ಮೈಸೂರು, ಡಿ.26: ಮೈಸೂರು ಅರಮನೆ (Mysuru Palace) ಮುಂಭಾಗ ನಿನ್ನೆ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡ (Mysuru Blast Case) ಪ್ರಕರಣದಲ್ಲಿ ಇದೀಗ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ, NIA) ಎಂಟ್ರಿ ನೀಡಿದೆ ಎಂದು ತಿಳಿದುಬಂದಿದೆ. ನಿನ್ನೆ ನಡೆದ ಘಟನೆಯಲ್ಲಿ ಬಲೂನ್ ವ್ಯಾಪಾರಿ ಸಲೀಂ ಮೃತಪಟ್ಟಿದ್ದು, ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಪೋಟ (Explosion) ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಎನ್‌ಐಎ ವಿವರ ಕೇಳಿದೆ ಎಂದು ತಿಳಿದುಬಂದಿದೆ.
ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದ ಬಗ್ಗೆ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ. ಎಷ್ಟು ದಿನದಿಂದ ಸಲೀಂ ಬಲೂನ್ ಮಾರಾಟ ಮಾಡುತ್ತಿದ್ದ? ಅರಮನೆ ಮುಂಭಾಗಕ್ಕೆ ಸಲೀಂ ಬಂದ ಕೆಲ ಕ್ಷಣಗಳಲ್ಲೇ ಗ್ಯಾಸ್ ಸ್ಪೋಟಗೊಂಡಿದ್ದು ಹೇಗೆ? ಸ್ಪೋಟ ಆಕಸ್ಮಿಕವಾ ಅಥವಾ ಉದ್ದೇಶ ಪೂರ್ವಕವಾ? ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಸ ವರ್ಷಾಚರಣೆ ಸಮೀಪವಿರುವಾಗ ಸ್ಪೋಟ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ಬಲೂನ್ ಮಾರುತ್ತಿದ್ದ ಸಲೀಂ ಲಾಡ್ಜ್‌ನಲ್ಲಿ ವಾಸವಾಗಿದ್ದನಂತೆ. ಈತನ ಮೇಲೆ ಅನುಮಾನದ ಮುಳ್ಳು ತಿರುಗಿದೆ. ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದಿದ್ದ ಸಲೀಂ, ಕಳೆದ 15 ದಿನಗಳಿಂದ ಮೈಸೂರಿನ ಲಷ್ಕರ್ ಮೊಹಲ್ಲಾದ ಖಾಸಗಿ ಲಾಡ್ಜ್‌ನಲ್ಲಿ ವಾಸವಿದ್ದ. ಬಲೂನ್ ಮಾರಾಟ ಮಾಡ್ತಿದ್ದ ಸಲೀಂ ನಿತ್ಯ ಮೈಸೂರು ಅರಮನೆ , ದೇವರಾಜ ಅರಸು ರಸ್ತೆ, ಕೆ.ಆರ್. ಸರ್ಕಲ್, ಜಗನ್ಮೋಹನ ಅರಮನೆ, ಮೃಗಾಲಯದ ಬಳಿ ಅಡ್ಡಾಡುತ್ತಿದ್ದ. ಸರ್ವಿಸ್ ಲಾಡ್ಜ್‌ನಲ್ಲಿ ವಾಸವಿದ್ದ ಸಲೀಂ, ಬೆಳಗ್ಗೆ ಲಾಡ್ಜ್ ಬಿಟ್ಟರೆ ತಡರಾತ್ರಿ ಲಾಡ್ಜ್ ಸೇರುತ್ತಿದ್ದ.
ಉತ್ತರ ಪ್ರದೇಶದಿಂದ ಬಲೂನ್ ಮಾರಲು ನಾಲ್ವರು ಮೈಸೂರಿಗೆ ಬಂದಿದ್ದಾರೆ. ಸ್ಫೋಟದ ಬಳಿಕ ಸಲೀಂ ಜೊತೆಗೆ ಬಂದಿದ್ದ ಉಳಿದವರು ನಾಪತ್ತೆಯಾಗಿದ್ದು, ಇತರರ ನಡೆ ಅನುಮಾನ ಹೆಚ್ಚಿಸಿದೆ. ಷರೀಫ್ ಲಾಡ್ಜ್ ಶೋಧಕ್ಕೆ ಇಳಿದ ಪೊಲೀಸರಿಗೆ ಒಂದು ಸೈಕಲ್ನಲ್ಲಿ ಶಾಲು ಸಿಂಗ್ ಎಂಬ ಹೆಸರಿನ QR ಕೋಡ್ ಪತ್ತೆಯಾಗಿದೆ.
ಮೈಸೂರಿನಲ್ಲಿ ಬಲೂನ್‌ಗೆ ಗಾಳಿ ತುಂಬುವಾಗ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಒಬ್ಬ ಸಾವು, ನಾಲ್ವರಿಗೆ ಗಾಯ
ಮೈಸೂರು ಅರಮನೆ ಹೀಲಿಯಂ ಬ್ಲಾಸ್ಟ್ ಪ್ರಕರಣವನ್ನ ಎನ್‌ಐಎ ಗೆ ವಹಿಸಲು ಚಿಂತನೆ ನಡೆಸಲಾಗಿದೆ. ವಿಶ್ವವಿಖ್ಯಾತ ಅರಮನೆ ಎದುರೇ ಸಿಲಿಂಡರ್ ಬ್ಲಾಸ್ಟ್ ಆಗಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೇಂದ್ರೀಕರಿಸಿದೆ. ಅನೇಕ ಬಲೂನ್ ಮಾರಾಟಗಾರರು ಇದೇ ಲಾಡ್ಜ್‌ನಲ್ಲಿ ತಂಗುತ್ತಿದ್ದರು ಎನ್ನಲಾಗ್ತಿದೆ. ಮೃತ ಸಲೀಂ ಕೂಡ ಷರೀಫ್ ಲಾಡ್ಜ್‌ನಲ್ಲಿ ತಂಗಿದ್ದ. ಸದ್ಯ ಲಾಡ್ಜ್ ಮುಂಭಾಗ ಇನ್ನೂ 3 ಸೈಕಲ್ ನಿಂತಿವೆ. ಬಲೂನ್ ಮಾರಾಟ ಮಾಡಲು ಬಳಸುತ್ತಿದ್ದ ಸೈಕಲ್ ಹಾಗೂ ಲಾಡ್ಜಿನ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.