ಪಿರಿಯಾಪಟ್ಟಣ, ಅ.03: “ತಂತ್ರಜ್ಞಾನ ಬದಲಾದಂತೆ ಜನರ ನಿರೀಕ್ಷೆಯೂ ಬದಲಾಗುತ್ತಿದೆ. ಹೀಗಾಗಿ ನಾಡಹಬ್ಬ ಮೈಸೂರು ದಸರಾಕ್ಕೆ (Mysuru Dasara 2026) ಪ್ರತಿವರ್ಷ ಹೊಸತನದ ಸ್ಪರ್ಶ ನೀಡುವ ಉದ್ದೇಶದಿಂದ ಏರೋ ಶೋ, ಹೊರರಾಜ್ಯಗಳ ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಸೇರಿಸಲು ಉದ್ದೇಶಿಸಲಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪಿರಿಯಾಪಟ್ಟಣದ ಹೆಲಿಪ್ಯಾಡ್ ಬಳಿ ಶಿವಕುಮಾರ್ ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. ‘‘ಸಿನಿಮಾ, ಟಿವಿ, ಕಂಪ್ಯೂಟರ್, ಮೊಬೈಲ್ ಬಳಿಕ ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿದೆ. ಜನರು ಎಲ್ಲವನ್ನೂ ಎಲ್ಲಿಂದಲಾದರೂ ನೋಡಬಹುದಾದ ಕಾಲ ಇದು. ಆದರೂ ನೇರವಾಗಿ ಕಣ್ಣಾರೆ ಕಾರ್ಯಕ್ರಮಗಳನ್ನು ನೋಡಲು ಜನ ಬರುತ್ತಾರೆ. ಹೀಗಾಗಿ ದಸರಾ ಆಚರಣೆಯಲ್ಲಿ ಪ್ರತಿವರ್ಷ ಸ್ವಲ್ಪವಾದರೂ ಬದಲಾವಣೆ ತರಬೇಕು’’ ಎಂದರು.
ಏರ್ ಶೋಗೆ ರಕ್ಷಣಾ ಸಚಿವರ ಒಪ್ಪಿಗೆ
“ದಸರಾ ಸಂದರ್ಭದಲ್ಲಿ ಏರ್ ಶೋ ನಡೆಸುವಂತೆ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ರಕ್ಷಣಾ ಪಡೆಗಳ ಶಿಸ್ತು, ಸಾಮರ್ಥ್ಯವನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಅರಿಯಬೇಕು. ಎನ್ಸಿಸಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ ಇದು ಪ್ರೇರಣೆಯಾಗಲಿದೆ. ಏರೋ ಶೋ ತಂಡ ಕಳುಹಿಸುವಂತೆ ಮನವಿ ಮಾಡಿದ್ದು, ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ತಿಳಿಸಿದರು.
ಬೈಲಕುಪ್ಪೆ ಸಂಸ್ಕೃತಿಗೂ ವೇದಿಕೆ
“ಬೈಲಕುಪ್ಪೆಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಮುದಾಯದ ವಿಶಿಷ್ಟ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ದಸರಾ ಸಂದರ್ಭದಲ್ಲಿ ಪ್ರದರ್ಶಿಸಲು ಅವಕಾಶ ನೀಡುವಂತೆ ಸೂಚಿಸಲಾಗಿದೆ. ಅವರ ಕಲಾ–ಸಾಂಸ್ಕೃತಿಕ ಪ್ರದರ್ಶನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗುತ್ತಿದೆ” ಎಂದರು.
“ಸ್ಯಾಂಡಲ್‌ವುಡ್‌ನ ಹೊಸ ಹಾಗೂ ಹಿರಿಯ ಕಲಾವಿದರು ಕೂಡ ನಾಡಹಬ್ಬದಲ್ಲಿ ಪಾಲ್ಗೊಳ್ಳಬೇಕು. ಫಿಲಂ ಚೇಂಬರ್ನವರಿಗೆ ಈ ಬಗ್ಗೆ ಮನವಿ ಮಾಡಿದ್ದು, ಎಲ್ಲ ಕಲಾವಿದರು ದಸರಾಕ್ಕೆ ಆಗಮಿಸಿ ಜನರ ಆಶೀರ್ವಾದ ಪಡೆಯಬೇಕು ಎಂದು ತಿಳಿಸಿದ್ದೇನೆ. ಅವರು ಬರುವುದಾಗಿ ತಿಳಿಸಿದ್ದಾರೆ” ಎಂದರು.
ನೆರೆ ರಾಜ್ಯಗಳ ಕಲಾ ತಂಡಗಳಿಗೂ ಆಹ್ವಾನ
“ತಮಿಳುನಾಡು, ಕೇರಳ ಸೇರಿದಂತೆ ನೆರೆ ರಾಜ್ಯಗಳಿಗೂ ತಮ್ಮದೇ ಆದ ಕಲೆ, ಸಂಸ್ಕೃತಿ ಹಾಗೂ ಪರಂಪರೆ ಇದೆ. ಅವುಗಳನ್ನೂ ದಸರಾ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶವಿದೆ. ನಾವು ಅವರಿಂದ ಕಲಿಯಬೇಕು. ಅವರು ನಮ್ಮಿಂದ ಕಲಿಯಬೇಕು. ನಮ್ಮ ಕಲೆಗಳು ವಿದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಹಾಗಿರುವಾಗ ನೆರೆ ರಾಜ್ಯಗಳ ಕಲಾ ತಂಡಗಳು ಇಲ್ಲಿಗೆ ಬಂದು ಪ್ರದರ್ಶನ ನೀಡುವುದರಲ್ಲಿ ತಪ್ಪೇನಿದೆ. ನೆರೆ ರಾಜ್ಯಗಳ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸೂಚಿಸಲಾಗಿದೆ. ಪ್ರತಿವರ್ಷ ದಸರಾದಲ್ಲಿ ಹೊಸತನ ಕಾಣಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ” ಎಂದು ಹೇಳಿದರು.
ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ
“ಕೆಲವು ಕೇಂದ್ರ ನಾಯಕರಿಗೂ ದಸರಾಕ್ಕೆ ಆಹ್ವಾನ ನೀಡುವ ಕುರಿತು ಚರ್ಚೆ ನಡೆದಿದೆ. ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅವಕಾಶ ಸಿಕ್ಕರೆ ಮೈಸೂರು ದಸರಾಕ್ಕೆ ಆಗಮಿಸುವಂತೆ ಮನವಿ ಮಾಡಿದ್ದೇನೆ. ಅವರ ರಾಜ್ಯಗಳಲ್ಲೂ ದಸರಾ ಇರುವುದರಿಂದ ಸಮಯಾವಕಾಶ ಸಿಕ್ಕರೆ ಬರಬೇಕು ಎಂದು ತಿಳಿಸಿದ್ದೇನೆ” ಎಂದರು.
ಎಸ್ಐಆರ್ ಗೊಂದಲ ಸತ್ಯ; ತಪ್ಪಿತಸ್ಥರ ವಿರುದ್ಧ ಕ್ರಮ
ಫಾರಂ 7 ಗೊಂದಲದ ತನಿಖೆಗೆ ಎಸ್ಐಟಿ ರಚಿಸಲಾಗುತ್ತಿದೆಯೇ ಎಂದು ಕೇಳಿದಾಗ, “ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಗೊಂದಲ ಇರುವುದಂತೂ ಸತ್ಯ. ಚುನಾವಣಾ ಆಯೋಗಕ್ಕೆ 25 ಸಾವಿರ ಫಾರಂ 7 ಅರ್ಜಿ ಹಾಕಿದ್ದಾರೋ, 50 ಲಕ್ಷ ಹಾಕಿದ್ದಾರೋ. ಪೂರ್ವಮುದ್ರಿತ ಫಾರಂ–7 ಮೂಲಕ ಮತದಾರರ ಹೆಸರು ಅಳಿಸಲು ಮನವಿ ಮಾಡಿರುವುದಂತೂ ಸತ್ಯವಲ್ಲವೇ? ಅರ್ಜಿ ಕೊಟ್ಟವರಿಗೆ ಈ ವಿಚಾರ ಗೊತ್ತಿಲ್ಲ. ಇದಕ್ಕೆ ದಾಖಲೆಗಳಿವೆ. ವಿಚಾರದಲ್ಲಿ ಬಂದಿರುವ ದೂರುಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಫಾರಂ–7 ಅರ್ಜಿಗಳ ವಿಚಾರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಯಾವುದೇ ಮತದಾರರ ಹೆಸರನ್ನು ತಕ್ಷಣ ಅಳಿಸದೆ, ಪ್ರತಿಯೊಂದು ಅರ್ಜಿಯನ್ನೂ ಪರಿಶೀಲಿಸುವಂತೆ ಎಲ್ಲ ಚುನಾವಣಾಧಿಕಾರಿಗಳಿಗೆ ಸಂದೇಶ ನೀಡಲಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ” ಎಂದರು.
“ಹಳೆಯ ಮತದಾರರ ಪಟ್ಟಿಯನ್ನೂ ಪರಿಶೀಲಿಸಿ, ಎಲ್ಲೆಲ್ಲಿ ತಪ್ಪುಗಳಾಗಿವೆ ಎಂಬುದನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಅಲ್ಪಸಂಖ್ಯಾತರು, ದಲಿತರು, ಪರಿಶಿಷ್ಟ ಜಾತಿ–ಪಂಗಡಗಳು ಹಾಗೂ ಬಡವರು ಸೇರಿದಂತೆ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ನೋಡಿಕೊಳ್ಳಬೇಕು. ಆಯೋಗವು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯನ್ನು ಅಂದರೆ ದುರ್ಬಲ ವ್ಯಕ್ತಿಯನ್ನು ಪರಿಗಣಿಸಿ ಮತಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಆಯೋಗ ತಿಳಿಸಿದೆ. ಅರ್ಹರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸವೂ ನಡೆಯಬೇಕು” ಎಂದು ಮನವಿ ಮಾಡಿದರು.
‘ಅರ್ಜಿಗಳನ್ನು ಹಿಂಪಡೆಯಿರಿ’ ಎಂದವರೂ ಇದ್ದಾರೆ
ರಾಜ್ಯ ಸರ್ಕಾರ ಈ ವಿಚಾರವಾಗಿ ತನಿಖೆ ನಡೆಸುವುದೇ ಎಂದು ಕೇಳಿದಾಗ, “ನೋಡೋಣ, ಯಾವ ವಿಚಾರ ಹೊರಬರಲಿದೆ. ಕೆಲವರು ನಾನು ಇಲ್ಲೇ ಇದ್ದರೂ ಸತ್ತಿದ್ದೇನೆ ಎಂದು ಅರ್ಜಿ ನೀಡಿದ್ದಾರೆ. ಮನೆಯಲ್ಲಿ ಇದ್ದರೂ ಹೆಸರು ತೆಗೆದುಹಾಕಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ ಎಂದು ಸ್ಥಳೀಯ ಮತದಾರರು ದೂರು ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಕೆಲವರು ತಾವು ಸಲ್ಲಿಸಿದ ಅರ್ಜಿಗಳನ್ನು ಹಿಂಪಡೆಯಲು ಮನವಿ ಮಾಡಿದ್ದಾರೆ. ಇನ್ನೂ ಕೆಲವರು ತಪ್ಪನ್ನು ಒಪ್ಪಿಕೊಂಡಿದ್ದಾರೆ’’ ಎಂದು ಹೇಳಿದರು.
ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕು ಎಂಬ ಬಿಜೆಪಿ ನಾಯಕರ ಆಗ್ರಹದ ಬಗ್ಗೆ ಕೇಳಿದಾಗ, “ತಾವು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಲು ಹೋಗಿರಲಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಂವಿಧಾನಾತ್ಮಕ ಸಂಸ್ಥೆಯ ಮುಂದೆ ಮನವಿ ಸಲ್ಲಿಸಲು ಹೋಗಿದ್ದೆ. ಚುನಾವಣಾ ಆಯೋಗಕ್ಕೆ ಗೌರವ ನೀಡುವುದು ತಮ್ಮ ಕರ್ತತ್ಯ. ನಾನು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಿ. ಕಾನೂನಿಗೆ ಗೌರವ ಕೊಡಬೇಕು. ನಾನೇನಾದರೂ ತಪ್ಪು ಮಾಡಿದರೆ ಕ್ರಮ ಕೈಗೊಳ್ಳುವುದರಲ್ಲಿ ತಪ್ಪಿಲ್ಲ” ಎಂದರು.
ಬರ ಪರಿಹಾರ: ಆತುರ ಬೇಡ, ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ
ಬರ ಪರಿಶಈಲನೆಗೆ ಕೇಂದ್ರ ಸರ್ಕಾರದ ತಂಡ ಆಗಮಿಸಿರುವ ಬಗ್ಗೆ ಕೇಳಿದಾಗ, “ಕೇಂದ್ರದಿಂದ ಆಗಮಿಸಿರುವ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಪ್ರದೇಶಗಳ ಪರಿಶೀಲನೆಗೆ ಮನವಿ ಮಾಡಲಾಗಿದೆ. ಈಗಾಗಲೇ 217 ತಾಲೂಕುಗಳನ್ನು ಬರಪೀಡಿತವಾಗಿದೆ. ಮೊದಲ ಹಂತದಲ್ಲಿ ಕೆಲವು ಪ್ರದೇಶಗಳ ಪರಿಶೀಲನೆಗೆ ಬಂದಿರುವ ತಂಡವು ಎರಡು–ಮೂರು ಹಂತಗಳಲ್ಲಿ ಹೆಚ್ಚಿನ ಪ್ರದೇಶಗಳನ್ನೂ ಒಳಗೊಳ್ಳುವಂತೆ ಮನವಿ ಮಾಡಿದ್ದೇವೆ” ಎಂದರು.
“ಕಳೆದ ಹಲವು ದಶಕಗಳ ಮಳೆ ಹಾಗೂ ಬರ ಪರಿಸ್ಥಿತಿಯ ದಾಖಲೆಗಳನ್ನು ತಂಡದ ಮುಂದೆ ಮಂಡಿಸಲಾಗಿದೆ. ಹಿಂದಿನ 50 ವರ್ಷಗಳ ದಾಖಲೆಗಳನ್ನೂ ಪರಿಶೀಲಿಸಿ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ. ಮೂರು ತಂಡಗಳು ವಿವಿಧ ಪ್ರದೇಶಗಳಿಗೆ ತೆರಳಲಿದ್ದು, ಅವರಿಗೆ ಅಗತ್ಯ ಮಾಹಿತಿ ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ತೋರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಹೇಳಿದರು.
ಕಳೆದ ಎರಡು ಬಾರಿ ರಾಜ್ಯ ಕೇಳಿದಷ್ಟು ಪರಿಹಾರ ಬಂದಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ನ್ಯಾಯಾಲಯದ ಮೊರೆ ಹೋಗಲಾಗುವುದೇ ಎಂದು ಕೇಳಿದಾಗ, “ಈಗಲೇ ಆತುರಪಡುವುದಿಲ್ಲ. ಮೊದಲು ಕೇಂದ್ರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾಸ್ತವ ಪರಿಸ್ಥಿತಿಯನ್ನು ವಿವರಿಸೋಣ. ಬೇರೆ ರೀತಿಯಲ್ಲಿ ತರಾತುರಿಯಲ್ಲಿ ಮಾಡುವ ಅಗತ್ಯವಿಲ್ಲ” ಎಂದರು.
ಕಾನೂನು ಎಲ್ಲರಿಗೂ ಉತ್ತರ ಕೊಡುತ್ತದೆ
ಕಾಫಿ–ಟೀಗೆ ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪದ ಕುರಿತು ಕೇಳಿದಾಗ ಮುಖ್ಯಮಂತ್ರಿ, “ಬಹಳ ಸಂತೋಷ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಧನುರ್ ಲಗ್ನದಲ್ಲಿ ದಸರಾಕ್ಕೆ ಗವಿಮಠ ಶ್ರೀ ಚಾಲನೆ: ಅ.11ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ-2026ಕ್ಕೆ ಅಧಿಕೃತ ಚಾಲನೆ
ನೈಸ್ ಯೋಜನೆ ವ್ಯಾಪ್ತಿಯಲ್ಲಿ 1 ಎಕರೆ ಜಾಗ ಖರೀದಿ ಮಾಡಿದ್ದರೂ ನೇಣು ಹಾಕಿಕೊಳ್ಳುವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈಗ ಅದರ ಬಗ್ಗೆ ಚರ್ಚೆ ಬೇಡ. ರಾಜ್ಯ ಹಾಗೂ ದೇಶದಲ್ಲಿ ಕಾನೂನುಗಳಿವೆ. ಕಾನೂನು ಎಲ್ಲರಿಗೂ ಉತ್ತರ ಕೊಡುತ್ತದೆ” ಎಂದು ಹೇಳಿದರು.