ಮೈಸೂರು, ಸೆ. 17: ಗಲ್ಫ್ ದೇಶಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣದ (Telangana) ಇಬ್ಬರು ಯುವಕರು ಜೈಲು ಪಾಲಾಗಿದ್ದಾರೆ. ತೆಲಂಗಾಣದ ಹೈದರಾಬಾದ್ ಹಾಗೂ ಮೈಸೂರು ಮೂಲದ ತಲಾ ಒಬ್ಬರಂತೆ ಇಬ್ಬರನ್ನು ಕ್ರಮವಾಗಿ ಸೌದಿ ಅರೇಬಿಯಾ (Saudi Arabia) ಮತ್ತು ದುಬೈಯಲ್ಲಿ ಬಂಧಿಸಲಾಗಿದೆ. ಸರ್ಕಾರದ ನೆರವಿಗಾಗಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಪ್ರಸ್ತುತ ಕಾನೂನು ಸ್ಥಿತಿಗತಿಯ ಮಾಹಿತಿ ಹಾಗೂ ಬಿಡುಗಡೆಗಾಗಿ ಅವರ ಕುಟುಂಬಸ್ಥರು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾರೆ.
ಹೈದರಾಬಾದ್‌ನ ಯಾಕುತ್‌ಪುರ ನಿವಾಸಿಯಾದ ಮೊಹಮ್ಮದ್ ಅಫ್ರೋಜ್ ಎಂಬ ಯುವಕ ಕಳೆದ ಎರಡು ವರ್ಷಗಳಿಂದ ಸೌದಿಯ ಜಿದ್ದಾದಲ್ಲಿರುವ ಅಲ್-ಶುಮೈಸಿ ಡಿಟೆನ್ಶನ್ ಸೆಂಟರ್‌ನಲ್ಲಿ ಬಂಧಿಯಾಗಿದ್ದಾನೆ. ಆತನ ತಾಯಿ ಜೈಬ್ ಉನ್ನಿಸಾ ನೀಡಿರುವ ಮಾಹಿತಿ ಪ್ರಕಾರ, ಅಫ್ರೋಜ್ 2014ರ ಫೆಬ್ರವರಿಯಲ್ಲಿ ಡ್ರೈವರ್ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ನಂತರ ಅಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅವರನ್ನು ಪೊಲೀಸರು ಯಾವ ಕಾರಣಕ್ಕಾಗಿ ಬಂಧಿಸಿದ್ದಾರೆ ಮತ್ತು ಯಾವ ಪ್ರಕರಣ ದಾಖಲಾಗಿದೆ ಎಂಬ ಯಾವುದೇ ಅಧಿಕೃತ ಮಾಹಿತಿ ಕುಟುಂಬಕ್ಕೆ ಲಭ್ಯವಾಗಿಲ್ಲ.
ಮೈಸೂರು ಮೂಲದ ವ್ಯಕ್ತಿಯೂ ಅರೆಸ್ಟ್
ಪ್ರತ್ಯೇಕ ಪ್ರಕರಣದಲ್ಲಿ, ಕರ್ನಾಟಕದ ಮೈಸೂರಿನ ಸಲ್ಮಾನ್ ಫಾರಿಜ್ ದುಬೈ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಆತನ ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಸಲ್ಮಾನ್ ಫಾರಿಜ್ ಅವರಿಗೆ ಡೆಲಿವರಿ ಕೆಲಸದ ಆಮಿಷ ಒಡ್ಡಲಾಗಿತ್ತು. ಅದನ್ನು ನಂಬಿ ಯುಎಇಗೆ ತೆರಳಿದ್ದರು. ನಂತರ ಜೈನ್ಸ್ ಡೆಲಿವರಿ ಸರ್ವೀಸಸ್ ಎಲ್‌ಎಲ್‌ಸಿ ಸಂಸ್ಥೆಗೆ ಸೇರಿದ್ದರು. ಆದರೆ ಆ ಕಂಪನಿಯು ಸಲ್ಮಾನ್‌ಗೆ ಹಲವು ತಿಂಗಳಿಂದ ಸಂಬಳವನ್ನೇ ನೀಡಿರಲಿಲ್ಲ. ಪಾಸ್‌ಪೋರ್ಟ್ ಅನ್ನು ಸಹ ಮಾಲಕನೇ ತನ್ನ ವಶದಲ್ಲಿ ಇಟ್ಟುಕೊಂಡಿದ್ದನು ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ವಿದೇಶದಲ್ಲಿ ಕೆಲಸದ ಆಮಿಷ ಒಡ್ಡಿ 51 ಜನರಿಗೆ ವಂಚಿಸಿದ ದಂಪತಿ ಬಂಧನ
ನಂತರ ಕುಟುಂಬಸ್ಥರು ಸಲ್ಮಾನ್ ಫಾರಿಜ್ ಜತೆ ಸಂಪರ್ಕವನ್ನು ಕಳೆದುಕೊಂಡರು. ಆ ಬಳಿಕ ದುಬೈ ಪೊಲೀಸರು ಫಾರಿಜ್‌ನನ್ನು ಬಂಧಿಸಿದ್ದಾರೆಂದು ತಿಳಿದುಬಂತು. ಸದ್ಯ ಈ ಇಬ್ಬರು ಎಲ್ಲಿದ್ದಾರೆ, ಅವರ ಆರೋಗ್ಯ ಸ್ಥಿತಿ ಹೇಗಿದೆ ಹಾಗೂ ಕಾನೂನು ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಅವರಿಗೆ ರಾಯಭಾರ ಕಚೇರಿಯ ನೆರವು, ಕಾನೂನು ಸಹಾಯವನ್ನು ಕಲ್ಪಿಸಿಕೊಡುವಂತೆ ಎರಡೂ ಕುಟುಂಬಗಳು ವಿನಂತಿಸಿವೆ.
ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿರುವ ಹೈದರಾಬಾದ್ ಮೂಲದ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ವಕ್ತಾರ ಮತ್ತು ಕಾರ್ಯಕರ್ತ ಅಮ್ಜದ್ ಉಲ್ಲಾ ಖಾನ್, ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿರುವ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ಅಗತ್ಯ ನೆರವು ನೀಡಲು ನಿರ್ದೇಶಿಸುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಆಗ್ರಹಿಸಿದ್ದಾರೆ.
ಯಾವುದೇ ಕಾನೂನು ಅಡೆತಡೆಗಳು ಇಲ್ಲದಿದ್ದಲ್ಲಿ, ಈ ಇಬ್ಬರನ್ನು ತಕ್ಷಣವೇ ಬಿಡುಗಡೆಗೊಳಿಸಿ, ಸ್ವದೇಶಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳಬೇಕು. ಮಾನವೀಯತೆಯ ಆಧಾರದ ಮೇಲೆ ಆಯಾ ದೇಶಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಬೇಕು ಎಂದು ಖಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.