಗೆ ಶಿರಭಾಗಿ ನಮಿಸಿದರು.
2026 ರ ಆಯವ್ಯಯಕ್ಕೂ ಮೊದಲು ಶಾಸಕ ಪ್ರದೀಪ್ ಈಶ್ವರ್ ಅವರಲ್ಲಿ 3ನೇ ಹಂತದ ಶುದ್ಧೀಕರಣಕ್ಕೆ ಹಣ ಮೀಸಲಾಗಿಡುವಂತೆ ಸರಕಾರದ ಮೇಲೆ ಒತ್ತಡ ತಂದು ಕೆಲಸ ಆಗನೋಡಿಕೊಳ್ಳಿ ಎಂದು ಮನವಿ ಮಾಡಲಾಗಿತ್ತು. ಯಾಕೋ ಗೊತ್ತಿಲ್ಲ ಸಾಹೇಬರು ಚುನಾವಣೆಗೂ ಮೊದಲು ಈ ಬಗ್ಗೆ ವೀರಾವೇಷದಿಂದ ಮಾತನಾಡುತ್ತಿದ್ದವರು, ಜನತೆ ಆರೋಗ್ಯದ ಮೇಲೆ ತೋರುತ್ತಿದ್ದ ಪ್ರೀತಿಯನ್ನೂ ಕಳೆದುಕೊಂಡಿದ್ದಾರೆ.ವಿಧಾನ ಸಭೆಯಲ್ಲಿ ಕನಿಷ್ಠ ಚಕಾರ ಎತ್ತದೆ ಚಿಕ್ಕಬಳ್ಳಾಪುರವನ್ನು ಹಗ್ಗಕ್ಕೆ ಕಬ್ಬಿಣಕ್ಕೆ ನೀಮಿತ ಮಾಡಿ ಈ ಜನರ ಆತ್ಮಗೌರವ ವಿಶ್ವಾಸವನ್ನು ನಗೆಪಾಟಲಿಗೀಡಾಗುವಂತೆ ಮಾಡಿದ್ದಾರೆ. ಇಂತಹ ದಪ್ಪ ಚರ್ಮದ ಶಾಸಕರಿಗೆ ನಮ್ಮ ಸಮಸ್ಯೆ ಆರ್ಥವಾಗಲಿ,ಇಲ್ಲಿನ ಸಮಸ್ಯೆ ಬಗ್ಗೆ ಸರಕಾರವನ್ನು ಪ್ರಶ್ನಿಸಲಿ ಎಂದು ತಿಳಿಸುವ ಕಾರಣಕ್ಕಾಗಿ ಸಾಮಾನ್ಯ ಜನರೆಲ್ಲಾ ಸೇರಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ನಾವ್ಯಾರು ನಾಯಕರಲ್ಲ, ಯಾವುದೋ ಪಕ್ಷದ ಪದಾಧಿಕಾರಿಗಳು ನಾವಲ್ಲ.ನಮ್ಮ ಹಕ್ಕಿಗಾಗಿ ಸ್ವಾಭಿಮಾನಿ ಜನ ಸಾಗರೋಪಾದಿಯಲ್ಲಿ ಸೇರಿದ್ದೀವಲ್ಲ ಇದು ಈ ಮಣ್ಣಿನ ಶಕ್ತಿಯಾಗಿದೆ.ಈ ಶಕ್ತಿಯನ್ನು ಮಣಿಸಲು ಯಾವ ಪ್ರದೀಪ್ ಈಶ್ವರ್ ಅವರಿಂದಲೂ ಸಾಧ್ಯವಿಲ್ಲ,ಯಾವ ಕಾಂಗ್ರೆಸ್ಸಿಗರಿAದಲೂ ಸಾಧ್ಯವಿಲ್ಲ.ಜಿಲ್ಲೆಯ ಕೆರೆಗಳಿಗೆ ಅಶುದ್ಧ ನೀರನ್ನು ಹರಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ.ಇದರ ಫಲವಾಗಿ ಪ್ರತಿ ಊರಿನಲ್ಲಿ ಡಯಾಲಿಸಿಸ್‌ಗೆ ಒಳಗಾಗುವ ಜನರಿದ್ದಾರೆ.ಕಾಂಗ್ರೆಸ್ ಸರಕಾರ ಜಿಲ್ಲೆಗೆ ಡಯಾಲಿಸಿಸ್ ಗ್ಯಾರೆಂಟಿ ಭಾಗ್ಯವನ್ನು ಕೊಟ್ಟಿದೆ.ನನ್ನ ಜನಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಜನತೆಗೆ ತಿಳಿಸುತ್ತಿದ್ದ ಮೆಡಿಕಲ್ ಮೇಷ್ಟರು. ಇವತ್ತು ಜಾಣಮೌನಕ್ಕೆ ಶರಣಾಗಿದ್ದಾರೆ. ಕೇಳಿದರೆ ಇನ್ನೂ ಹೆಚ್ಚಿನ ಪವರ್ ಬೇಕು ಎಂದು ಕೇಳುತ್ತಾರೆ.ಇದಕ್ಕಿಂತ ಹೆಚ್ಚಿನ ಪವರ್ ಏನು ಬೇಕು ಎಂದು ಪ್ರಶ್ನಿಸಿದರು.
ಜನತೆಯ ಬದುಕನ್ನು ಕೊಳಚೆ ನೀರಿನಲ್ಲಿ ಹೋಮ ಮಾಡಲು ಹೊರಟಿರುವ ಶಾಸಕರಿಗೆ ಧಿಕ್ಕಾರ ಹೇಳಲೇ ಬೇಕಿದೆ. ಈ ಕೂಗು ಅವರಿಗೆ ಕೇಳಿಸಿದ ಮೇಲೆಯಾದರೂ ಮುಖ್ಯಮಂತ್ರಿ ಗಳ ಬಳಿಗೆ ಹೋಗಿ ಶುದ್ಧೀಕರಣಕ್ಕೆ ಹಣ ತರಲಿ.ನೀವು ನಿಯೋಗ ಕರೆದುಕೊಂಡು ಹೋಗುವ ಮಾತಾಡಿ 10-12 ದಿನವಾಗಿದೆ.ಕನಿಷ್ಟ ಸೌಜನ್ಯಕ್ಕಾದರೂ ನಮ್ಮ ಜತೆ ಮಾತನಾಡಿಲ್ಲ. ನನ್ನನ್ನು ಬಿಡಿ ನೀರಾವರಿ ಹೋರಾಟ ಸಮಿತಿ ಸದಸ್ಯರನ್ನಾದರೂ ಕರೆದು ಮಾತನಾಡಿಲ್ಲ. ವಿಧಾನ ಸೌಧಕ್ಕೆ ಹೋಗುವ ರೂಪುರೇಷ ರೂಪಿಸಿಲ್ಲ, ಎಷ್ಟು ನಾಟಕ ವಾಡುತ್ತೀರಿ. ನಿಮಗೆ ಕೆಲಸ ಮಾಡಲು ಯೋಗ್ಯತೆ ಇಲ್ಲದೆ, ಕೆಲವು ಹುಡುಗರನ್ನು ಬಿಟ್ಟು ಅಹಿಂದ ಎಂಬ ಪರದೆ ಹಿಂದೆ ಬಚ್ಚಿಟ್ಟುಕೊಳ್ಳಲಿ ಹೋಗುವ ನಿಮಗೆ ನಾಚಿಕೆಯಾಗಬೇಕು. ಇಲ್ಲಿರುವವರೆಲ್ಲಾ ಅಹಿಂದ ಜನವೇ.ಅಹಿಂದ ಅಂತಲೇ ನಿಮ್ಮನ್ನೂ ಕೂಡ ಗೆಲ್ಲಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಮಾತ್ರ ನಾಯಕರಾಗಿ ಇಲ್ಲಿ ವಾಸ ಮಾಡಲಾಗದೆ ಬೆಂಗಳೂರಿನಲ್ಲಿ ಹಾಯಾಗಿರ ಬೇಕು. ಅಲ್ಲಿದ್ದು ಬಿಸ್ಲೆರಿ ನೀರು ಹಿಮಾಲಯ ನೀರು ಕುಡಿಯಬೇಕು. ಜಿಲ್ಲೆಯ ನನ್ನ ಜನ ಈ ಕೊಳಚೆ ನೀರು ಕುಡಿದು ಸಾಯಬೇಕಾ? ಕೊಳಚೆ ನೀರು ಕುಡಿದ ಕಾರಣವಾಗಿ ಗರ್ಭಕೋಶ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಆ ಪಾಪ ನಿಮ್ಮನ್ನು ಸುಡದೆ ಬಿಡುವುದಿಲ್ಲ.ಈ ಹೋರಾಟ ಕೇವಲ ಆರಂಭ ಮಾತ್ರ.ನಿಮ್ಮ ಲಾಟರಿ ಟಿಕೆಟ್ ಬಳಸಿಕೊಂಡು ಎಷ್ಟೋ ಮಂದಿ ದೊಡ್ಡವ ರಾದವರು ಇದ್ದಾರೆ? ಆದರೆ ನಿಮಗೆ ಲಾಟರಿ ಟಿಕೆಟ್ ಹೊಡೆದಿದ್ದಕ್ಕೆ ಚಿಕ್ಕಬಳ್ಳಾ ಪುರದ ಜನತೆ ಮೂಕರೋಧನೆ ಅನುಭವಿಸುತ್ತಿದೆ.ಈ ಶಾಪ ನಿಮಗೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೂ ತಟ್ಟುತ್ತದೆ ಎಂದು ಹರಿಹಾಯ್ದರು.ನನ್ನ ಜನತೆಗೋಸ್ಕರ ನಿಮ್ಮ ಕಾಲು ಹಿಡಿದು ಕೇಳಿ ಕೊಳ್ಳುತ್ತೇವೆ, ನಮಗೆ ಶುದ್ಧನೀರು ಕೊಟ್ಟು ನಮ್ಮ ತಂದೆ ತಾಯಿ ಅಕ್ಕ ತಂಗಿ ಮಕ್ಕಳು ಮರಿಗಳ ಬದುಕು ಉಳಿಸಿ.ನಿಮ್ಮನ್ನು ಎತ್ತಿಕೊಂಡು ಮೆರವಣಿಗೆ ಮಾಡುತ್ತೇನೆ ದಯವಿಟ್ಟು ಶುದ್ಧ ನೀರು ಕೊಡಿ ಎಂದು ಬೇಡಿಕೊಂಡರು.
ಚಿಕ್ಕಬಳ್ಳಾಪುರ ಬಂದ್ ಕಾರಣವಾಗಿ ಮದ್ಯಾಹ್ನದವರೆಗೆ ಅಂಗಡಿ ಮುಂಗಟ್ಟೆಗಳು ಸ್ವಯಂ ಪ್ರೇರಣೆಯಿಂದ ಮುಚ್ಚುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನಾ ರ‍್ಯಾಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ವಿಶೇಷವಾಗಿತ್ತು.ನಗರಸಭೆ ಸರ್ಕಲ್‌ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರೀಶ್, ಪರಿಸರವಾದಿ ಚೌಡಪ್ಪ, ಪ್ರೊ. ಗಂಗಾಧರ್‌ರೆಡ್ಡಿ ಮತ್ತಿತರರು ಇದ್ದರು.