ಮೈಸೂರು: ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ಎಂಎಲ್‌ಸಿ ಅಡಗೂರು ವಿಶ್ವನಾಥ್ (MLC Vishwanath) ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಲದರ್ಶಿನಿಯಲ್ಲಿ ವಿಶ್ವನಾಥ್ ರವರು ಇರುವಾಗ ಹಣ ಕೇಳಲು ಹೋದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರೆಂದು ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಆರೋಪಿಸಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿದ್ದಾರೆ.
2013 ರಲ್ಲಿ ವಿಶ್ವನಾಥ್ ರವರು ಸಂಸದರಾಗಿದ್ದಾಗ ಕೋಟೆಹುಂಡಿ ಮಹದೇವು ಎಂಟಿಬಿ ನಾಗರಾಜ್ ಮುಖಾಂತರ ವಿಶ್ವನಾಥ್ ಹಾಗೂ ಅವರ ಮಗ ಅಮಿತ್ ದೇವರಹಟ್ಟಿ ರವರಿಗೆ 55 ಲಕ್ಷ ನೀಡಿದ್ದಾರೆ. ಹಣ ಹಿಂದಿರುಗಿಸುವುದಾಗಿ ಸಾಲ ಪಡೆದ ವಿಶ್ವನಾಥ್ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ನೀಡಬೇಕಾಗಿದ್ದ ಸಾಲದ ಹಣವನ್ನು ವಾಪಸ್ ಕೇಳಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ಕೋಟೆಹುಂಡಿ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ವಿಶ್ವನಾಥ್ ರವರು ಜಲದರ್ಶಿನಿಯಲ್ಲಿ ಇರುವಾಗ ಕೋಟೆಹುಂಡಿ ಮಹದೇವು ಹಣ ಕೇಳಲು ಹೋದಾಗ ಎಚ್. ವಿಶ್ವನಾಥ್ ಹಾಗೂ ಅವರ ಕಡೆಯವರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹದೇವ್ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದ ಹಿನ್ನೆಲೆಯಲ್ಲಿ, ಸಂತ್ರಸ್ತ ಮಹದೇವ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ಸದ್ಯ ಎಚ್. ವಿಶ್ವನಾಥ್ ವಿರುದ್ಧ ಐಪಿಸಿ/ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ. ಸದ್ಯದಲ್ಲೇ ಪೊಲೀಸರು ಈ ಕುರಿತು ಎಂಎಲ್‌ಸಿ ವಿಶ್ವನಾಥ್ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.