ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Arkeshwara Temple: ಕೆ.ಆರ್.ನಗರದ ಪುರಾತನ ಹಿಂದೂ ದೇಗುಲದ ಮೇಲೆ ಶಿಲುಬೆ, ಮಸೀದಿ ಚಿತ್ರ; ಇಬ್ಬರ ವಿರುದ್ಧ ಎಫ್‌ಐಆರ್‌

K R Nagar News: ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ಸ್ವಾಮಿ ದೇವಾಲಯದ ಆವರಣದ ಗೋಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ ಹಾಗೂ ಹಸಿರು ಬಣ್ಣದಲ್ಲಿ ಮಸೀದಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಸನಾತನ ಧರ್ಮದ ಶ್ರದ್ಧಾಕೇಂದ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಭಕ್ತರು ಆಗ್ರಹಿಸಿದ್ದಾರೆ.

ಕೆ.ಆರ್.ನಗರದ ಪುರಾತನ ಹಿಂದೂ ದೇಗುಲದ ಮೇಲೆ ಶಿಲುಬೆ, ಮಸೀದಿ ಚಿತ್ರ!

-

Prabhakara R
Prabhakara R Oct 18, 2026 7:52 PM

ಮೈಸೂರು: ಜಿಲ್ಲೆಯ ಕೆ.ಆರ್.ನಗರ (KR Nagar) ತಾಲೂಕಿನ ಪ್ರಸಿದ್ಧ, ಪುರಾತನ ಧಾರ್ಮಿಕ ಕ್ಷೇತ್ರವಾದ ಅರ್ಕೇಶ್ವರ ಸ್ವಾಮಿ ದೇವಸ್ಥಾನದ (Arkeshwara Temple) ಆವರಣದ ಗೋಡೆಯ ಮೇಲೆ ಅನ್ಯ ಧರ್ಮಗಳ ಚಿಹ್ನೆಗಳನ್ನು ಬಿಡಿಸಿರುವುದು ಕಂಡುಬಂದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ಸ್ವಾಮಿ ದೇವಾಲಯದ ಆವರಣದ ಗೋಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ ಹಾಗೂ ಹಸಿರು ಬಣ್ಣದಲ್ಲಿ ಮಸೀದಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಯುವಕರು ಇದನ್ನು ಗಮನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸನಾತನ ಧರ್ಮದ ಶ್ರದ್ಧಾಕೇಂದ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ ಸ್ಥಳೀಯರು, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತ ಕೆ.ಆರ್.ನಗರ ತಹಸೀಲ್ದಾರ್ ಸುರೇಂದ್ರ ಮೂರ್ತಿ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ತಕ್ಷಣವೇ ಗೋಡೆಯ ಮೇಲಿದ್ದ ಚಿತ್ರಗಳನ್ನು ಅಳಿಸಿಹಾಕಲು ಕ್ರಮ ಕೈಗೊಂಡರು. ಅಲ್ಲದೆ, ದೇವಾಲಯದ ಪಾರುಪತ್ತೇದಾರ್ ಆರತಿ ಹಾಗೂ ಚಿತ್ರ ಬಿಡಿಸಿದ ಕಲಾವಿದ ವಿನಯ್ ಎಂಬುವವರ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿದ್ದಾರೆ.

ಪ್ರಚೋದನಾಕಾರಿ ಕೆಲಸ ಮಾಡಿದವರನ್ನು ಬಂಧಿಸಬೇಕು: ವಿಜಯೇಂದ್ರ ಆಗ್ರಹ

ಕೆ.ಆರ್.ನಗರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಪ್ರಚೋದನಾಕಾರಿ ಕೆಲಸ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕೆ.ಆರ್.ನಗರದ ಪ್ರಸಿದ್ಧ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿ ಇತರ ಧಾರ್ಮಿಕ ಚಿಹ್ನೆಗಳನ್ನು ರಚಿಸಿ, ಸನಾತನ ಧರ್ಮದ ಶ್ರದ್ಧಾಕೇಂದ್ರದ ಪವಿತ್ರತೆಗೆ ಧಕ್ಕೆ ತರಲು ಯತ್ನಿಸಿರುವುದು ಅತ್ಯಂತ ಖಂಡನೀಯ. ಇದು ಸೂಕ್ಷ್ಮತೆಯ ಅರಿವಿಲ್ಲದ, ಸಂವೇದನಾರಹಿತ ಉದ್ಧಟತನ ಎಂದು ಕಿಡಿಕಾರಿದ್ದಾರೆ.

ಧಾರ್ಮಿಕ ಸಾಮರಸ್ಯದ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಆಚಾರ-ವಿಚಾರಗಳು ಹಾಗೂ ಪದ್ಧತಿಗಳ ಮೇಲೆ ಸವಾರಿ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಮತ್ತು ಈ ಕುರಿತಂತೆ ಈ ತುಘಲಕ್ ಸರ್ಕಾರದ ಮೌನ ಭಕ್ತಾದಿಗಳ ಭಾವನೆಗಳಿಗೆ ಎಸಗಿದ ದ್ರೋಹವಾಗಿದೆ. ಇವರ ಢೋಂಗಿ ಮುಖವಾಡವನ್ನು ಕಳಚಿ ಅಸಲೀ ಮುಖವನ್ನು ಬಯಲು ಮಾಡಿದೆ.

ಇತರ ಪ್ರಾರ್ಥನಾ ಮಂದಿರಗಳಲ್ಲಿ ಕಾಣಿಸದ ಇಂತಹ ಕುಚೋದ್ಯಗಳು ಕೇವಲ ಹಿಂದೂ ನಂಬಿಕೆಗಳ ಮೇಲೆಯೇ ಹೇರುವುದು ಯಾಕೆ? ಮಾನ್ಯ ಮುಖ್ಯಮಂತ್ರಿಗಳೇ, ಹಿಂದೂಗಳ ಶಾಂತಿ ಪ್ರಿಯತೆಯನ್ನು ದೌರ್ಬಲ್ಯ ಎಂದುಕೊಂಡ ವಿಕೃತ ಮನಸ್ಸಿನ ಕುಚೋದ್ಯಗಳಿಗೆ, ಪ್ರಚೋದನೆಗಳಿಗೆ ನಿಮ್ಮ ಸರ್ಕಾರ ತಕ್ಕ ಶಾಸ್ತಿ ಮಾಡದೆ ಹೋದರೆ ಜನರೇ ಆ ಕೆಲಸ ಮಾಡಬೇಕಾದೀತು. ಸಾಮರಸ್ಯ ಎಂಬುದು ಎಲ್ಲಾ ಧರ್ಮಗಳಿಗೂ ಸಮಾನವಾಗಿ ಅನ್ವಯವಾಗಬೇಕಾದ ತತ್ವ. ರಾಜ್ಯದಲ್ಲಿ ಈ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸನಾತನ ಪರಂಪರೆ ಹಾಗೂ ಭಕ್ತರ ಧಾರ್ಮಿಕ ಹಕ್ಕುಗಳನ್ನು ಕಡೆಗಣಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ಪ್ರಕರಣದಲ್ಲಿ ತಹಸೀಲ್ದಾರ್ ಅವರು ನಂತರ ಆ ಚಿಹ್ನೆಗಳನ್ನು ತೆರವುಗೊಳಿಸುವುದಷ್ಟೇ ಸಾಲದು, ಇಂತಹ ಪ್ರಚೋದನಾಕಾರಿ ಕೆಲಸ ಮಾಡಿರುವವರ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಬಂಧಿಸಬೇಕು, ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಆಟವಾಡುತ್ತಿರುವ ಇಂತಹ ಉದ್ಧಟತನ ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.