Pratap Simha: ರಾಜ್ಯ ರಾಜಕಾರಣಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಎಂಟ್ರಿ; ಯಾವ ಕ್ಷೇತ್ರದಿಂದ ಸ್ಪರ್ಧೆ?
Karnataka politics: ಕೆಲ ತಿಂಗಳ ಹಿಂದೆಯಷ್ಟೇ ಸ್ಥಳೀಯ ಪತ್ರಿಕೆಗೆ ಸಂದರ್ಶನ ನೀಡಿದ್ದ ಪ್ರತಾಪ್ ಸಿಂಹ ಅವರು ಮೈಸೂರು ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರದಿಂದಲೇ ರಾಜ್ಯ ರಾಜಕಾರಣ ಆರಂಭಿಸುತ್ತೇನೆ ಎಂದು ಹೇಳಿದ್ದರು. ಆದರೆ ಯಾವ ಕ್ಷೇತ್ರ ಎಂಬ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಆ ಕುತೂಹಲಕ್ಕೆ ಪ್ರತಾಪ್ ಸಿಂಹ ತೆರೆ ಎಳೆದಿದ್ದಾರೆ.
ಮೈಸೂರಿನಲ್ಲಿ ಪ್ರತಾಪ್ ಸಿಂಹ ಸ್ನೇಹ ಬಳಗದ ಕ್ಯಾಲೆಂಡರ್ ಅನ್ನು ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು. -
ಮೈಸೂರು: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ತಮಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವ ಒಲವಿದೆ ಎಂಬ ಕುರಿತೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅವರ ಮುಂದಿನ ರಾಜಕೀಯ ಹೆಜ್ಜೆ ಕುರಿತ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಪ್ರತಾಪ್ ಸಿಂಹ ಸ್ನೇಹ ಬಳಗದ ವತಿಯಿಂದ ಚಾಮರಾಜ ವಿಧಾನಸಭಾ ಕ್ಷೇತ್ರದ ಗ್ರೀನ್ ಹೆರಿಟೇಜ್ ಹೋಟೆಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ ಅವರು, ಸ್ನೇಹ ಬಳಗದ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಈ ವೇಳೆ ಬಳ್ಳಾರಿ ಗಲಭೆ, ಕೋಗಿಲು ಒತ್ತುವರಿ ತೆರವು ಹಾಗೂ ತಮ್ಮ ರಾಜಕೀಯದ ಮುಂದಿನ ನಡೆ ಬಗ್ಗೆ ಮಾತನಾಡಿದ್ದಾರೆ.
ಯಾವ ಕ್ಷೇತ್ರದಿಂದ ಸ್ಪರ್ಧೆ?
ರಾಜ್ಯ ರಾಜಕಾರಣಕ್ಕೆ ಯಾವಾಗ ಬರ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಈ ಹಿಂದೆಯೇ ಹಲವು ಬಾರಿ ಹೇಳಿದ್ದೇನೆ. ಕೇಂದ್ರಕ್ಕೆ ಹೋಗಿಲ್ಲ ಎಂದರೆ, ರಾಜ್ಯದಲ್ಲಿ ಇರಲೇಬೇಕಲ್ಲವೇ? ಎಂದು ತಿಳಿಸಿದ್ದಾರೆ. ಇನ್ನು ಇಲ್ಲಿರುವ ನಮ್ಮ ಹಿತೈಷಿಗಳು ಎಲ್ಲರೂ ಚಾಮರಾಜ ಕ್ಷೇತ್ರದವರೇ ಆಗಿದ್ದಾರೆ. ಸದ್ಯ ಇಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ಶಂಕರಲಿಂಗೇಗೌಡ ಅವರಂತಹ ಜನಪರ ವ್ಯಕ್ತಿ, ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ನಾಯಕನನ್ನು ಸತತವಾಗಿ 4 ಸಾರಿ ಗೆಲ್ಲಿಸಿರುವ ಕ್ಷೇತ್ರ (ಚಾಮರಾಜ) ಇದಾಗಿದೆ. ಒಳ್ಳೆಯತನಕ್ಕೆ ಬೆಲೆ ಕೊಡುವ, ಮಣೆ ಹಾಕುವ ಕ್ಷೇತ್ರ ಇದು. ಹೀಗಾಗಿ ಸಹಜವಾಗಿಯೇ ಈ ಬಗ್ಗೆ ಯೋಜನೆ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು, ಹಿತೈಷಿಗಳ ಅಪೇಕ್ಷೆಯೂ ಇದೇ ಆಗಿದೆ. ಎಲ್ಲಾ ಸಾಧಕ, ಬಾಧಕಗಳನ್ನು ಯೋಚನೆ ಮಾಡಿ, ನಾನು ಕೂಡ ಚುನಾವಣೆಗೆ ಸಿದ್ಧತೆ ಆರಂಭಿಸುತ್ತೇನೆ ಎಂದು ತಿಳಿಸಿದ್ದಾರೆ.
ಭರತ್ ರೆಡ್ಡಿಗೆ ದುಡ್ಡಿನ ಮದ ಏರಿದೆ
ಬಳ್ಳಾರಿ ಘಟನೆ ಬಗ್ಗೆ ಮಾತನಾಡಿರುವ ಪ್ರತಾಪ್ ಸಿಂಹ, ಜನಾರ್ದನ ರೆಡ್ಡಿ ಅವರನ್ನು ಭರತ್ ರೆಡ್ಡಿ ಏಕವಚನದಲ್ಲಿ ನಿಂದಿಸುತ್ತಾನೆ. ಮೊದಲ ಬಾರಿ ಶಾಸಕ ಆಗಿದ್ದಾನೆ, ವಯಸ್ಸು ಆ ರೀತಿ ಆಡಿಸುತ್ತಿದೆ, ನನಗೂ ಗನ್ ಮ್ಯಾನ್ ಇದ್ದಾರೆ. ಅವರ ಹತ್ತಿರ ಕೂಡ ಗನ್ ಇದೆ. ಯಾವಾಗ ಯಾವ ರೀತಿ ಬಳಸಬೇಕು ಎಂಬುದು ಗೊತ್ತಿರಬೇಕು, ಜನರ ಮೇಲೆ ಶೂಟ್ ಮಾಡಲು ಗನ್ ಬಳಸುತ್ತಾರಾ? ಭರತ್ ರೆಡ್ಡಿಗೆ ದುಡ್ಡಿನ ಮದ, ಭರತ್ ರೆಡ್ಡಿ ಗನ್ ಮ್ಯಾನ್ ಗುಂಡು ಹಾರಿಸುತ್ತಾರೆ, ಒಬ್ಬ ಕಾರ್ಯಕರ್ತ ಸಾಯುತ್ತಾರೆ, ನಿನ್ನೆ ಮೊನ್ನೆ ಬಂದ ಶಾಸಕ ಈ ರೀತಿ ಮಾಡುತ್ತಾರೆ ಅಂದ್ರೆ ಇದು ಸಿದ್ದರಾಮಯ್ಯರ ತಪ್ಪು, ಸರ್ಕಾರದ ತಪ್ಪು ಎಂದು ಕಿಡಿಕಾರಿದರು.
ಅತಿಕ್ರಮಣ ಮಾಡಿದವರಿಗೆ ಮನೆ ಕೊಡ್ತಾರೆ ಅಂದ್ರೆ ಏನರ್ಥ?
ಕೋಗಿಲು ಬಡಾವಣೆ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಸರ್ಕಾರದ ಜಾಗದಲ್ಲಿ ಅತಿಕ್ರಮಣ ಮಾಡಿ ಮನೆ ಕಟ್ಟಿದ್ದರು. ಅದನ್ನು ತೆರವು ಗೊಳಿಸಲಾಯಿತು, ಆದರೆ ಕೆ.ಸಿ. ವೇಣುಗೋಪಾಲ್, ಸಿಎಂ ಪಿಣರಾಯಿ ವಿಜಯನ್ ಹೇಳಿದ ಕೂಡಲೇ ಅವರಿಗೆ ಮನೆ ಕೊಡ್ತಾರೆ ಅಂದ್ರೆ ಏನರ್ಥ? ನಮ್ಮ ಜಾಗ ಅವರಿಗೇಕೆ ಕೊಡಬೇಕು? ಇದು ರಾಜಕೀಯ ಅಲ್ಲದೆ ಮತ್ತೇನು? ಅವರಿಗೆ ಮನೆ ಕೊಡೋಕೆ ಯಾವ ಕಾನೂನು ಹೇಳುತ್ತೆ? ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾರೆ ಎಂದು ಕಿಡಿಕಾರಿದರು.
ಕರ್ನಾಟಕದ ದೀರ್ಘಾವಧಿ ಸಿಎಂ ದಾಖಲೆ; ಜನರ ಆಶೀರ್ವಾದವೇ ಕಾರಣ ಎಂದ ಸಿದ್ದರಾಮಯ್ಯ
ಇನ್ನು ವರುಣಾ, ಮೈಸೂರು ಜನರಿಗೆ ಸಿದ್ದರಾಮಯ್ಯ ಒಂದೇ ಒಂದು ಮನೆ ಕೊಟ್ಟಿಲ್ಲ, ಕಾನೂನು ಅರಿವಿಟ್ಟುಕೊಂಡು ಸಿದ್ದರಾಮಯ್ಯ ಕೆಲಸ ಮಾಡಬೇಕು. ಅಲ್ಲಿ ವಾಸ ಮಾಡುವ ಜನರು 25 ವರ್ಷದಿಂದ ಇದ್ದೀವಿ ಎನ್ನುತ್ತಾರೆ. ಇಂತವರಿಗೆ ಸಿಎಂ ಮನೆ ಕೊಡಲು ಹೊರಟಿದ್ದಾರೆ. ಕಾನೂನು ಅರಿವು ಸಿದ್ದರಾಮಯ್ಯಗೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.