Mysuru Dasara 2026: ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ: ಸಿಎಂ ಡಿಕೆಶಿ ಘೋಷಣೆ
ಸಮಾಜಮುಖಿ ಕಾಯಕದಿಂದ ಖ್ಯಾತಿಯಾಗಿರುವ ಕೊಪ್ಪಳ ಗವಿಮಠದ ಶ್ರೀಗಳಿಗೆ ದಸರಾ ಉದ್ಘಾಟನೆ ಮಾಡುವ ಗೌರವ ಒಲಿದಿದೆ. ಅಕ್ಟೋಬರ್ 11ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಕ್ಟೋಬರ್ 21ರ ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
-
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು (Mysuru Dasara 2026) ಈ ಬಾರಿ ಕೊಪ್ಪಳದ ಶ್ರೀ ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ (Abhinava Gavisiddeshwara Swamiji ) ಅವರು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ನಡೆದ ಬರಗಾಲದ ಚರ್ಚೆ ಸಂದರ್ಭದಲ್ಲಿ ಸಿಎಂ ಘೋಷಿಸಿದ್ದಾರೆ.
ಈ ಬಾರಿಯ ನಾಡ ಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ದಸರಾ ಉದ್ಘಾಟನೆ ಮಾಡಬೇಕು ಎಂದು ಶ್ರೀಗಳಿಗೆ ಆಹ್ವಾನ ಪತ್ರ ಕಳುಹಿಸಿದ್ದೇನೆ. ಇಂದು ಬೆಳಗ್ಗೆ ಅವರ ಜತೆ ದೂರವಾಣಿ ಮೂಲಕವೂ ಮಾತನಾಡಿದ್ದೇನೆ. ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ತಿಂಗಳು ನಾಡಹಬ್ಬ ದಸರಾ ಬರುತ್ತಿದೆ. ಈ ವರ್ಷದ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಬರಬೇಕು ಎಂದು ಶಾಸಕರಿಗೆ ಸಿಎಂ ತಿಳಿಸಿದ್ದಾರೆ.
ಅಕ್ಟೋಬರ್ 11ಕ್ಕೆ ದಸರಾ ಉದ್ಘಾಟನೆ
ಅಕ್ಟೋಬರ್ 11ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಕ್ಟೋಬರ್ 21ರ ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಈ ಮಹೋತ್ಸವದ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಸೇರಿ ನಾಡಿನ ಹಲವು ಗಣ್ಯರ ಹೆಸರುಗಳು ಪ್ರಸ್ತಾಪ ಆಗಿದ್ದವು. ಸಮಾಜಮುಖಿ ಕಾಯಕದಿಂದ ಖ್ಯಾತಿಯಾಗಿರುವ ಕೊಪ್ಪಳ ಗವಿಮಠದ ಶ್ರೀಗಳಿಗೆ ಈ ಗೌರವ ಒಲಿದಿದೆ.
ತ್ರಿವಿಧ ದಾಸೋಹಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಮಠದ 18ನೇ ಪೀಠಾಧಿಪತಿಗಳಾಗಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ, ಸಮಾಜಮುಖಿ ಕಾಯಕಗಳ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದಾರೆ. ಗವಿಮಠದಲ್ಲಿ ಸಾವಿರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಮತ್ತು ನಿರಂತರ ದಾಸೋಹವನ್ನು ಕಲ್ಪಿಸಿಕೊಟ್ಟಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಕೆರೆಗಳ ಹೂಳೆತ್ತುವುದು, ‘ಹಿರೇಹಳ್ಳ ಪುನಶ್ಚೇತನ’ ಯೋಜನೆ ಸೇರಿ ಹಲವು ನದಿ-ತೊರೆಗಳ ಜಲಮೂಲಗಳನ್ನು ಸಂರಕ್ಷಿಸಿ ಲಕ್ಷಾಂತರ ಜನರಿಗೆ ಆಸರೆಯಾಗುವ ಮೂಲಕ ಇವರು ನಾಡಿನಲ್ಲಿ ‘ಜಲಋಷಿ’ ಎಂದೇ ಖ್ಯಾತಿ ಗಳಿಸಿದ್ದಾರೆ. ಇನ್ನು ಪ್ರತಿವರ್ಷ ಜರುಗುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಶಿಸ್ತುಬದ್ಧವಾಗಿ, ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ಸೌಹಾರ್ದತೆಯ ಪ್ರತೀಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.