ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mysuru Dasara vs Mahisha Dasara: ಮಹಿಷಾಸುರ ರಾಕ್ಷಸನೋ, ಬೌದ್ಧ ದೊರೆಯೋ? ದಸರಾ ಸಮೀಪಿಸುತ್ತಿದ್ದಂತೆ ಮತ್ತೆ ಆರಂಭವಾಯ್ತು ಚರ್ಚೆ: ಏನಿದು ವಿವಾದ?

Mahisha Dasara: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಆಚರಿಸಲಾಗುವ ಮಹಿಷ ದಸರಾಕ್ಕೆ ಈ ಬಾರಿ ಪೊಲೀಸರು ನಿಷೇದಾಜ್ಞೆ ಹೇರಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ ಮಹಿಷಾಸುರ ಒಬ್ಬ ದುಷ್ಟ ರಾಕ್ಷಸನಾಗಿದ್ದರೆ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಪ್ರಕಾರ ಆತ ಒಬ್ಬ ಪ್ರಜಾರಕ್ಷಕ ಬೌದ್ಧ ರಾಜನಾಗಿದ್ದ. ಮೈಸೂರು ದಸರಾ ಸಂದರ್ಭದಲ್ಲಿ ಪ್ರತಿ ಬಾರಿ ಚರ್ಚೆಗೆ ಕಾರಣವಾಗುವ ಮಹಿಷ ದಸರಾ ಆಚರಣೆ ಮತ್ತು ಅದರ ಸುತ್ತಲಿನ ವಿವಾದದ ಬಗ್ಗೆ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಮೈಸೂರು, ಅ. 9: ವಿಶ್ವಪ್ರಸಿದ್ದ ಮೈಸೂರು ದಸರಾ ಸಂಭ್ರಮದ ನಡವೆ ಪ್ರತಿವರ್ಷ ಮಹಿಷ ದಸರಾ (Mahisha Dasara) ಆಚರಣೆಯ ಕುರಿತ ವಿವಾದವು ಸದಾ ಚರ್ಚೆಗೆ ಗ್ರಾಸವಾಗುತ್ತದೆ. ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಪ್ರತಿವರ್ಷ ಮೈಸೂರು ದಸರಾವನ್ನು ಆಚರಿಸುವುದು ಪೌರಾಣಿಕ ಹಿನ್ನಲೆಯಾದರೆ, ಇದೇ ವೇಳೆ ಮಹಿಷಾಸುರ ರಾಕ್ಷಸನಲ್ಲ ಅವನೊಬ್ಬ ಬೌದ್ಧ ರಾಜನೆಂದು ಕೆಲ ಸಂಘಟನೆಗಳು ಪ್ರತಿಪಾದಿಸುತ್ತವೆ (Mysuru Dasara vs Mahisha Dasara). ಪ್ರತಿವರ್ಷ ಚರ್ಚೆಗೆ ಕಾರಣವಾಗುವ ಮಹಿಷ ದಸರಾ ಉತ್ಸವದ ಹಿನ್ನಲೆ ಏನು? ಇಲ್ಲಿದೆ ನೋಡಿ ಮಾಹಿತಿ.

ಒಂದೆಡೆ, ಕೆಡಕಿನ ಮೇಲೆ ಒಳಿತಿನ ವಿಜಯವಾಗಿ, ಚಾಮುಂಡೇಶ್ವರಿಯು ಮಹಿಷಾಸುರನೆಂಬ ರಾಕ್ಷಸನನ್ನು ಸಂಹರಿಸಿದ ಸಂಕೇತವಾಗಿ ಶತಮಾನಗಳಿಂದ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಪೌರಾಣಿಕ ಕಥೆಗಳ ಪ್ರಕಾರ, ತನಗೆ ಯಾವುದೇ ಪುರುಷನಿಂದ ಮರಣವಿಲ್ಲ ಎಂಬ ಅಹಂಕಾರದಲ್ಲಿದ್ದ ಮಹಿಷಾಸುರನಿಗೆ ದೇವತೆಗಳ ಶಕ್ತಿಯಾಗಿ ಅವತರಿಸಿದ ಶ್ರೀ ಚಾಮುಂಡೇಶ್ವರಿ ಆತನನ್ನು ಸಂಹರಿಸಿದಳು ಎಂಬುದು ಪ್ರತಿಯೊಬ್ಬ ಮೈಸೂರಿಗರ ನಂಬಿಕೆ.

ಆದರೆ, ಈ ಪೌರಾಣಿಕ ಕಥೆಯನ್ನೇ ನೇರವಾಗಿ ಸವಾಲು ಮಾಡುವ ಪ್ರಗತಿಪರ ಹಾಗೂ ದಲಿತ ಸಂಘಟನೆಗಳು, ಮಹಿಷಾಸುರ ರಾಕ್ಷಸನಲ್ಲ, ಆತ ಈ ನಾಡನ್ನಾಳಿದ ಬಹುಜನರ ಪ್ರಜಾರಕ್ಷಕ ಮಹಾರಾಜ ಎಂಬ ಹೊಸ ವಾದವನ್ನು ಮುನ್ನೆಲೆಗೆ ತಂದಿವೆ. ಬೌದ್ಧ ಸಂಸ್ಕೃತಿಯ ಇತಿಹಾಸವನ್ನು ಎತ್ತಿಹಿಡಿಯುವ ಇವರ ಪ್ರಕಾರ, ಸಾಮ್ರಾಟ್ ಅಶೋಕನ ಕಾಲದಲ್ಲಿ ಮಹಿಷ ಮಂಡಲ ಎಂದು ಕರೆಯಲ್ಪಡುತ್ತಿದ್ದ ಇಂದಿನ ಮೈಸೂರನ್ನು ಆಳಿದವನೇ ಈ ಮಹಿಷ. ಮೂಲ ನಿವಾಸಿಗಳ ಪರವಾಗಿ ನಿಂತ ಆಡಳಿತಗಾರನನ್ನು ವೈದಿಕ ಕಥೆಗಳಲ್ಲಿ ರಾಕ್ಷಸನನ್ನಾಗಿ ಬಿಂಬಿಸಲಾಗಿದೆ ಎಂಬುದು ಇವರ ಆಕ್ರೋಶ.

ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ

ಈ ವೈಚಾರಿಕ ಸಂಘರ್ಷವು ಪ್ರತಿ ಬಾರಿ ದಸರಾ ಸಂದರ್ಭದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ರಾದ್ಧಾಂತಕ್ಕೇ ದಾರಿ ಮಾಡಿಕೊಡುತ್ತದೆ. ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಪ್ರಗತಿಪರರು ಮುಂದಾದರೆ, ನಾಡದೇವತೆಗೆ ಅಪಮಾನ ಮಾಡಲು ಬಿಡುವುದಿಲ್ಲ ಎಂದು ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಧುಮುಕುತ್ತವೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ಯ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಅಶೋಕ ಚಕ್ರವರ್ತಿಯ ಕಾಲದಲ್ಲಿ ಅಂದರೆ ಕ್ರಿ.ಪೂ. 245ರಲ್ಲಿ ಬೌದ್ಧ ಧರ್ಮದ ಉಲ್ಲೇಖದಲ್ಲಿ ಮಹಿಷ ಮಂಡಲದ ಪ್ರಸ್ತಾವವೂ ಇತಿಹಾಸದಲ್ಲಿದೆ. ಮಹಿಷನೆಂಬ ದೊರೆ ಆಳಿದ್ದರಿಂದ ಈ ಪ್ರದೇಶಕ್ಕೆ ಮಹಿಷೂರು ಎಂಬ ಹೆಸರು ಬಂತು. ಮಹಿಷಾಸುರ ರಕ್ಕಸನಲ್ಲ, ಆತ ಬಹುಜನ ಸಮುದಾಯದ ಬುದ್ಧನ ಅನುಯಾಯಿಯಾಗಿದ್ದ ಕರುಣಾಮಯಿ ರಾಜ. ಆರ್ಯ ಮತ್ತು ದ್ರಾವಿಡರ ಸಂಘರ್ಷದಲ್ಲಿ ಆತನನ್ನು ರಾಕ್ಷಸನನ್ನಾಗಿ ಬಿಂಬಿಸಿ ಹತ್ಯೆ ಮಾಡಲಾಯಿತು ಎಂಬುದು ಇವರ ವಾದ. 2015ರಿಂದ ಸಂಶೋಧಕರು ಹಾಗೂ ದಲಿತ ಸಂಘಟನೆಗಳು ಚಾಮುಂಡಿ ಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಮಹಿಷ ಉತ್ಸವ ಅಥವಾ ಮಹಿಷ ದಸರಾ ಆಚರಿಸುತ್ತಾ ಬಂದಿವೆ. ಆದರೆ ಈ ಬಾರಿ ಈ ಉತ್ಸವ ಆಚರಿಸದಂತೆ ಮೈಸೂರು ಪೊಲೀಸರು ನಿಷೇದಾಜ್ಞೆ ಹೇರಿದ್ದಾರೆ.

ಮೈಸೂರು ದಸರಾಗೆ ಈ ಬಾರಿ ಮೆರುಗು ತುಂಬಲಿದ್ದಾರೆ 30ಕ್ಕೂ ಹೆಚ್ಚು ಸ್ಯಾಂಡಲ್‌ವುಡ್‌ ತಾರೆಯರು

ಪ್ರತಿ ವರ್ಷ ಈ ಎರಡು ಬಣಗಳ ನಡುವೆ ಸಂಘರ್ಷ ಏರ್ಪಡುವ ವಾತಾವರಣ ನಿರ್ಮಾಣವಾಗುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ನಗರ ಪೊಲೀಸ್ ಇಲಾಖೆಯು ಚಾಮುಂಡಿ ಬೆಟ್ಟದ ಮಹಿಷಾಸುರ ವೃತ್ತದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಿರ್ಬಂಧ ವಿಧಿಸುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author