ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಾಮಿ ವಿವೇಕಾನಂದರ ತತ್ತ್ವ ಉಲ್ಲೇಖಿಸಿ ದೇಶದ ಯುವ ಜನತೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ

Narendra modi: ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ 'ವಿವೇಕ ಸ್ಮಾರಕ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಜನತೆ, ಶಿಕ್ಷಣ ಮತ್ತು ಸಮಾನ ಅವಕಾಶಗಳ ಮಹತ್ವವನ್ನು ಒತ್ತಿ ಹೇಳಿದರು. ಮಾತೃಭಾಷೆಯಲ್ಲಿನ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ, ಮಹಿಳೆಯರಿಗೆ ಎನ್‌ಡಿಎ ಪ್ರವೇಶ, ಸ್ಟಾರ್ಟ್‌ಅಪ್‌ಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರ ಸಾಧನೆಗಳನ್ನು ಶ್ಲಾಘಿಸಿ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಸಕ್ರಿಯ ಭಾಗವಹಿಸುವಿಕೆಗೆ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಮೈಸೂರು, ಆ. 1: ಇತ್ತೀಚಿನ ಸಿಜೆಪಿ (Cockroach Janata Party) ಚಳವಳಿಯ ನಂತರ ಯುವ ಸಮುದಾಯದ (ಜೆನ್‌ ಝಿ) ಚರ್ಚೆ ದೇಶಾದ್ಯಂತ ತೀವ್ರವಾಗಿರುವ ಬೆನ್ನಲ್ಲೇ, ಮೈಸೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi)ತಮ್ಮ ಭಾಷಣದಲ್ಲಿ ಯುವಜನತೆ, ಶಿಕ್ಷಣ ಹಾಗೂ ಶೈಕ್ಷಣಿಕ ಸುಧಾರಣೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮದ (Shri Ramkrishna Ashrama) 'ವಿವೇಕ ಸ್ಮಾರಕ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಅಥವಾ ಲಿಂಗದ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವುದೇ ಭಾರತದ ಅಭಿವೃದ್ಧಿಗೆ ಮೂಲಮಂತ್ರ ಎಂದಿದ್ದಾರೆ.

ಸ್ವಾಮಿ ವಿವೇಕಾನಂದರ ತತ್ತ್ವಗಳನ್ನು ಸ್ಮರಿಸಿದ ಪ್ರಧಾನಿ, "ಶಿಕ್ಷಣ ಮತ್ತು ಅವಕಾಶಗಳಲ್ಲಿ ಯಾವುದೇ ತಾರತಮ್ಯವಿಲ್ಲದಿರುವುದು ಈಗ ಇಡೀ ರಾಷ್ಟ್ರದ ಕನಸಾಗಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಕಲಿಯಲು ಅವಕಾಶ ಮಾಡಿಕೊಡಲಾಗಿದ್ದು, ಇದು ಭಾಷಾ ಆಧಾರಿತ ತಾರತಮ್ಯವನ್ನು ತಡೆಯಲು ನೆರವಾಗಿದೆ. ಅಲ್ಲದೆ, ಎನ್‌ಡಿಎಗೆ ಹೆಣ್ಣುಮಕ್ಕಳ ಸೇರ್ಪಡೆಗೆ ಅವಕಾಶ ಕಲ್ಪಿಸುವ ಮೂಲಕ ಶೈಕ್ಷಣಿಕ ಸಮಾನತೆಯನ್ನು ದೇಶಾದ್ಯಂತ ಸಾಧಿಸಲಾಗುತ್ತಿದೆ" ಎಂದು ಹೇಳಿದರು.

ನರೇಂದ್ರ ಮೋದಿ ಭಾಷಣ:



ಕಳೆದ 12 ವರ್ಷಗಳಲ್ಲಿ ಶೈಕ್ಷಣಿಕ ಮೂಲಸೌಕರ್ಯದ ವಿಸ್ತರಣೆಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ 650ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು, 14,000 ಕಾಲೇಜುಗಳು, 1,40,000ಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳು ಹಾಗೂ 823 ವೈದ್ಯಕೀಯ ಕಾಲೇಜುಗಳು ಕಾರ್ಯಾಚರಿಸುತ್ತಿವೆ ಎಂದರು. ಇದರ ಜತೆಗೆ 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮತ್ತು 14,000ಕ್ಕೂ ಹೆಚ್ಚು ಪಿಎಂ ಶ್ರೀ ಶಾಲೆಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) 21ನೇ ಶತಮಾನದ ನವೀನ ಸವಾಲುಗಳನ್ನು ಎದುರಿಸಲು ಯುವಜನರನ್ನು ಸಜ್ಜುಗೊಳಿಸುತ್ತಿದೆ ಎಂದು ಬಣ್ಣಿಸಿದರು.

ಸಿಜೆಪಿಯಿಂದ ಮತ್ತೆ ಪ್ರತಿಭಟನೆಯ ಬೆದರಿಕೆ: ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಭದ್ರತೆ

ಸ್ಟಾರ್ಟ್‌ಅಪ್‌, ಕೃತಕ ಬುದ್ಧಿಮತ್ತೆ , ಸೆಮಿಕಂಡಕ್ಟರ್ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಯುವಕರ ಪಾತ್ರವನ್ನು ಪ್ರಶಂಸಿಸಿದ ಪ್ರಧಾನಿ, 'ವಿಕ್ರಮ್-1' ರಾಕೆಟ್ ಉಡಾವಣೆ ಮಾಡಿದ 'ಸ್ಕೈರೂಟ್ ಏರೋಸ್ಪೇಸ್' ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷ ಎಂದು ನೆನಪಿಸಿಕೊಂಡರು. ಅಲ್ಲದೆ, ಖಾಸಗಿ ಬಾಹ್ಯಾಕಾಶ ಉಪಕ್ರಮಗಳು ಮತ್ತು ಆವಿಷ್ಕಾರಗಳು ಭಾರತೀಯ ಯುವಕರ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯುತ್ತಿವೆ ಎಂದರು.

ಕೊನೆಯಲ್ಲಿ, 'ಶಿವ ಜ್ಞಾನೇ ಜೀವ ಸೇವಾ' ಎಂಬ ತತ್ತ್ವವನ್ನು ಪ್ರತಿಪಾದಿಸಿದ ಅವರು, ಕ್ರೀಡೆ, ಸ್ವಚ್ಛತೆ, ಜಲ ಸಂರಕ್ಷಣೆ ಹಾಗೂ ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಲ್ಲಿ ಯುವಜನರು ಸಕ್ರಿಯವಾಗಿ ಭಾಗವಹಿಸಿ ದೇಶವನ್ನು ಸತ್ಪಥದಲ್ಲಿ ಮುನ್ನಡೆಸಬೇಕೆಂದು ಕರೆ ನೀಡಿದರು.