ಕೆ.ಜೆ.ಲೋಕೇಶ್ ಬಾಬು, ಮೈಸೂರು
ಗ್ರೇಡ್-1 ಮಹಾನಗರ ಪಾಲಿಕೆಗೆ ಅಧಿಸೂಚನೆ ಹೊರಡಿಸಿ ಸುಮ್ಮನಾಗಿರುವ ಸರಕಾರ
ರಾಜ್ಯದಲ್ಲಿ ವೇಗದ ಬೆಳವಣಿಗೆಯ ನಗರಗಳ ಪೈಕಿ ಎರಡನೇ ಸಾಲಿನಲ್ಲಿರುವ ಮೈಸೂರು ನಗರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಖಾತ್ರಿ ಆಗಿದೆಯಾದರೂ, ಸರಕಾರದ ಅಧಿಕೃತ ಮುದ್ರೆ ಇನ್ನೂ ಬಿದ್ದಿಲ್ಲ.
ಗ್ರೇಟರ್ ಮೈಸೂರು ಹೆಸರಿನಲ್ಲಿ ನಗರ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಗೆ ನೀಲನಕ್ಷೆ, ಮೂಲಸೌಕರ್ಯ, ಅಂದಾಜು ವೆಚ್ಚ ಸೇರಿದಂತೆ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸಿದ ಬಳಿಕವೇ ಮೈಸೂರು ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೆ ಏರಿಸಿ ಗ್ರೇಡ್-1 ಮಹಾನಗರ ಪಾಲಿಕೆಯಾಗಿ ರೂಪಿಸಲು ರಾಜ್ಯ ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ನೀಡಲಾಗಿದ್ದ ಅವಧಿಯೂ ಮುಕ್ತಾಯ ವಾಗಿದೆ. ಅದರೆ, ಈ ಕುರಿತು ಸಕಾರದಿಂದ ಈವರೆಗೆ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ.
ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಅಧಿಕೃತ ಮುದ್ರೆ ಒತ್ತಿದರೆ, ಮೈಸೂರು ನಗರದ ಭೌಗೋಳಿಕ ವಿಸ್ತೀರ್ಣ ನಾಲ್ಕು ಪಟ್ಟು ಹೆಚ್ಚಾಗಲಿದೆ. 1995ರ ಅಕ್ಟೋಬರ್ 18ರಂದು ಮೈಸೂರು ಕಸಬಾ, ಬಂಡಿಪಾಳ್ಯ, ಕೊಪ್ಪಲೂರು, ಲಿಂಗಾಂ ಬುಧಿಪಾಳ್ಯ, ದೇವ ನೂರು, ಯರಗನಹಳ್ಳಿ, ನಾಚನಹಳ್ಳಿ, ಚಿಕ್ಕಹರದನಹಳ್ಳಿ, ವಿಜಯಶ್ರೀ ಪುರ ಗ್ರಾಮಗಳನ್ನು ಸಂಪೂರ್ಣವಾಗಿ ಮತ್ತು ಹಿನಕಲ್, ಹಂಚ್ಯಾ, ಹೆಬ್ಬಾಳು, ಮೇಟಗಳ್ಳಿ, ಬೆಲವತ್ತ, ಕೆಸರೆ, ಸಾತಗಳ್ಳಿ, ಆಲನಹಳ್ಳಿ, ಶ್ರೀರಾಂಪುರ, ಬೋಗಾದಿ, ಮಳಲವಾಡಿ ಗ್ರಾಮಗಳ ಭಾಗಶಃ ವ್ಯಾಪ್ತಿಯನ್ನು ಮೈಸೂರು ಮಹಾನಗರ ಪಾಲಿಕೆಗೆ ಸೇರಿಸಲಾಗಿತ್ತು.
ಇದನ್ನೂ ಓದಿ: Mysuru News: ಮೈಸೂರು ಕುರುಬರಹಳ್ಳಿ 24 ಎಕರೆ ಜಮೀನು ವಿವಾದ; ಕಾನೂನು ಕ್ರಮಕ್ಕೆ ಟಿ.ಎಸ್. ಶ್ರೀವತ್ಸ ಆಗ್ರಹ
ಪ್ರಸ್ತುತ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರಕಾರ ಮೈಸೂರು ಸುತ್ತಲಿನ ನಗರ ಹಾಗೂ ಗ್ರಾಮಾಂತರ ಪ್ರದೇಶವನ್ನು ಸೇರಿಸಿ ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೆ ಏರಿಸಿದೆ. ಇದರೊಂದಿಗೆ, 86 ಚದರ ಕಿ.ಮೀ. ಇದ್ದ ಮಹಾನಗರಪಾಲಿಕೆಯ ವ್ಯಾಪ್ತಿ 333.46 ಚ.ಕಿ.ಮೀ.ಗೆ ವಿಸ್ತಾರಗೊಳ್ಳಲಿದೆ. ಈ ವ್ಯಾಪ್ತಿಯಲ್ಲಿ 2011ರ ಜನಗಣತಿ ಪ್ರಕಾರ, 11,19,705 ಜನ ಸಂಖ್ಯೆ ಇತ್ತು. ಆದರೆ, ನೂತನ ಯೋಜನೆಯಿಂದ 2025ರ ಯೋಜಿತ ಜನಸಂಖ್ಯೆ 14,16,671 ಆಗಿದೆ.
ಗೌಪ್ಯತೆಗೆ ಆದ್ಯತೆ: ಯೋಜನೆ ಬಗ್ಗೆ ಜ.8ರಿಂದ ಫೆ.8ರ ವರೆಗೆ ಪೌರಾಡಳಿತ ನಿರ್ದೇಶನಾ ಲಯದ ನಿರ್ದೇಶಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿತ್ತು. ಆದರೆ ಆಕ್ಷೇಪಣೆಗಳ ಸಂಖ್ಯೆ, ವಿವರ, ಸ್ವೀಕರಿಸಿದ ಅಥವಾ ತಿರಸ್ಕರಿಸಿದ ವಿಷಯಗಳ ಬಗ್ಗೆ ಮಾಹಿತಿ ಹೊರ ಬಿದ್ದಿಲ್ಲ.
ವಾರ್ಡ್ ಸಂಖ್ಯೆ ಹೆಚ್ಚಳ: ಮೈಸೂರು ಮಹಾನಗರ ಪಾಲಿಕೆಯಲ್ಲೀಗ 65 ವಾರ್ಡ್ ಇವೆ. 18 ರಿಂದ 20 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ವಿಂಗಡಿಸಬೇಕಿದೆ. ಅದರಂತೆ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ 120 ವಾರ್ಡ್ ರಚನೆಯಾಗಲಿವೆ.
14000 ಕೋಟಿ ಅನುದಾನ ಬೇಕಿದೆ
ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ವಿಶ್ವತ ವರದಿಯಲ್ಲಿ ಗ್ರೇಡ್ -1 ಮಹಾನಗರ ಪಾಲಿಕೆ ರಚನೆಯಾದರೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ 14000 ಕೋಟಿ ರು.ಅನುದಾನ ಬೇಕಾಗಬಹುದು ಎಂದು ಅಂದಾಜಿಸಿದೆ.
ಜ.8ರಂದೇ ಅನುಮೋದನೆ
2025ರ ನವೆಂಬರ್ 27ರಂದು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಮಹಾನಗರಪಾಲಿಕೆ ರಚನೆಗೆ ಅನುಮೋದನೆ ನೀಡಲಾಗಿತ್ತು. ಅದರನ್ವಯ, 2026ರ ಜನವರಿ 8ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಗೆಜೆಟ್ ಪ್ರಕಟಣೆ ಹೊರಬಿದ್ದ ಮರುದಿನದಿಂದ 20 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಫೆ.8ರಂದು ಆಕ್ಷೇಪಣಾ ಸಲ್ಲಿಕೆಯ ಅವಧಿ ಮುಕ್ತಾಯವಾಗಿದೆ. ಅಂದರೆ, ಗ್ರೇಡ್-1 ಮಹಾನಗರಪಾಲಿಕೆ ಘೋಷಣೆಯಷ್ಟೇ ಬಾಕಿ ಉಳಿದಿದೆ.