ಮೈಸೂರು, ಏ.10: ಅನಾರೋಗ್ಯದಿಂದ ಅನೇಕ ದಿನಗಳಿಂದ ಹಾಸಿಗೆ ಹಿಡಿದಿದ್ದ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಪೂಜಾ (24) ಎಂಬುವವರ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಾಂತ್ವನ ಹೇಳಿದರು. ಈ ವೇಳೆ ಮಹಿಳೆ ಮನವಿಗೆ ಸ್ಪಂದಿಸಿದ ಸಚಿವರು, ಸ್ಥಳದಲ್ಲಿಯೇ ಚಿಕಿತ್ಸೆಗೆ ಧನಸಹಾಯ ಮಾಡಿದ್ದು, ಜತೆಗೆ ವಸತಿ ವ್ಯವಸ್ಥೆ ಮತ್ತು ಆ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕಲ್ಪಿಸುವ ಭರವಸೆ ನೀಡಿದರು.
ಪೂಜಾ ಅವರ ಅನಾರೋಗ್ಯದ ಬಗ್ಗೆ ಯುವಕನೊಬ್ಬ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಈ ವಿಡಿಯೊ ಕುಮಾರಸ್ವಾಮಿ ಅವರಿಗೆ ಮುಟ್ಟುವ ತನಕ ಶೇರ್ ಮಾಡಿ ಎಂದು ಸಾರ್ವಜನಿಕರನ್ನು ವಿನಂತಿ ಮಾಡಿದ್ದ. ಈ ವಿಡಿಯೋವನ್ನು ಗಮನಿಸಿದ್ದ ಕೇಂದ್ರ ಸಚಿವರು ಶುಕ್ರವಾರ ಖುದ್ದು ಅವರ ನಿವಾಸಕ್ಕೆ ತೆರಳಿ ಆರೋಗ್ಯದ ಸಮಸ್ಯೆಯನ್ನು ಆಲಿಸಿ, ನೆರವಿನ ಹಸ್ತ ಚಾಚಿದರು.
ಸರಿಸುಮಾರು ಮುಕ್ಕಾಲು ಗಂಟೆ ಕಾಲ ಪೂಜಾ, ಅವರ ಪತಿ ರವಿ, ಅವರ ತಂದೆ ಕುಮಾರ, ತಾಯಿ ಶೀಲಾ ಅವರೊಂದಿಗೆ ಚರ್ಚಿಸಿದ ಸಚಿವರು, ಕುಟುಂಬಕ್ಕೆ ಧೈರ್ಯ ತುಂಬಿ, ನಿಮ್ಮ ಜತೆ ನಾನಿದ್ದೇನೆ ಎಂದು ತಿಳಿಸಿದರು. ಸಚಿವರು ಮನೆಗೆ ಆಗಮಿಸಿದಾಗ ಇಡೀ ಕುಟುಂಬ ಕಣ್ಣೀರಾಯಿತು. ಪೂಜಾ ಅವರು ಸಚಿವರನ್ನು ಕಂಡು ತೀವ್ರ ಭಾವೋದ್ವಗಕ್ಕೆ ತುತ್ತಾದರು. ಅಲ್ಲದೆ, ಕುಟುಂಬದ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಪಂಚಾಯತ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದರಲ್ಲದೆ, ಪೂಜಾ ಅವರ ಆರೋಗ್ಯದ ಬಗ್ಗೆ ಅವರ ಪೋಷಕರಿಂದ ವಿವರ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು, ಪೂಜಾ ಅವರ ಸಂಕಷ್ಟದ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿದ್ದ ಯುವಕ ಚೇತನ್ ಅವರನ್ನು ಶ್ಲಾಘಿಸಿದರು.
ಪೂಜಾ ಅವರು ಬೆನ್ನಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ತದ ನಂತರ ಆ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಅವರ ಎರಡು ಕಾಲುಗಳು ಸಮಸ್ಯೆಗೆ ತುತ್ತಾಗಿವೆ. ಮೊದಲು ಅವರ ಒಂದು ಕಾಲಿಗೆ ಆಪರೇಷನ್ ಆಗಿತ್ತು. ಅದು ಸರಿ ಹೋಗಲಿಲ್ಲ, ಈಗ ಮತ್ತೊಂದು ಕಾಲಿಗೆ ಆಪರೇಷನ್ ಆಗಿದೆ. ಹಲವಾರು ತಿಂಗಳಿನಿಂದ ಪೂಜಾ ಅವರು ಹಾಸಿಗೆ ಹಿಡಿದಿದ್ದಾರೆ. ಅವರಿಗೆ ನಡೆಯಲು, ಎದ್ದು ಓಡಾಡಲು ಸಾಧ್ಯವಿಲ್ಲ. ಕುಟುಂಬ ತೀವ್ರ ಆರ್ಥಿಕ ಕಷ್ಟದಿಂದ ಬಳಲುತ್ತಿದೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ ಪೂಜಾ ಅವರಿಗೆ ಗುಣಮುಖ ಆಗಿಲ್ಲ. ಹುಲ್ಲಳ್ಳಿ ಗ್ರಾಮದಲ್ಲಿ ಸ್ವಂತ ಸೂರು ಇಲ್ಲದೆ ಕಷ್ಟಪಡುತ್ತಿರುವ ಕುಟುಂಬದ ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದರು.
ಅಲ್ಲದೆ, ಮಗಳಿಗೆ ಚಿಕಿತ್ಸೆ ಕೊಡಿಸಲು ಸ್ವಂತ ಮನೆಯನ್ನು ಮತ್ತು ಇದ್ದ ಅಲ್ಪಸ್ವಲ್ಪ ಭೂಮಿಯನ್ನು ತಂದೆ ಮಾಡಿಕೊಂಡಿದ್ದಾರೆ. ಈಗ ವಾಸ ಇರುವ ಬಾಡಿಗೆ ಮನೆಗೆ ಬಾಡಿಗೆಯನ್ನು ಕಟ್ಟಲಾಗದೇ ಕುಟುಂಬ ಕಷ್ಟದಲ್ಲಿದೆ. ಅಲ್ಲದೆ, ಪತಿ ರವಿ ಕೂಡ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಅವರಿಗೂ ದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಅವರ ಮನವಿಗೆ ಮರುಗಿದ ಸಚಿವರು, ಸ್ಥಳದಲ್ಲಿಯೇ ಚಿಕಿತ್ಸೆಗೆ ಧನಸಹಾಯ ಮಾಡಿದರು. ಜತೆಗೆ ವಸತಿ ವ್ಯವಸ್ಥೆ ಮತ್ತು ಆ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕಲ್ಪಿಸುವ ಭರವಸೆ ನೀಡಿದರು. ಸ್ಥಳದಲ್ಲೇ ಇದ್ದ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಮಹದೇವ್ ಮತ್ತು ಅಶ್ವಿನ್ ಅವರಿಗೆ ಜವಾಬ್ದಾರಿ ವಹಿಸಿದರು.
ಏರ್‌ಪೋರ್ಟ್ ಮಾದರಿಯಲ್ಲಿ ಮಂಡ್ಯ ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮ: ಎಚ್.ಡಿ.ಕುಮಾರಸ್ವಾಮಿ
ಚಾಮುಂಡಿ ಬೆಟ್ಟ ಮತ್ತು ನಂಜನಗೂಡಿಗೆ ತೆರಳಿ ಪೂಜೆ ಸಲ್ಲಿಸಿದ ಸಚಿವರು
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಬೆಳಗ್ಗೆ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು. ತದನಂತರ ನಂಜನಗೂಡಿಗೆ ತೆರಳಿದ ಅವರು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಾಡಿಗೆ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಲಿ ಎಂದು ಅವರು ಪ್ರಾರ್ಥಿಸಿದರು.