ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ
ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್ ನಂದಿನಿ ಅವರು 'ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ. ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ' ವಿಷಯದಲ್ಲಿ ನಂದಿನಿ ಮಹಾ ಪ್ರಬಂಧ ಮಂಡಿಸಿದ್ದರು. ಮೈಸೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿದ್ದರು.
ಪತ್ರಕರ್ತೆ ಕೆ.ಎಲ್. ನಂದಿನಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಂದ ಪಿಎಚ್‌ಡಿ ಪ್ರದಾನ. -
ಮೈಸೂರು: ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್ ನಂದಿನಿ (Journalist KL Nandini) ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. 'ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ. ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ' ವಿಷಯದಲ್ಲಿ ನಂದಿನಿ ಮಹಾ ಪ್ರಬಂಧ ಮಂಡಿಸಿದ್ದರು. ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಕೆಯಾಗಿತ್ತು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 106ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಪಿಎಚ್‌ಡಿ ಪದವಿ ಪ್ರದಾನ ಮಾಡಿದ್ದಾರೆ.

ಈ ಬಗ್ಗೆ ಪತ್ರಕರ್ತೆ ಕೆ.ಎಲ್ ನಂದಿನಿ ಪ್ರತಿಕ್ರಿಯಿಸಿ, ಈ ದಿನಕ್ಕೋಸ್ಕರ ಕಾದಿದ್ದೆ. 8 ವರ್ಷದ ಕಠಿಣ ಪರಿಶ್ರಮ, ತ್ಯಾಗಕ್ಕೆ ಈಗ ಯಶಸ್ಸು ಸಿಕ್ಕಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ 106ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಸ್ವೀಕರಿಸಿದ್ದೇನೆ. 'ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಡಾಕ್ಟರ್ ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ' ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮೈಸೂರು ವಿವಿ ಕುಲಪತಿ, ಉಪಕುಲಪತಿ, ರಿಜಿಸ್ಟ್ರಾರ್ ಹಾಗೂ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಮಾರ್ಗದರ್ಶಕರಾದ ಡಾ. ಎನ್ ಮಮತಾ ಮೇಡಂ ಸಮ್ಮುಖದಲ್ಲಿ ಡಾಕ್ಟರೇಟ್ (ಪಿ.ಎಚ್.ಡಿ) ಪದವಿಯನ್ನು ಪಡೆದೆ ಎಂದು ಸಂತಸ ಹಂಚಿಕೊಂಡಿದ್ದಾರೆ.