ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರಿನಲ್ಲಿ ಜಂಬೂಸವಾರಿ ವೀಕ್ಷಣೆಗೆ ಬಂದಿದ್ದ 4 ವರ್ಷದ ಬಾಲಕನ ತಲೆಗೆ ಪೊಲೀಸರ ಲಾಠಿ ಏಟು; ಐಸಿಯುನಲ್ಲಿ ಚಿಕಿತ್ಸೆ

Mysuru Dasara 2026: ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಪೋಷಕರೊಂದಿಗೆ ಆಗಮಿಸಿದ್ದ ಬಾಲಕ ಶಿಶಿರ್ ಎಂಬಾತನಿಗೆ ಪೊಲೀಸ್ ಸಿಬ್ಬಂದಿ ಬೀಸಿದ ಲಾಠಿ ತಲೆಗೆ ಬಡಿದು ಗಂಭೀರ ಗಾಯವಾಗಿದ್ದು, ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಕಣ್ತುಂಬಿಕೊಳ್ಳಲು ಮಗುವಿನ ಜತೆ ಬಂದಿದ್ದ ಪೋಷಕರಿಗೆ ದೊಡ್ಡ ಆಘಾತ ಎದುರಾಗಿದೆ. ಜಂಬೂ ಸವಾರಿ ವೀಕ್ಷಣೆ ವೇಳೆ ಪೊಲೀಸರ ಲಾಠಿ ಏಟಿಗೆ ಗಂಭೀರವಾಗಿ ಗಾಯಗೊಂಡು ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಬುಧವಾರ ಸಂಜೆ ಮೈಸೂರಿನ ಹೈವೇ ಸರ್ಕಲ್ ಬಳಿ ಅಪಾರ ಜನಸ್ತೋಮ ಜಮಾಯಿಸಿತ್ತು. ದಸರಾ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ತಂದೆ ನಾಗರಾಜು ಹಾಗೂ ತಾಯಿ ಸೌಮ್ಯ ಜತೆ ಬಂದಿದ್ದ ನಾಲ್ಕು ವರ್ಷದ ಪುಟ್ಟ ಬಾಲಕ ಶಿಶಿರ್, ತನ್ನ ಪೋಷಕರ ಪಕ್ಕದಲ್ಲೇ ನಿಂತಿದ್ದನು. ಈ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಕರ್ತವ್ಯದಲ್ಲಿದ್ದ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ. ದುರದೃಷ್ಟವಶಾತ್, ಪೊಲೀಸರ ಲಾಠಿ ಆ ಮುಗ್ಧ ಬಾಲಕನ ತಲೆಗೆ ಬಲವಾಗಿ ಬಡಿದಿದೆ.

ಲಾಠಿ ಬೀಸಿದ ರಭಸಕ್ಕೆ ಪುಟ್ಟ ಬಾಲಕ ಶಿಶಿರ್ ತಲೆಯಿಂದ ರಕ್ತ ಸುರಿಯಲು ಆರಂಭಿಸಿತು. ಇದನ್ನು ಕಂಡು ಬೆಚ್ಚಿಬಿದ್ದ ಪೋಷಕರು ಗಾಬರಿಯಿಂದ ಮಗುವನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡಿ ಹೊಲಿಗೆ ಹಾಕಿದ್ದಾರೆ. ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಪರೀಕ್ಷಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ತಿಳಿಸಿರುವುದು ಕುಟುಂಬಸ್ಥರ ಆತಂಕವನ್ನು ಇಮ್ಮಡಿಗೊಳಿಸಿದೆ.



ಈ ಬಗ್ಗೆ ಮಾತನಾಡಿರುವ ಬಾಲಕನ ತಂದೆ ನಾಗರಾಜು, “ನಮ್ಮ ಮಗುವಿಗೆ ದಸರಾ ತೋರಿಸಲು ಕರೆತಂದಿದ್ದೆವು, ಆದರೆ ರಕ್ತದ ಮಡುವಿನಲ್ಲಿ ಒದ್ದಾಡುವುದನ್ನು ನೋಡುವ ದುಸ್ಥಿತಿ ಬಂತು. ಒಂದು ಪುಟ್ಟ ಮಗುವಿನ ಮೇಲೆ ಲಾಠಿ ಬೀಸುವುದು ಎಷ್ಟು ಸರಿ? ಎಂದು ಕಣ್ಣೀರಿಟ್ಟಿದ್ದಾರೆ.

ಮೈಸೂರು ದಸರಾದಲ್ಲಿ ಸಚಿವರಿಗೆ ಪ್ರವೇಶ ನಿರಾಕರಣೆ ಪ್ರಕರಣ: ವಿಚಾರಣೆಗೆ ಸಿಎಂ ಆದೇಶ



ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪ್ರತಾಪ್‌ ಸಿಂಹ ಆಗ್ರಹ

ಆಸ್ಪತ್ರೆಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಭೇಟಿ ನೀಡಿ, ಬಾಲಕ ಶಿಶಿರ್‌ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿ ಮೇಲೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸಿದ್ದ ಬನ್ನಿಮಂಟಪದ ನಿವಾಸಿಗಳಾದ ನಾಗರಾಜು ಹಾಗೂ ಸೌಮ್ಯ ದಂಪತಿಯ ಪುತ್ರರಾದ ಬಾಲಕ ಶಿಶಿರ್ ಅವರಿಗೆ ಪೊಲೀಸ್ ಸಿಬ್ಬಂದಿ ಬೀಸಿದ ಲಾಠಿ ತಲೆಗೆ ಬಡಿದು ಗಂಭೀರ ಗಾಯವಾಗಿದ್ದು, ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಆಸ್ಪತ್ರೆಗೆ ಭೇಟಿ ನೀಡಿ ಬಾಲಕ ಶಿಶಿರ್ ಅವರ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಲಾಯಿತು. ಈ ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿಯ ವಿರುದ್ಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಿಗೆ ದೂರವಾಣಿ ಮೂಲಕ ಮನವಿ ಮಾಡಲಾಯಿತು ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.