ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ವಂತ ಪಕ್ಷ ಕಟ್ಟಿ 5 ಕ್ಷೇತ್ರ ಗೆಲ್ಲಿ: ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಸವಾಲು

HD Kumaraswamy: ನಿಮ್ಮ ಮಗನನ್ನು ರಾಜಕಾರಣದಲ್ಲಿ ಇಟ್ಟುಕೊಂಡಿರುವ ನಿಮಗೆ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅಹಿಂದ ನಾಯಕ ಎಂದು ಬೀಗುವ ನೀವು ಕಾಂಗ್ರೆಸ್ ಬಿಟ್ಟು ಸ್ವಂತ ಪಕ್ಷ ಐದು ಸೀಟು ಗೆಲ್ಲುವಿರಾ? ಮೊದಲು ಸಿಎಂ ಸಿದ್ದರಾಮಯ್ಯ ಅವರು ಈ ಸವಾಲುಗಳನ್ನು ಸ್ವೀಕರಿಸಲಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸ್ವಂತ ಪಕ್ಷ ಕಟ್ಟಿ 5 ಕ್ಷೇತ್ರ ಗೆಲ್ಲಿ: ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ. -

Profile
Siddalinga Swamy Apr 10, 2026 7:26 PM

ಮೈಸೂರು, ಏ.10: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೆಲ ನಿರ್ದಿಷ್ಟ ಪ್ರಶ್ನೆ, ಸವಾಲುಗಳನ್ನು ಹಾಕಿರುವ ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ (HD Kumaraswamy), ನಮ್ಮನ್ನು ಟೀಕಿಸುವ ಮುನ್ನ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ದಿಶಾ ಸಮಿತಿ ಆರಂಭಕ್ಕೂ ಮುನ್ನ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ನಿಮ್ಮ ಮಗನನ್ನು ರಾಜಕಾರಣದಲ್ಲಿ ಇಟ್ಟುಕೊಂಡಿರುವ ನಿಮಗೆ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅಹಿಂದ ನಾಯಕ ಎಂದು ಬೀಗುವ ನೀವು ಕಾಂಗ್ರೆಸ್ ಬಿಟ್ಟು ಸ್ವಂತ ಪಕ್ಷ ಐದು ಸೀಟು ಗೆಲ್ಲುವಿರಾ? ಮೊದಲು ಸಿದ್ದರಾಮಯ್ಯ ಅವರು ಈ ಸವಾಲುಗಳನ್ನು ಸ್ವೀಕರಿಸಲಿ ಎಂದು ಅವರು ಹೇಳಿದರು. ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡುವುದು ನಿಲ್ಲಿಸಬೇಕು. ಅವರಿಗೆ ಆ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಎಲ್ಲಿದೆ? ಮಗನಿಗೆ ಆಶ್ರಯ ಕಮಿಟಿ ಸದಸ್ಯತ್ವ ನೀಡಿ ಮಗನನ್ನು ಜಿಲ್ಲೆ ನೋಡಿಕೊಳ್ಳಲು ನಾನು ಬಿಟ್ಟಿಲ್ಲ. ನಾನು ಸಿಎಂ ಆಗಿದ್ದಾಗ ನನ್ನ ಮಗನಿಗೆ ಆಶ್ರಯ ಸಮಿತಿ ಸದಸ್ಯನನ್ನಾಗಿ ಮಾಡಿ ಯಾವುದಾದರೂ ಜಿಲ್ಲೆ ನೋಡಿಕೊ ಅಥವಾ ವಸೂಲಿ ಮಾಡು ಎಂದು ಹೇಳಲಿಲ್ಲ ಎಂದು ಅವರು ಕಿಡಿಕಾರಿದರು.

ಅವರ ಮೊದಲ ಮಗ ನಿಧನದ ಬಳಿಕ ಎರಡನೇ ಮಗನಿಗೆ ಆಶ್ರಯ ಕಮಿಟಿಯಲ್ಲಿ ಸದಸ್ಯ ಎಂದು ಮಾಡಿದ್ದಾರೆ. ಅವರ ಎರಡನೇ ಮಗನನ್ನು ರಾಜಕೀಯಕ್ಕೆ ಯಾಕೆ ಕರೆದುಕೊಂಡು ಬಂದರು? ವಸೂಲಿ ಮಾಡೋಕೆ ಅಲ್ಲವೇ? ವಸೂಲಿ ಮಾಡುವುದಕ್ಕೆ ನಾನು ನನ್ನ ಮಗನನ್ನು ಬಿಟ್ಟಿಲ್ಲ. ಅವರ ಮಗ ಈಗ ಎಲ್ಲಾ ಕಡೆ ವಸೂಲಿ ಮಾಡಿಕೊಂಡು ಕೂತಿದ್ದಾರೆ ಎಂದು ಆರೋಪಿಸಿದರು.

58 ಸೀಟು ಗೆದ್ದಿದ್ದು ನನ್ನ ಮತ್ತು ದೇವೇಗೌಡರ ಶ್ರಮದಿಂದ

ನಾನು ಜನತಾದಳದಲ್ಲಿದ್ದಾಗ ಆ ಪಕ್ಷ 58 ಸೀಟು ಗೆದ್ದಿದ್ದು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಆ ಎಲೆಕ್ಷನ್‌ನಲ್ಲಿ ಪಕ್ಷ ಅಷ್ಟು ಸೀಟು ಗೆಲ್ಲಲು ದೇವೇಗೌಡರು ಮತ್ತು ನನ್ನ ಪಾತ್ರವೂ ಸಾಕಷ್ಟಿದೆ. ಇವರ ಪಾತ್ರ ಕೇವಲ ಹತ್ತರಷ್ಟು ಮಾತ್ರ. 1999ರಲ್ಲಿ ಕೂಡ ಇವರೇ ಪಕ್ಷದ ಅಧ್ಯಕ್ಷರಾಗಿದ್ದರು. ಆಗ ಎಷ್ಟು ಸೀಟು ಗೆದ್ದಿದ್ದರು? ಮಹದೇವಪ್ಪ, ಸಿದ್ದರಾಮಯ್ಯ ಇಬ್ಬರು ಮನೆಗೆ ಬಂದು ದೇವೇಗೌಡರ ಮುಂದೆ ಕಣ್ಣೀರು ಹಾಕಿದ್ದರು. ಬಹುಶಃ ಆಗ ದೇವೇಗೌಡರ ಮುಂದೆ ಬಕೆಟ್ ಇದ್ದಿದ್ದರೆ ತುಂಬುತಿತ್ತು. ಸ್ವಲ್ಪ ಹಳೆ ವಿಚಾರಗಳನ್ನು ಸಿದ್ದರಾಮಯ್ಯ ನೆನಪು ಮಾಡಿಕೊಂಡರೆ ಉತ್ತಮ ಎಂದು ಅವರು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಸೋಲು ಗೆಲುವು ಸಹಜ. 1999ರ ಚುನಾವಣೆಯಲ್ಲಿ ಸ್ವತಃ ನಾನು, ದೇವೇಗೌಡರು, ರೇವಣ್ಣ, ಮಹಾದೇವಪ್ಪ, ಸಿದ್ದರಾಮಯ್ಯ ಎಲ್ಲರೂ ಸೋತಿದ್ದೆವು. ಆದರೆ ರಾಜಕೀಯ ಬೇಡ ಎಂದು ನಾನಾಗಲಿ, ದೇವೇಗೌಡರಾಗಲಿ ಎಂದು ಕಣ್ಣೀರು ಹಾಕಿದವರಲ್ಲ. ಆದರೆ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದರು. ಅಂದು ದೇವೇಗೌಡರು ಒಂದೇ ಮಾತು ಹೇಳಿದರು, ಹೆದರುವ ಅವಶ್ಯಕತೆ ಇಲ್ಲ ಪಕ್ಷ ಕಟ್ಟೋಣ ನಡೆಯಿರಿ. ನಾನಿದ್ದೇನೆ ಎಂದು ಧೈರ್ಯ ಹೇಳಿದ್ದರು ಎಂದು ಅಂದಿನ ಪರಿಸ್ಥಿತಿಯನ್ನು ನೆನಪು ಮಾಡಿಕೊಂಡರು.

ಅಹಿಂದ ಹೆಸರಿನಲ್ಲಿ ಪಕ್ಷಕ್ಕೆ ಚೂರಿ ಹಾಕಿದರು

2004ರಲ್ಲಿ ಮಂಡ್ಯ, ರಾಮನಗರ ಎಲ್ಲೂ ಕೂಡ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿಲ್ಲ. ನಾವು ಕೂಡ ಅವರನ್ನು ಕರೆಯಲಿಲ್ಲ. ಅಹಿಂದ ರಚಿಸಿ ದೇವೇಗೌಡರಿಗೆ ಅನ್ಯಾಯ ಮಾಡಿದರು. ಪಕ್ಷದ ಬೆನ್ನಿಗೆ ಚೂರಿ ಹಾಕಿದರು. 2006ರಲ್ಲಿ 200 ಮತಗಳಲ್ಲಿ ಗೆದ್ದಾಗ ಅವರ ಪರಿಸ್ಥಿತಿ ಹೇಗಿತ್ತು ಎಂದು ನೆನಪಿಸಿಕೊಳ್ಳಿ? ಈಗ ಅಧಿಕಾರ ಇದೆ ಎಂದು ಹಳೆಯದನ್ನು ಮರೆತರೆ ಜನ ಕ್ಷಮಿಸುವುದಿಲ್ಲ ಎಂದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾಕೆ ಸೋತರು? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಟೀಕಿಸಿದರು.

ಅಹಿಂದ ಚಾಂಪಿಯನ್‌ಗೆ ಚಾಲೆಂಜ್

ಸಿದ್ದರಾಮಯ್ಯ ಅವರು ಅಹಿಂದ ಚಾಂಪಿಯನ್ ಎಂದು ಎಲ್ಲರೂ ಹೇಳುತ್ತಾರೆ. ಹಾಗಾದ್ರೆ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೊರಬಂದು ಸ್ವಂತ ಪಕ್ಷ ಕಟ್ಟಿ ಐದು ಕ್ಷೇತ್ರ ಗೆದ್ದು ತೋರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು. ಅವರಿಗೆ ಸ್ವಂತ ಪಕ್ಷ ಕಟ್ಟಿ ಸ್ವಂತ ಬಲದ ಮೇಲೆ ಗೆಲ್ಲುವ ಶಕ್ತಿ ಇಲ್ಲ. ಇನ್ನೊಬ್ಬರು ಕಟ್ಟಿರುವ ಪಕ್ಷವನ್ನು ಸೇರಿ 40- 50 ವರ್ಷಗಳಿಂದ ಅಲ್ಲಿ ಕಷ್ಟಪಟ್ಟು ಬೆಳೆದಿರುವ ನಾಯಕರನ್ನು ಮೂಲೆಗುಂಪು ಮಾಡಿ ಇವರು ರಾಜಕೀಯ ಶಕ್ತಿ ಬಳಸಿಕೊಂಡಿದ್ದಾರೆ ಎಂದು ಅವರು ದೂರಿದರು.

ಇಲ್ಲಿ ನಮ್ಮನ್ನು ಬೈಯ್ಯುತ್ತಾರೆ, ಬೇರೆ ರಾಜ್ಯಗಳಲ್ಲಿ ಅಂಗಲಾಚುತ್ತಾರೆ

ಕಾಂಗ್ರೆಸ್ ಪರಿಸ್ಥಿತಿಯನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಸಿದ್ದರಾಮಯ್ಯ ಅವರು ಆ ಪಕ್ಷಕ್ಕೆ ಕೊನೆ ಮೊಳೆ ಹೊಡೆಯುತ್ತಾರೆ. ಇಲ್ಲಿ ನೋಡಿದರೆ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಆದರೆ, ತಮಿಳುನಾಡಿನಲ್ಲಿ ಕ್ಷೇತ್ರಗಳಿಗಾಗಿ ಡಿಎಂಕೆ ಬಳಿ ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಪಕ್ಷ ಅಂತಾರೆ, ಬಿಹಾರದಲ್ಲಿ ಏನಾಯಿತು? ಐದು ಕ್ಷೇತ್ರ ಗೆಲ್ಲಲು ತಿಣುಕಾಡಿದರು. ತಮಿಳುನಾಡಿನಲ್ಲಿ ಡಿಎಂಕೆಯನ್ನು ಕಾಡಿ ಬೇಡಿ ಪಡೆದುಕೊಂಡ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಗತಿಯಿಲ್ಲ. ಅಂತಹ ಪಕ್ಷ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಎಷ್ಟು ಸರಿ? ನಮ್ಮದು ಕರ್ನಾಟಕದಲ್ಲಿ ಸಣ್ಣ ಪಕ್ಷ, ದೊಡ್ಡ ಪಕ್ಷ ಕಾಂಗ್ರೆಸ್ ಕಥೆ ಏನಾಗಿದೆ? ಇಂದು ಕೇಂದ್ರ ಸಚಿವರು ಪ್ರಶ್ನಿಸಿದರು.‌

ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಅವರ ಪಕ್ಷದವರಿಗೆ ಹೊಟ್ಟೆ ಕಿಚ್ಚು

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಕ್ಕೆ ನಮಗೇನು ಹೊಟ್ಟೆಕಿಚ್ಚು ಇಲ್ಲ. ಅವರ ಪಕ್ಷದಲ್ಲೇ ಅನೇಕರಿಗೆ ಹೊಟ್ಟೆ ನೋವು ಇದೆ. ಕೆಲವರು ದಿನ ಬೆಳಗ್ಗೆ ಆದರೆ ಟೈಮ್ ನೋಡಿಕೊಂಡು ಸಮಯ ಬರುತ್ತೆ ಅಂತ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿರೋದು ಅವರ ಪಕ್ಷದ ಕೆಲವರಿಗೆ ವಿಪರೀತ ಹೊಟ್ಟೆಕಿಚ್ಚು ತರಿಸಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಐದು ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಿರುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ನಾನು ಪೂರ್ಣಾವಧಿ ಸಿಎಂ ಎಂದು ಸ್ವತಃ ಅವರೇ ಹೇಳುತ್ತಾರೆ. ಮತ್ತೊಂದು ಕಡೆ ಹೈಕಮಾಂಡ್ ತೀರ್ಮಾನ ಅಂತಾರೆ. ಅವರ ಮಗ ನನ್ನ ತಂದೆಯೇ ಐದು ವರ್ಷ ಸಿಎಂ ಎನ್ನುತ್ತಾರೆ. ಮುಂದೆಯೂ ಅವರೇ ಸಿಎಂ ಅಂತಾರೆ. ಸಿದ್ದರಾಮಯ್ಯ ಹೈ ಕಮಾಂಡ್ ಅನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ. ಯಾವ ಕಾರಣಕ್ಕೂ ಅವರು ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಕೊಡುವ ಪ್ರಶ್ನೆಯು ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಅನಾರೋಗ್ಯಪೀಡಿತ ಮಹಿಳೆಗೆ ನೆರವಾಗಲು ನಂಜನಗೂಡಿಗೆ ಎಚ್‌ಡಿಕೆ ಭೇಟಿ; ಯುವಕನೊಬ್ಬ ಶೇರ್ ಮಾಡಿದ್ದ ವಿಡಿಯೊ ನೋಡಿ ಸ್ಪಂದನೆ

ಸ್ವಾರ್ಥಕ್ಕಾಗಿ ಕನಸು ಕಾಣುವವರಿಗೆ ಭಗವಂತ ಒಲಿಯುವುದಿಲ್ಲ

ಮುಖ್ಯಮಂತ್ರಿ ಸ್ಥಾನದ ಕನಸು ಎಲ್ಲರೂ ಕಾಣಬಹುದು. ತಪ್ಪೇನು ಅಲ್ಲ, ಕನಸು ಕಾಣಲು ಎಲ್ಲರಿಗೂ ದೇವರು ಅವಕಾಶ ಕೊಟ್ಟಿದ್ದಾನೆ. ಭಗವಂತ ಆ ಕನಸನ್ನು ನನಸು ಮಾಡಬೇಕು ಅಷ್ಟೇ. ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇದೆ. ಸ್ವಾರ್ಥಕ್ಕಾಗಿ ಕನಸು ಕಾಣುವವರಿಗೆ ಭಗವಂತ ಒಲಿಯುವುದಿಲ್ಲ. ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ ಎನ್ನುತ್ತಾರೆ. ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಅದು ಆಗಲ್ಲ. ಬಾಯಲ್ಲಿ ಹೇಳಿದಷ್ಟು ಸುಲಭವೂ ಅಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.