ಮೈಸೂರು ದಸರಾದಲ್ಲಿ ಸಚಿವರಿಗೆ ಪ್ರವೇಶ ನಿರಾಕರಣೆ ಪ್ರಕರಣ: ವಿಚಾರಣೆಗೆ ಸಿಎಂ ಆದೇಶ
ಮೈಸೂರು ದಸರಾದಲ್ಲಿ ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು: ಮೈಸೂರು ಅರಮನೆ ಆವರಣದಲ್ಲಿ ಬುಧವಾರ ನಂದಿಧ್ವಜ ಪೂಜೆ ಸಂದರ್ಭದಲ್ಲಿ (Mysuru Dasara) ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಆದರೂ ಅಧಿಕಾರಿಗಳ ಉಡಾಫೆ ಸಹಿಸಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಅದೇಶಿಸಿದ್ದೇನೆ ಎಂದು ಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅವರು ಹೇಳಿದ್ದಾರೆ.
ಏನಿದು ಪ್ರಕರಣ?
ಮೈಸೂರು ದಸರಾ ಜಂಬೂ ಸವಾರಿಗೂ ಮುನ್ನ ನಂದಿಧ್ವಜಕ್ಕೆ ಪೂಜೆ ಸಲ್ಲಿಕೆ ಮಾಡಲು ಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಸಚಿವರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಬಸವಂತಪ್ಪ, ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಅವರನ್ನು ಐಪಿಎಸ್ ಅಧಿಕಾರಿ ತಡೆದಿದ್ದರು. ಇದರಿಂದ ಸಚಿವರಿಗೆ ಮುಜುಗರ ಆಗಿತ್ತು. ಕೂಡಲೇ ಮಧ್ಯ ಪ್ರವೇಶ ಮಾಡಿದ್ದ ಸಿಎಂ, ಸಚಿವರನ್ನು ಒಳಗೆ ಬಿಡಲು ಹೇಳಿದ್ದರು. ಆ ಬಳಿಕ ಸಚಿವರು ಸಿಎಂ ಅವರೊಂದಿಗೆ ತೆರಳಿದ್ದರು.
Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಯಾರೋ ಅಧಿಕಾರಿಗಳು ಹೀಗೆ ಮಾಡಿದ್ದಾರೆ, ಆಗ ನಾನೇ ಅವರನ್ನು ಬಿಡಿಸಿದೆ. ಅದಕ್ಕೆಲ್ಲ ನಾನು ಏನು ಮಾಡೋಕೆ ಆಗಲ್ಲ. ನಮ್ಮ ಚಿಫ್ ಸೆಕ್ರೆಟರಿ ಅವರು ತನಿಖೆ ಮಾಡಿಸುತ್ತಿದ್ದಾರೆ. ದಸರಾ ಬಹಳ ವ್ಯವಸ್ಥಿತವಾಗಿ ನಡೆದಿದೆ. ಯತೀಂದ್ರ ಒಬ್ಬರ ಕೈಯಲ್ಲಿ ಆಗಲ್ಲ, ಆದ್ದರಿಂದಲೇ ನಾನು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ತಗೋಬೇಕು ಎಂದು ಹೇಳಿದ್ದೆ. ಫಾರೇನ್ ಡೆಲಿಗೆಟ್ಸ್ನ ರಾಯರೆಡ್ಡಿ ನೋಡಿಕೊಂಡರು, ಸಂತೋಷ ಎಲೆಕ್ಷನ್ ಇರುವ ಕಾರಣಕ್ಕೆ ಬರಲಿಲ್ಲ. ಸಚಿವ ಜಾರ್ಜ್ ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ಲೈಟಿಂಗ್ ಮಾಡಿದ್ದಾರೆ. ಎಲ್ಲಾ ಜವಾಬ್ದಾರಿ ವಹಿಸಿಕೊಂಡವರು ಬಹಳ ಚೆನ್ನಾಗಿ ಮಾಡಿದ್ದಾರೆ. ಕೆಲವರಿಗೆ ಎಲೆಕ್ಷನ್ ಇತ್ತು, ನಾನು ಪೋರ್ಸ್ ಮಾಡಲು ಹೋಗಿಲ್ಲ ಎಂದು ಸಿಎಂ ಹೇಳಿದರು.