ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysuru KDP Meeting: ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ 7ರಿಂದ 14ನೇ ಸ್ಥಾನಕ್ಕೆ ಕುಸಿತ; ಡಿಡಿಪಿಐಗೆ ಸಿಎಂ ತರಾಟೆ

Mysuru News: ಕೆಡಿಪಿ ಸಭೆಯಲ್ಲಿ ಮೈಸೂರು ಡಿಡಿಪಿಐನಿಂದ ವಿವರ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಸಾರಿ ಫಲಿತಾಂಶ ಸುಧಾರಿಸಬೇಕು. ಇಲ್ಲದಿದ್ದರೆ, ಡಿಡಿಪಿಐ ಮತ್ತು ಬಿಇಒ ಗಳನ್ನು ಇದಕ್ಕೆ ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಕುಸಿತ; ಡಿಡಿಪಿಐ ವಿರುದ್ಧ ಸಿಎಂ ಗರಂ

ಮೈಸೂರಿನ ಜಿಪಂ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಕೆಡಿಪಿ ಸಭೆ ನಡೆಯಿತು. -

Prabhakara R
Prabhakara R Nov 10, 2025 7:36 PM

ಮೈಸೂರು, ನ.10: ಮೈಸೂರು ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ ಏಳರಿಂದ ಹದಿನಾಲ್ಕಕ್ಕೆ ಕುಸಿದಿರುವುದಕ್ಕೆ ಡಿಡಿಪಿಐಗೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ (Mysuru KDP Meeting) ತರಾಟೆ ತೆಗೆದುಕೊಂಡಿದ್ದಾರೆ. ಫಲಿತಾಂಶ ಮೇಲೆ ತರಲು ಏನೇನು ಆಕ್ಷನ್‌ ಪ್ಲಾನ್‌ ಮಾಡಿದ್ದೀರಿ ಎಂದು ನೂತನ ಡಿಡಿಪಿಐ ಅವರಿಂದ ಸಿಎಂ ಮಾಹಿತಿ ಪಡೆದಿದ್ದು, ಜಿಲ್ಲೆಯು ಶಿಕ್ಷಣ ಸೂಚ್ಯಂಕದಲ್ಲಿ ಕುಸಿತವಾಗಿರುವುದನ್ನು ಕಂಡು ಗರಂ ಆಗಿದ್ದಾರೆ.

ಈ ವೇಳೆ ಡಿಡಿಪಿಐ ಚಂದ್ರಕುಮಾರ್‌ ಅವರು ತಾವು ಹಮ್ಮಿಕೊಂಡಿರುವ ಆಕ್ಷನ್‌ ಪ್ಲಾನ್‌ ವಿವರಿಸಿದರು. ಮೇಲಿನಿಂದ ಅಧಿಕಾರಯುತವಾಗಿ ಶಿಕ್ಷಕರನ್ನು ತೊಡಗಿಸಿಕೊಳ್ಳುವುದಕ್ಕಿಂತ ಸ್ವಯಂ ಪ್ರೇರಣೆಯಿಂದ ಗುಣಮಟ್ಟದ ಶಿಕ್ಷಣಕ್ಕೆ ತುಡಿಯುವಂತೆ ಮಾಡಿಕೊಂಡಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಿದರು.

ವಿವರ ಕೇಳಿದ ಮುಖ್ಯಮಂತ್ರಿಗಳು ಮುಂದಿನ ಸಾರಿ ಫಲಿತಾಂಶ ಸುಧಾರಿಸಬೇಕು. ಇಲ್ಲದಿದ್ದರೆ, ಡಿಡಿಪಿಐ ಮತ್ತು ಬಿಇಒ ಗಳನ್ನು ಇದಕ್ಕೆ ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸುದ್ದಿಯನ್ನೂ ಓದಿ | Mysore Silk Sarees: ಮೈಸೂರು ಸಿಲ್ಕ್‌ ಸೀರೆಗಳಿಗೆ ಹೆಚ್ಚಿದ ಬೇಡಿಕೆ; ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಹಾಲು, ಊಟ, ಸಮವಸ್ತ್ರ, ಶೂ, ಬಾಳೆಹಣ್ಣು, ಸ್ಕಾಲರ್‌ಶಿಪ್‌ ಸೇರಿ ಅಗತ್ಯ ಎಲ್ಲಾ ಸವವಲತ್ತುಗಳನ್ನು ಒದಗಿಸುತ್ತಿದ್ದರೂ ಶಾಲಾ ದಾಖಲಾತಿ ಪ್ರಮಾಣ ಕಳೆದ ವರ್ಷಕ್ಕಿಂತ ಈ ವರ್ಷ ಶೇ.2.5 ರಷ್ಟು ಕಡಿಮೆ ಆಗಿರುವುದಕ್ಕೆ ಮುಖ್ಯಮಂತ್ರಿಗಳು ಕಾರಣ ಕೇಳಿ ಶಿಕ್ಷಕರ ಗುಣಮಟ್ಟ ಉನ್ನತೀಕರಿಸಿ, ದಾಖಲಾತಿ ಪ್ರಮಾಣ ಹೆಚ್ಚಿಸಿ ಎನ್ನುವ ಸೂಚನೆ ನೀಡಿದರು.

ಆರೋಗ್ಯ ಮತ್ತು ಶಿಕ್ಷಣ ನನ್ನ ಮೊದಲ ಆದ್ಯತೆ. ಮೈಸೂರು ಜಿಲ್ಲೆಗೆ ಎರಡೂ ಕ್ಷೇತ್ರಕ್ಕೆ ಅಗತ್ಯ ಸವಲತ್ತು ಮತ್ತು ಅನುದಾನಗಳನ್ನು ಕಲ್ಪಿಸುತ್ತಿದ್ದೇವೆ. ಆದರೆ ಫಲಿತಾಂಶ ಮತ್ತು ಕಾರ್ಯಕ್ಷಮತೆಯಲ್ಲಿ ಕೊರತೆ ಆಗಬಾರದು. ಇದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ. ನೀವೂ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಮಾನವ-ಹುಲಿ ಸಂಘರ್ಷದ ಬಗ್ಗೆ ಗಂಭೀರ ಚರ್ಚೆ

ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಏನು ಕಾರಣ ? ವೈಜ್ಞಾನಿಕ‌ ಕಾರಣ ನೀಡಿ. ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದರು.

ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸಬೇಕು, ಲಂಟಾನ ತೆಗೆಸಬೇಕು, ಅರಣ್ಯದಲ್ಲಿ ಮೇವು ಬೆಳೆಸಬೇಕು . ಆನೆ, ಹುಲಿಗಳು ಹೊರಗೆ ಬರುವ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದ ಸಿಎಂ, ಅರಣ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಪ್ರತ್ಯೇಕವಾದ ಸಭೆ ಕರೆಯುತ್ತಿದ್ದೇವೆ. ಸಮಗ್ರ ಮಾಹಿತಿ ಮತ್ತು ಪರಿಹಾರದ ಬಗ್ಗೆ ಅಧ್ಯಯನ‌ ನಡೆಸಿ ಪೂರ್ತಿ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು ಎಂದು ಸಿಎಂ ಸೂಚಿಸಿದರು.

ಈಗಾಗಲೇ ಹೆಲ್ಪ್ ಲೈನ್ ತೆರೆಯಲಾಗಿದೆ. ಕಮಾಂಡ್ ಸೆಂಟರ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅರಣ್ಯ ಹಕ್ಕು ಕಾಯ್ದೆಗೆ ಬಂದಿರುವ 7000 ಅರ್ಜಿಗಳಲ್ಲಿ 5900 ಅರ್ಜಿಗಳು ತಿರಸ್ಕರಿಸಲ್ಪಟ್ಟಿರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಇವು 2019-20 ರಿಂದ ತಿರಸ್ಕರಿಲ್ಪಟ್ಟ ಅರ್ಜಿಗಳು. ತಿರಸ್ಕರಿಸುವಾಗ ಸ್ಪಷ್ಟವಾದ, ನೈಜವಾದ ಕಾರಣ ನೀಡದಿದ್ದರೆ ಅಂತಹ ಅರ್ಜಿಗಳನ್ನು ಮರುಪರಿಶೀಲನೆಗೆ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಹಾಡಿಗಳು, ಅರಣ್ಯವಾಸಿಗಳ ವಿಚಾರದಲ್ಲಿ ಅಂತಃಕರಣದಿಂದ ವರ್ತಿಸಿ ಎನ್ನುವ ಸೂಚನೆ ನೀಡಿದರು.

ACF ಮತ್ತು RFO ಗಳ ನಡುವೆ ಹೊಂದಾಣಿಕೆ ಇಲ್ಲ: ಅನಿಲ್ ಚಿಕ್ಕಮಾದು

ಎಚ್.ಡಿ.ಕೋಟೆಯಲ್ಲಿ ACF ಮತ್ತು RFO ಗಳ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮುಖ್ಯಮಂತ್ರಿಗಳ‌ ಗಮನಕ್ಕೆ ತಂದರು.

ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ, ಕರ್ತವ್ಯಲೋಪದಿಂದ ಮಾವ ಜೀವ ಹಾನಿ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಸಿದರು.

ಹಾಸ್ಟೆಲ್‌ಗಳಿಗೆ ನೋಡಲ್‌ ಅಧಿಕಾರಿ ನೇಮಿಸಿ

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಪ್ರತೀ ಹಾಸ್ಟೆಲ್‌ಗಳಿಗೆ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು. ಆಹಾರದ ಗುಣಮಟ್ಟ, ಶೈಕ್ಷಣಿಕ ವಾತಾವರಣ, ಕಟ್ಟಡಗಳ ಸ್ಥಿತಿ ಗತಿಯನ್ನು ಅವಲೋಕಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಡಲ್‌ ಅಧಿಕಾರಿಗಳ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದರು.

ಎಚ್‌.ಡಿ.ಕೋಟೆ ವ್ಯಾಪ್ತಿಯ ಹಾಡಿಗಳಲ್ಲಿನ 16 ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ವಿದ್ಯುತ್‌ ಮಾತ್ರ ಬರುತ್ತಿಲ್ಲ. ಹಾಡಿಗಳ ಕುಡಿಯುವ ನೀರು, ಹಕ್ಕು ಪತ್ರ, ಅಂಗನವಾಡಿ, ಮನೆ, ಆಹಾರ ವಿತರಣೆ, ಆರೋಗ್ಯ ಕಿಟ್‌ ವಿತರಣೆಯಲ್ಲಿ ಆಗುತ್ತಿರುವ ಲೋಪಗಳನ್ನು ಶಾಸಕರಾದ ಅನಿಲ್‌ ಚಿಕ್ಕಮಾದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಧಿಕಾರಿಗಳ ಲೋಪವನ್ನು ಪ್ರಶ್ನಿಸಿದರು.

ಹಾಡಿ ನಿವಾಸಿಗಳ ಅರಣ್ಯ ಉತ್ಪನ್ನ ಸಂಗ್ರಹ, ಮಾರಾಟದ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಮತ್ತು ಅಸಹಾಕಾರದ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ಆಯಿತು. ಈ ಬಗ್ಗೆ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂಥಾ ದುರ್ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರ ರೀತಿ ವರ್ತಿಸಬೇಡಿ. ಸ್ವಲ್ಪ ಉದಾರವಾಗಿ ವರ್ತಿಸಿ, ಮಾನವೀಯವಾಗಿ ನಡೆದುಕೊಳ್ಳಿ ಎಂದ ಶಾಸಕ ಅನಿಲ್‌ ಚಿಕ್ಕ ಮಾದು ಅವರ ಮಾತಿಗೆ, ಧ್ವನಿಗೂಡಿಸಿ ಅರಣ್ಯಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು.

ಆಹಾರ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಹಾಸ್ಟೆಲ್‌ಗಳ ಗುಣಮಟ್ಟ ಮತ್ತು ಆಹಾರ ಗುಣಮಟ್ಟದ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಎಚ್ಚರಿಸಿತು.

ಹೊಸದಾಗಿ ಆರಂಭಿಸಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ತಕ್ಷಣ ಆರಂಭಿಸಲಾಗಿದೆಯೇ ? ಸ್ವಂತ ಕಟ್ಟಡ ಇಲ್ಲದ ಕಡೆ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸುವ ಸೂಚನೆ ನೀಡಲಾಗಿತ್ತು. ಈ ಸೂಚನೆ ಎಷ್ಟರ ಮಟ್ಟಿಗೆ ಪಾಲನೆ ಆಗಿದೆ ಎಂದು ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪ್ರಶ್ನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 89 ಮತ್ತು ಪಿಯುಸಿಯಲ್ಲಿ ಶೇ. 65 ರಷ್ಟು ಫಲಿತಾಂಶ ಬಂದಿದೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ಸರ್ಕಾರ ಸಾಕಷ್ಟು ಅನುಕೂಲಗಳನ್ನು ಕಲ್ಪಿಸುತ್ತಿದೆ. ಕೇಳಿದಷ್ಟು ಅನುದಾನ ನೀಡುತ್ತಿದೆ. ಆದರೂ ಈ ಫಲಿತಾಂಶ ಸಮಾಧಾನಕರವಲ್ಲ. ಮಕ್ಕಳು ಹಾಸ್ಟೆಲ್‌ಗಳಲ್ಲೇ ಇರುವುದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಅವರ ಕಲಿಕೆಯ ಗುಣಮಟ್ಟ ಹೆಚ್ಚಿಸಿ ಎನ್ನುವ ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ | Mysuru KDP Meeting: ಜನರನ್ನು ಕಚೇರಿಗಳಿಗೆ ಅಲೆದಾಡಿಸಿದರೆ ಸಹಿಸಲ್ಲ: ಅಧಿಕಾರಿಗಳಿಗೆ ಸಿಎಂ ಖಡಕ್‌ ಎಚ್ಚರಿಕೆ

ಜಾತಿ ಪ್ರಮಾಣ ಪತ್ರ: ಲೇಟ್‌ ಮಾಡಬೇಡಿ

ಜಾತಿ ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಿ ಎನ್ನುವ ಸೂಚನೆಯನ್ನು ಸಿಎಂ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ, ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ 6,73,050 ಇದ್ದು ಜುಲೈ ಅಂತ್ಯದವರೆಗೆ ಶೇ.100 ರಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತೀಂದ್ರ ಅವರು, ನಾವು ಜನ ಸಂರ‍್ಕ ಸಭೆಗಳನ್ನು ಮಾಡಿದಾಗ ಹಣ ಬರುತ್ತಿಲ್ಲ ಎನ್ನುವ ದೂರು ಕೆಲವರಿಂದ ಬರುತ್ತಿದೆ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದ್ಯ ಖಚಿತಗೊಂಡಿರುವ ಫಲಾನುಭವಿಗಳಲ್ಲಿ ಅಷ್ಟೂ ಮಂದಿಗೆ ಹಣ ಪಾವತಿಯಾಗಿದೆ. ಕೆಲವರು ಅರ್ಹರಾಗಿದ್ದು, ದಾಖಲಾತಿ ಸರಿ ಇಲ್ಲದ ಕಾರಣದಿಂದ ನೋಂದಣಿ ಆಗದಿದ್ದರೆ ಅವರಿಗೆ ಸಂದಾಯವಾಗಿಲ್ಲ ಎಂದರು.