ಧನುರ್ ಲಗ್ನದಲ್ಲಿ ದಸರಾಕ್ಕೆ ಗವಿಮಠ ಶ್ರೀ ಚಾಲನೆ: ಅ.11ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ-2026ಕ್ಕೆ ಅಧಿಕೃತ ಚಾಲನೆ
ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಧಾರ್ಮಿಕ ವೈಭವ, ರಾಜಪರಂಪರೆ, ಸಾಹಿತ್ಯ, ಕಲೆ, ಕ್ರೀಡೆ, ಕೃಷಿ, ಗ್ರಾಮೀಣ ಸಂಸ್ಕೃತಿ, ಯುವಜನತೆ ಹಾಗೂ ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅ.11ರಿಂದ ಆರಂಭವಾಗುವ ದಸರಾ ಸಂಭ್ರಮ ಅ.21ರ ವಿಜಯದಶಮಿಯ ಮಹಾ ಮೆರವಣಿಗೆ ಹಾಗೂ ಪಂಜಿನ ಕವಾಯತಿನೊಂದಿಗೆ ವೈಭವದ ಪರಾಕಾಷ್ಠೆ ತಲುಪಲಿದೆ.
-
ಕೆ.ಜೆ.ಲೋಕೇಶ್ ಬಾಬು
ಅ.21ರಂದು ಶುಭ ಮೀನ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ
ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಧಾರ್ಮಿಕ ವೈಭವ, ರಾಜಪರಂಪರೆ, ಸಾಹಿತ್ಯ, ಕಲೆ, ಕ್ರೀಡೆ, ಕೃಷಿ, ಗ್ರಾಮೀಣ ಸಂಸ್ಕೃತಿ, ಯುವಜನತೆ ಹಾಗೂ ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅ.11ರಿಂದ ಆರಂಭವಾಗುವ ದಸರಾ ಸಂಭ್ರಮ ಅ.21ರ ವಿಜಯದಶಮಿಯ ಮಹಾ ಮೆರವಣಿಗೆ ಹಾಗೂ ಪಂಜಿನ ಕವಾಯತಿನೊಂದಿಗೆ ವೈಭವದ ಪರಾಕಾಷ್ಠೆ ತಲುಪಲಿದೆ.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಂಗಳಾರಂಭ: ಅ.11ರಂದು ಬೆಳಗ್ಗೆ 11.50ರಿಂದ 12.13 ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 2026ರ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಗಣ್ಯರು ಭಾಗವಹಿಸಲಿದ್ದಾರೆ.
ಹಬ್ಬದ ಹಲವು ಮುಖಗಳು: ದಸರಾ ಉದ್ಘಾಟನೆಯ ದಿನವೇ ಮೈಸೂರಿನಲ್ಲಿ ಕಾರ್ಯಕ್ರಮಗಳ ಸರಮಾಲೆ ಆರಂಭವಾಗಲಿದೆ. ಅ.11ರಂದು ಬೆಳಗ್ಗೆ 11.30ಕ್ಕೆ ಫಲಪುಷ್ಪ ಪ್ರದರ್ಶನ ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್), 12.30ಕ್ಕೆ ಪುಷ್ಪ ಮೇಳ ಮತ್ತು ಸಸ್ಯ ತೋಟ ಉದ್ಘಾಟನೆ ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟ, 4ಕ್ಕೆ ಆಹಾರ ಮೇಳ ಮಹಾರಾಜ ಕಾಲೇಜು ಮೈದಾನ, 4ಕ್ಕೆ ದಸರಾ ಕುಸ್ತಿ ಪಂದ್ಯಾವಳಿ ವಿವಿಧೋದ್ದೇಶ ಕ್ರೀಡಾಂಗಣ, 4ಕ್ಕೆ ಮಾರಾಟ ಮೇಳ ಭಾರತ್ ಸ್ಕೌಟ್ಸ್ ಗೈಡ್ಸ್ ಮೈದಾನ, 4.30ಕ್ಕೆ ಲಲಿತಕಲೆ ಮತ್ತು ಕರಕುಶಲ ಶಿಬಿರ ಕಾವಾ ಆವರಣ, 4.30ಕ್ಕೆ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಚಾಮುಂಡಿ ವಿಹಾರ ಕ್ರೀಡಾಂಗಣ, 5ಕ್ಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಅರಮನೆ ವೇದಿಕೆ, 7ಕ್ಕೆ ವಸ್ತು ಪ್ರದರ್ಶನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ನಡೆಯಲಿದೆ.
ಇದನ್ನೂ ಓದಿ: Mysuru Dasara 2026: ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ
ರಾತ್ರಿ 10 ಗಂಟೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ನಡೆಯಲಿದೆ. ಅ.14ರಂದು ಬೆಳಗ್ಗೆ 10ಕ್ಕೆ ಯೋಗ ದಸರಾ ಉದ್ಘಾಟನೆ, 10.30ಕ್ಕೆ ಯುವ ಕವಿಗೋಷ್ಠಿ, 11ಕ್ಕೆ ಮಕ್ಕಳ ದಸರಾ ಉದ್ಘಾಟನೆ, ಸಂಜೆ 6ಕ್ಕೆ ಯುವ ದಸರಾ, 7ಕ್ಕೆ ಕ್ಲಾಸಿಕಲ್ ಫ್ಯಾಷನ್ - ಫ್ಯಾಷನ್ ಆಕ್ಟ್ ಅರಮನೆ ವೇದಿಕೆಯಲ್ಲಿ ನಡೆಯಲಿದೆ. ಅ.15, 16, 17, 18, 19ರಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ವಿಜಯದಶಮಿ ವೈಭವ: 21ರ ಬುಧವಾರ ಮಧ್ಯಾಹ್ನ 1.36ರಿಂದ 1.56ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಆಯುಧ ಪೂಜೆ ನಡೆಯಲಿದೆ. ಸಂಜೆ 4.10ರಿಂದ 4.35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಒಳಾವರಣದಲ್ಲಿ ವಿಜಯ ದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಮೈಸೂರು ರಾಜವಂಶದ ಪ್ರತಿನಿಧಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ರಾಜ್ಯಪಾಲರಿಗೆ ಗೌರವ ವಂದನೆ
ವಿಜಯದಶಮಿ ದಿನದ ರಾತ್ರಿ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಕವಾಯತನ್ನು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಸಿಎಂ ಡಿಕೆಶಿ, ಡಿಸಿಎಂ ಪರಮೇಶ್ವರ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ.