ಮೈಸೂರು: ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವ 18ನೇ ಆವೃತ್ತಿಯ ಈಶ ಗ್ರಾಮೋತ್ಸವ–2026ರ ಕರ್ನಾಟಕ ವಿಭಾಗೀಯ ಪಂದ್ಯಗಳು ಮೈಸೂರಿನ ಜಯಲಕ್ಷ್ಮಿಪುರಂನ ಜಗದೀಶ್ ಪ್ರಸಾದ್ ಆಟದ ಮೈದಾನದಲ್ಲಿ ಅದ್ಧೂರಿಯಾಗಿ ಸಮಾಪ್ತಿಗೊಂಡವು. 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ 20 ಪುರುಷರ ವಾಲಿಬಾಲ್ ಹಾಗೂ 12 ಮಹಿಳೆಯರ ಥ್ರೋಬಾಲ್ ತಂಡಗಳು ಸೆಣಸಾಡಿದವು.
ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ವಾಲಿಬಾಲ್ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆ ಯ ರಾಮಾಪುರದ ಬುದ್ಧ ಸೂಪರ್ ಟೀಂ ವಿಭಾಗೀಯ ಚಾಂಪಿಯನ್ ಪಟ್ಟ ಅಲಂಕರಿಸಿತು. ನಂಜನಗೂಡಿನ ಕಡಕೋಳದ ಚಾಮುಂಡಿ ಬಾಯ್ಸ್ ದ್ವಿತೀಯ, ಚಿಕ್ಕಬಳ್ಳಾಪುರದ ಮಾಸ್ತೇನ ಹಳ್ಳಿಯ ಅಪ್ಪು ಬಾಯ್ಸ್ ತೃತೀಯ ಹಾಗೂ ಕೋಲಾರದ ಮಾರ್ಜೇನಹಳ್ಳಿಯ ಎಂ.ಆರ್.ಜೆ ಬ್ರದರ್ಸ್ ನಾಲ್ಕನೇ ಸ್ಥಾನ ಪಡೆದವು.
ಮಹಿಳೆಯರ ಥ್ರೋಬಾಲ್‌ನಲ್ಲಿ ನಂಜನಗೂಡಿನ ಹೆಡತಲೆಯ ಚಾಮುಂಡಿ ಗರ್ಲ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಚಿಕ್ಕಬಳ್ಳಾಪುರದ ಬಲಿಗನಹಳ್ಳಿಯ ಸಿ.ಎಸ್.ಎ ತಂಡ ದ್ವಿತೀಯ, ಶಿವಮೊಗ್ಗದ ಗುಡ್ಡೆಕೊಪ್ಪದ ಕೊಡಚಾದ್ರಿ ತಂಡ ತೃತೀಯ ಹಾಗೂ ಬೆಟ್ಟದಪುರದ ಚಿಕ್ಕನೇರಳೆಯ ಜೈ ಶ್ರೀ ರಾಮ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಪಂದ್ಯಾವಳಿಗೆ ಚಾಲನೆ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಶಾಸಕ ಹರೀಶ್ ಗೌಡ(MLA Harish Gowda), 'ಖೇಲೋ ಇಂಡಿಯಾ'ದ ಕಾರ್ಯನಿರ್ವಾಹಕ ನಿರ್ದೇಶಕಿ ಅಮರ್ ಜ್ಯೋತಿ, ಜಾನಪದ ಗಾಯಕ ಅಮ್ಮಾ ರಾಮಚಂದ್ರ, ಟಿಬೆಟಿಯನ್ ಬೌದ್ಧ ಭಿಕ್ಷು ನವಾಂಗ್ ಲಾಮಾ, ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್ ತೇಜ್‌ಕುಮಾರ್ ಎಂ.ಎಸ್. ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
2004ರಲ್ಲಿ ಆರಂಭವಾದ ಈಶ ಗ್ರಾಮೋತ್ಸವ(Isha Gramotsava)ವು ಗ್ರಾಮೀಣ ಕ್ರೀಡಾ ಪ್ರತಿಭೆ ಗಳನ್ನು ಗುರುತಿಸುವುದು, ಸಾಂಪ್ರದಾಯಿಕ ಕ್ರೀಡೆಗಳಿಗೆ ಉತ್ತೇಜನ ನೀಡುವುದು ಹಾಗೂ ಗ್ರಾಮೀಣ ಸಮುದಾಯಗಳಲ್ಲಿ ಆರೋಗ್ಯ ಮತ್ತು ಬಾಂಧವ್ಯವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಈ ವರ್ಷದ ಆವೃತ್ತಿಯು 10 ರಾಜ್ಯಗಳು ಹಾಗೂ ಪುದುಚೇರಿಗೆ ವಿಸ್ತರಿಸಿದ್ದು, 40 ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿದೆ. ಸುಮಾರು 7 ಸಾವಿರ ತಂಡಗಳ ಮೂಲಕ 15 ಸಾವಿರ ಮಹಿಳಾ ಆಟಗಾರರು ಸೇರಿದಂತೆ 80 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ವೃತ್ತಿಪರ ಆಟಗಾರರನ್ನು ಹೊರಗಿಟ್ಟು ಗ್ರಾಮೀಣ ಪ್ರತಿಭೆಗಳಿಗೆ ಸ್ಪರ್ಧೆಯ ಅವಕಾಶ ಕಲ್ಪಿಸುವ ಈ ಪಂದ್ಯಾವಳಿ, ಕಳೆದ ಎರಡು ದಶಕಗಳಲ್ಲಿ 35 ಸಾವಿರಕ್ಕೂ ಹೆಚ್ಚು ಗ್ರಾಮಗಳ 2.6 ಲಕ್ಷಕ್ಕೂ ಅಧಿಕ ಗ್ರಾಮೀಣ ಆಟಗಾರರನ್ನು ಒಳಗೊಂಡಿರುವ ಮಹತ್ವದ ಕ್ರೀಡಾ ವೇದಿಕೆಯಾಗಿ ಬೆಳೆದಿದೆ.